ಕೋಣೆಯಲ್ಲಿ ಹಣ್ಣು ತಿಂದಿದ್ದಕ್ಕೆ ಯುವತಿಯರಿಗೆ 13 ಸಾವಿರ ದಂಡ ವಿಧಿಸಿದ ಹೋಟೆಲ್ ಸಿಬ್ಬಂದಿ
ಹೋಟೆಲ್‌ನಲ್ಲಿ ಈ ಹಣ್ಣುಗಳನ್ನು ತಿಂದ ಪ್ರವಾಸಿ ಯುವತಿಯರಿಗೆ ₹13,000 ದಂಡ ವಿಧಿಸಲಾಗಿದೆ. ಈ ಘಟನೆಯ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಿಂಗಾಪುರಕ್ಕೆ ಭೇಟಿ ನೀಡಿದ ಚೀನೀ ಪ್ರವಾಸಿಗರಿಗೆ ಹೋಟೆಲ್ ಸಿಬ್ಬಂದಿ 200 ಸಿಂಗಾಪುರ ಡಾಲರ್ ದಂಡ ವಿಧಿಸಿದ್ದಾರೆ. ದಂಡದ ಮೊತ್ತ ಭಾರತೀಯ ರೂಪಾಯಿಗಳಲ್ಲಿ ಸುಮಾರು ₹13,000 ಆಗಿದೆ. ಆದರೆ, ದಂಡ ವಿಧಿಸಿದ್ದೇಕೆ ಅಂತ ತಿಳಿದಾಗ ಆಶ್ಚರ್ಯವಾಗುತ್ತದೆ.
ಚೀನಾ ಪ್ರವಾಸಿಗರು ಡುರಿಯನ್ ಹಣ್ಣನ್ನು ಹೋಟೆಲ್‌ಗೆ ತಂದಿದ್ದಕ್ಕೆ ದಂಡ ವಿಧಿಸಲಾಗಿದೆ. ಈ ಹಣ್ಣನ್ನು ತರುವುದು ಹೋಟೆಲ್‌ನ ನಿಯಮ ಉಲ್ಲಂಘನೆ ಎಂದು ಹೇಳಿ ದಂಡ ವಿಧಿಸಲಾಗಿದೆ. ಈ ಹಣ್ಣು ತೀವ್ರವಾದ ವಾಸನೆಗೆ ಹೆಸರುವಾಸಿಯಾಗಿದೆ. ತಮಗೆ ದಂಡ ವಿಧಿಸಿದ್ದರ ಬಗ್ಗೆ ಚೀನಾ ಯುವತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಿಂಗಾಪುರಕ್ಕೆ ಭೇಟಿ ನೀಡಿದ್ದಾಗ ಯುವತಿ ಮತ್ತು ಆಕೆಯ ಸ್ನೇಹಿತ ರಸ್ತೆಬದಿಯ ಅಂಗಡಿಗೆ ಹೋಗಿದ್ದರು. ಅಲ್ಲಿ ಕುಳಿತು ತಿನ್ನಲು ಸಾಧ್ಯವಾಗದ ಕಾರಣ, ಒಂದು ಬಾಕ್ಸ್‌ನಲ್ಲಿ ಡುರಿಯನ್ ಹಣ್ಣನ್ನು ಖರೀದಿಸಿ ಹೋಟೆಲ್‌ಗೆ ತೆಗೆದುಕೊಂಡು ಬಂದಿದ್ದಾರೆ. ಹೋಟೆಲ್‌ನಲ್ಲಿ ಆರಾಮವಾಗಿ ತಿನ್ನಬಹುದು ಎಂದು ಇಬ್ಬರೂ ಭಾವಿಸಿದ್ದರು.
