- Home
- News
- World News
- ಕುತೂಹಲಕ್ಕೆ ಮಾಡಿಸಿದ DNA ಪರೀಕ್ಷೆ ಬದುಕಿಗೆ ತಂತು ಆಘಾತ.. ಇದು 38 ವರ್ಷಗಳ ಹಿಂದಿನ ಅದಲು-ಬದಲು ಕಥೆ
ಕುತೂಹಲಕ್ಕೆ ಮಾಡಿಸಿದ DNA ಪರೀಕ್ಷೆ ಬದುಕಿಗೆ ತಂತು ಆಘಾತ.. ಇದು 38 ವರ್ಷಗಳ ಹಿಂದಿನ ಅದಲು-ಬದಲು ಕಥೆ
ಆಸ್ಪತ್ರೆ ಮಾಡಿದ ಯಡವಟ್ಟಿಗೆ ಎರಡು ಶಿಶುಗಳು ತಮ್ಮ ನಿಜವಾದ ತಾಯಿಯ ಮಡಿಲಿನಿಂದ ದೂರವಾಗಿದ್ದವು. ಒಂದು ಮಗುವಿನ 38 ವರ್ಷಗಳ ಮೌನ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಆದರೆ, ರಕ್ತದ ನಂಟಿಗಿಂತಲೂ ಬೆಳೆಸಿದ ಪ್ರೀತಿಯೇ ಸೋತು ಹೋಗುತ್ತಿದೆಯೇ? ಸಿನಿಮಾ ಕಥೆಯನ್ನೂ ಮೀರಿಸುವಂತಿದೆ ಈ 'ಅದಲು-ಬದಲು' ಕಥೆ!

ಆತ್ಮವನ್ನೇ ಕಲಕಿದ ಮಹಾ ದುರಂತ
ಹೆತ್ತ ಮಗುವನ್ನು ಎದೆಗಪ್ಪಿಕೊಂಡಾಗ ಆ ತಾಯಿಗೆ ಜಗತ್ತನ್ನೇ ಗೆದ್ದ ಸಂಭ್ರಮ. 38 ವರ್ಷಗಳ ಕಾಲ ಆ ಮಗನ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ, ಅವನ ನಗು-ಅಳುವಿನಲ್ಲಿ ತನ್ನನ್ನು ತಾನು ಮರೆತು, 'ಇವನೇ ನನ್ನ ರಕ್ತ' ಎಂದು ನಂಬಿದ ಪೋಷಕರಿಗೆ ಒಂದೇ ಒಂದು ವರದಿ ಇಡೀ ಜೀವನವನ್ನೇ ಪ್ರಶ್ನಿಸುವಂತೆ ಮಾಡಿದೆ. ಇದು ಅಮೆರಿಕದ ನಾರ್ತ್ ಡಕೋಟಾದಲ್ಲಿ ನಡೆದ ಕೇವಲ ಸುದ್ದಿಯಲ್ಲ, ಎರಡು ಕುಟುಂಬಗಳ ಆತ್ಮವನ್ನೇ ಕಲಕಿದ ಮಹಾ ದುರಂತ!
ಬದುಕನ್ನೇ ಬದಲಿಸಿದ ಆ ಒಂದು ದಿನ
1988ರ ಜನವರಿ 26. ಇಡೀ ಜಗತ್ತು ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ, ಇತ್ತ ಆಸ್ಪತ್ರೆಯೊಂದರ ಸಣ್ಣ ನಿರ್ಲಕ್ಷ್ಯ ಇಬ್ಬರು ಹಸುಗೂಸುಗಳ ಭವಿಷ್ಯವನ್ನೇ ಅದಲು-ಬದಲು ಮಾಡಿತ್ತು. ಕೈಲ್ ಬೈಲಿನ್ ಮತ್ತು ಜೆರೆಮಿ ಮಾರಿಸನ್ ಎಂಬ ಇಬ್ಬರು ಗಂಡು ಮಕ್ಕಳು ಜನಿಸಿದ ಕೆಲವೇ ಗಂಟೆಗಳಲ್ಲಿ ತಮ್ಮ ಅಸಲಿ ತಾಯಿಯ ಮಡಿಲು ಬಿಟ್ಟು ಬೇರೊಬ್ಬರ ಮನೆ ಸೇರಿದ್ದರು.
36 ವರ್ಷಗಳ ಕಾಲ ಕಾಡಿದ 'ಅಪರಿಚಿತ' ಭಾವನೆ
ಜೇರೆಮಿ ಮಾರಿಸನ್ ಹೇಳುವ ಮಾತುಗಳು ಎಂತಹವರ ಕಣ್ಣಲ್ಲೂ ನೀರು ತರಿಸುತ್ತವೆ. ನಮ್ಮ ಮನೆಯಲ್ಲಿ ಎಲ್ಲರ ಕೂದಲು ಕಂದು ಬಣ್ಣದಲ್ಲಿದ್ದರೆ, ನನ್ನದು ಮಾತ್ರ ಹೊಂಬಣ್ಣ. ಆ ಕುಟುಂಬದಲ್ಲಿ ನಾನು ಎಂದು ಒಬ್ಬನೇ ಎದ್ದು ಕಾಣುತ್ತಿದ್ದೆ. ಎಲ್ಲೋ ಒಂದು ಕಡೆ ನಾನು ಈ ಕುಟುಂಬಕ್ಕೆ ಸೇರಿದವನಲ್ಲವೇ? ಎಂಬ ಸಣ್ಣ ಸಂಶಯ ನನ್ನನ್ನು ಸದಾ ಕಾಡುತ್ತಿತ್ತು.
