19 ಕೋಟಿ ನೀಡಿ ಹೋರ್ಮುಜ್ ಮೂಲಕ ಹೋಗಿ; ಅಮೆರಿಕದ 48 ಗಂಟೆಗಳ ಬೆದರಿಕೆ ಬೆನ್ನಲ್ಲೇ ಈ ಕ್ರಮ
ಯುದ್ಧಪೀಡಿತ ಹೋರ್ಮುಜ್ ಜಲಸಂಧಿ ಮೂಲಕ ಸಾಗುವ ವಾಣಿಜ್ಯ ಹಡಗುಗಳಿಂದ 18.8 ಕೋಟಿ ರು. ಶುಲ್ಕ ವಸೂಲಿ ಮಾಡಲು ಇರಾನ್ ನಿರ್ಧರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯ ಬೆನ್ನಲ್ಲೇ ಈ ಕ್ರಮಕ್ಕೆ ಮುಂದಾಗಿದೆ.

ಹೋರ್ಮುಜ್ ಜಲಸಂಧಿ
ಯುದ್ಧಪೀಡಿತ ಹೋರ್ಮುಜ್ ಜಲಸಂಧಿ ಮೂಲಕ ಹಾದು ಹೋಗುವ ಕೆಲ ವಾಣಿಜ್ಯ ಹಡಗುಗಳಿಂದ 18.8 ಕೋಟಿ ರು. ಶುಲ್ಕ ವಸೂಲಿ ಮಾಡಲು ಇರಾನ್ ನಿರ್ಧರಿಸಿದೆ. ಈ ಮೂಲಕ ಈ ಅಂತಾರಾಷ್ಟ್ರೀಯ ಹಡಗುಮಾರ್ಗದ ಮೇಲೆ ತನ್ನ ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸಲು ಇರಾನ್ ಮುಂದಾಗಿದೆ.
ಶುಲ್ಕ ವಸೂಲಿ
‘ಯುದ್ಧ ಅಂದ ಮೇಲೆ ಅದಕ್ಕೊಂದು ಬೆಲೆ ಇದ್ದೇ ಇದೆ. ಹೀಗಾಗಿ ನಾವು ಸಹಜವಾಗಿಯೇ ಈ ರೀತಿ ಶುಲ್ಕ ವಸೂಲಿಗೆ ಮುಂದಾಗಿದ್ದೇವೆ. ಹೊರ್ಮುಜ್ ಜಲಸಂಧಿ ಮೂಲಕ ಹಾದುಹೋಗುವ ಹಡಗುಗಳಿಂದ ಶುಲ್ಕ ವಸೂಲಿ ಮಾಡುವ ಅನಿವಾರ್ಯತೆ ಇದೆ. ಇದು ಈ ಜಲಸಂಧಿ ಮೇಲೆ ಇಸ್ಲಾಮಿಕ್ ರಿಪಬ್ಲಿಕ್‌ನ ಹಿಡಿತ ತೋರಿಸುತ್ತದೆ’ ಎಂದು ಇರಾನ್ ಸಂಸದ, ಭದ್ರತಾ ಸಮಿತಿ ಸದಸ್ಯ ಅಲ್ಲಾದ್ದೀನ್ ಬೊರೌಜೊದಿ ಅವರು ದೇಶದ ಸರ್ಕಾರಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹಡಗುಗಳ ಸಂಚಾರ
‘ಹೋರ್ಮುಜ್ ಜಲಸಂಧಿಯನ್ನು 48 ಗಂಟೆಯೊಳಗೆ ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಬೇಕು. ತಪ್ಪಿದಲ್ಲಿ ಇರಾನ್‌ನ ವಿದ್ಯುತ್ ಕೇಂದ್ರಗಳ ಮೇಲೆ ದಾಳಿ ನಡೆಸಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂಥದ್ದೊಂದು ಕ್ರಮಕ್ಕೆ ಇರಾನ್ ಮುಂದಾಗಿದೆ.
ತಿರುಗೇಟು
ಟ್ರಂಪ್ ಬೆದರಿಕೆ ಕುರಿತು ಪ್ರತಿಕ್ರಿಯಿಸಿದ ಅಲ್ಲಾದ್ದೀನ್, ಇಸ್ರೇಲ್‌ನ ವಿದ್ಯುತ್ ಮೂಲಸೌಲಭ್ಯಗಳೂ ನಮ್ಮ ದಾಳಿ ವ್ಯಾಪ್ತಿಯಲ್ಲೇ ಇವೆ. ಒಂದು ವೇಳೆ ಅಮೆರಿಕ ನಮ್ಮ ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸಿದರೆ ನಾವು ಅವರ ವಿದ್ಯುತ್ ಘಟಕಗಳನ್ನು ಒಂದೇ ದಿನದಲ್ಲಿ ನಾಶ ಮಾಡಲಿದ್ದೇವೆ’ ಎಂದು ತಿರುಗೇಟು ನೀಡಿದ್ದಾರೆ.
ಅಧ್ಯಕ್ಷ ಮೊಸೂದ್ ಪೆಜೆಷ್ಕಿಯಾನ್
ಈ ನಡುವೆ ಟ್ರಂಪ್ ಬೆದರಿಕೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಇರಾನ್ ಅಧ್ಯಕ್ಷ ಮೊಸೂದ್ ಪೆಜೆಷ್ಕಿಯಾನ್, ‘ಹೋರ್ಮುಜ್ ಜಲಸಂಧಿಯು ನಮ್ಮ ಮೇಲಿನ ದಾಳಿಕೋರರು ಹೊರತುಪಡಿಸಿ ಉಳಿದೆಲ್ಲರಿಗೂ ಮುಕ್ತವಾಗಿದೆ. ‘ಇರಾನ್ ಅನ್ನು ಭೂಪಟದಿಂದಲೇ ಅಳಿಸಿಹಾಕಬಹುದೆನ್ನುವುದು ಕನಸು. ಭಯೋತ್ಪಾದನೆ ಹಾಗೂ ಬೆದರಿಕೆಗಳು ನಮ್ಮ ಏಕತೆಯನ್ನು ಮತ್ತಷ್ಟು ದೃಢಗೊಳಿಸಿವೆ. ನಾವು ಹುಚ್ಚು ಬೆದರಿಕೆಗಳನ್ನು ರಣರಂಗದಲ್ಲೇ ಎದುರಿಸಲಿದ್ದೇವೆ’ ಎಂದು ಪೋಸ್ಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