ಹೋಟೆಲ್‌ಗೆ ಹೋಗಲು ಕಾರಿನಲ್ಲಿ ಹತ್ತಿದ ತಕ್ಷಣ, ಡುರಿಯನ್ ಹಣ್ಣಿನ (Durian Fruit) ತೀವ್ರ ವಾಸನೆ ಬಾಕ್ಸ್‌ನಿಂದ ಹೊರಬರಲು ಪ್ರಾರಂಭಿಸಿತು. ಚಾಲಕ ಪ್ರತಿಕ್ರಿಯಿಸಬಹುದು ಎಂದು ಭಾವಿಸಿ ಅವರು ಅದನ್ನು ಮತ್ತೆ ಪ್ಯಾಕ್ ಮಾಡಿದ್ದಾರೆ. ನಂತರ, ಇಬ್ಬರೂ ರೂಮಿಗೆ ಹೋಗಿ ಖುಷಿಯಿಂದ ಡುರಿಯನ್ ಹಣ್ಣು ತಿಂದಿದ್ದಾರೆ.
ಹಣ್ಣು ತಿಂದ ಬಳಿಕ ಇಬ್ಬರು ಹೋಟೆಲ್‌ನಿಂದ ಹೊರಗೆ ಹೋಗಿದ್ದಾರೆ. ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದಾಗ ಇಬ್ಬರಿಗೂ ಕಾಗದವೊಂದನ್ನು ನೀಡಲಾಗಿದೆ. ಡುರಿಯನ್ ಹಣ್ಣಿನ ವಾಸನೆಯಿಂದಾಗಿ ರೂಮಿನಲ್ಲಿ ಪ್ರೊಫೆಷನಲ್ ಕ್ಲೀನಿಂಗ್ ಅಗತ್ಯವಿದ್ದು, ದಂಡ ವಿಧಿಸಲಾಗುವುದು ಎಂದು ಅದರಲ್ಲಿ ಬರೆಯಲಾಗಿತ್ತು.
ಯುವತಿ ಹೋಟೆಲ್ ಸಿಬ್ಬಂದಿಯೊಂದಿಗೆ ದಂಡದ ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉದ್ದೇಶಪೂರ್ವಕವಾಗಿ ತಾವು ಹೀಗೆ ಮಾಡಿಲ್ಲ. ಹೋಟೆಲ್ ನಿಯಮಗಳ ಬಗ್ಗೆ ತಿಳಿದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಿಯಮ ಉಲ್ಲಂಘನೆ ಹಿನ್ನೆಲೆ ದಂಡ ಪಾವತಿಸಬೇಕಾಯ್ತು.
ಹೋಟೆಲ್‌ಗೆ ಎಂಟ್ರಿ ಕೊಡುವಾಗ ಅಲ್ಲಿನ ನಿಯಮಗಳನ್ನು ತಿಳಿದುಕೊಳ್ಳಬೇಕಾಗಿತ್ತು. ಯಾವುದೇ ಹೋಟೆಲ್ ಅಥವಾ ದೇಶಕ್ಕೆ ಭೇಟಿ ನೀಡಿದಾಗ ನಾವು ಸಹ ಅಲ್ಲಿಯ ನಿಯಮಗಳನ್ನು ಪಾಲನೆ ಮಾಡಬೇಕು. ನನ್ನ ತಪ್ಪಿನಿಂದ ದಂಡ ಪಾವತಿಸಿದೆ. ಸಿಂಗಾಪುರಕ್ಕೆ ಬರುವ ಪ್ರವಾಸಿಗರು ಈ ಹಣ್ಣಿನ ಬಗ್ಗೆ ಎಚ್ಚರಿಕೆಯಿಂದಿರುವಂತೆ ಚೀನಾ ಯುವತಿ ಸಲಹೆ ನೀಡಿದ್ದಾಳೆ. ಡುರಿಯನ್ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ದುಬಾರಿಯಾಗಿದ್ದರೂ, ತೀವ್ರವಾದ ವಾಸನೆಗೆ ಹೆಸರುವಾಸಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