ತನ್ನನ್ನು ಸಾಕಿದ ಪೋಷಕರು ತೋರಿಸಿದ ಪ್ರೀತಿ ಆ ಅನುಮಾನವನ್ನು ಹತ್ತಿಕ್ಕಿತ್ತು. ಇಂದು ಸತ್ಯ ಬಯಲಾದಾಗ ಜೆರೆಮಿ ಅನುಭವಿಸುತ್ತಿರುವ ನೋವು ಅತೀಂದ್ರಿಯ. ನನ್ನ ಅಸಲಿ ಅಣ್ಣನ ಜೊತೆ ನಾನು ಕೃಷಿ ಮಾಡುತ್ತಾ ಇರಬೇಕಿತ್ತು, ಆದರೆ ಇಂದು ನಾನು ಎಲ್ಲೋ ಇದ್ದೇನೆ ಎಂಬ ಹಳಹಳಿಕೆ ಅವರನ್ನು ಕೊರೆಯುತ್ತಿದೆ.
ಸಾಕಿ ಬೆಳೆಸಿದ ಪ್ರೀತಿಯೋ? ರಕ್ತದ ಸಂಬಂಧವೋ?
38 ವರ್ಷಗಳ ಕಾಲ ಯಾರನ್ನು 'ಮಗ' ಎಂದು ಕರೆದರೋ, ಯಾರ ಮೊದಲ ಅಳು ಕೇಳಿ ಸಂಭ್ರಮಿಸಿದರೋ, ಯಾರ ಮೊದಲ ಹೆಜ್ಜೆಗೆ ಬೆರಳು ಕೊಟ್ಟರೋ.. ಇಂದು ಅವರು ತಮ್ಮ ರಕ್ತವಲ್ಲ ಎಂದು ತಿಳಿದಾಗ ಆ ನೆನಪುಗಳೆಲ್ಲವೂ ಸುಳ್ಳೆನಿಸುತ್ತವೆಯೇ? ಖಂಡಿತ ಇಲ್ಲ. ಹೃದಯಕ್ಕೆ ರಕ್ತದ ಗುಂಪು ಗೊತ್ತಿಲ್ಲ, ಅದಕ್ಕೆ ಗೊತ್ತಿರುವುದು ಕೇವಲ ಪ್ರೀತಿ ಮಾತ್ರ. ಈಗ ಅಚಾನಕ್ ಆಗಿ ಎದುರು ನಿಂತಿರುವ 'ಅಸಲಿ ಮಗ' ಪೋಷಕರಿಗೆ ಒಬ್ಬ ಅಪರಿಚಿತನಂತೆ ಕಾಣುತ್ತಿದ್ದಾನೆ. ಅವನೂ ಇವರದ್ದೇ ರಕ್ತ, ಅವರದ್ದೇ ಮುಖಚಹರೆ ಹೊಂದಿದ್ದಾನೆ. ಆದರೆ 36 ವರ್ಷಗಳ ಶೂನ್ಯವನ್ನು ತುಂಬುವುದು ಹೇಗೆ? ಅವನ ಬಾಲ್ಯವನ್ನು ನೋಡಲಾಗದ ಕೊರಗು, ಅವನು ಬೆಳೆದ ಹಾದಿಯಲ್ಲಿ ಜೊತೆಗಿರಲಾಗದ ನೋವು ಆ ಪೋಷಕರನ್ನು ಜೀವಂತವಾಗಿ ದಹಿಸುತ್ತಿದೆ.
ಕಾನೂನು ಸಮರ ಮತ್ತು ಮೌನ ವೇದನೆ
ತಮ್ಮ ಬದುಕಿನ ಅಮೂಲ್ಯ 36 ವರ್ಷಗಳನ್ನು ಕಸಿದುಕೊಂಡ ಆಸ್ಪತ್ರೆಯ ವಿರುದ್ಧ ಈ ಎರಡೂ ಕುಟುಂಬಗಳು ಈಗ ಒಂದಾಗಿವೆ. ಹಣದ ಪರಿಹಾರ ಸಿಗಬಹುದು, ಆದರೆ ಕಳೆದುಹೋದ ಆ ಸುಂದರ ಕ್ಷಣಗಳನ್ನು ಮರಳಿ ತರಲು ಸಾಧ್ಯವೇ? ಈಗ ಎರಡೂ ಕುಟುಂಬಗಳು ಪರಸ್ಪರ ಭೇಟಿಯಾಗುತ್ತಿವೆ. ಅದೊಂದು ವಿಚಿತ್ರ ಸ್ಥಿತಿ..
ಯಾಕೆಂದರೆ..
ರಕ್ತದ ಸಂಬಂಧ ಕರೆಯುತ್ತಿದೆ, ಆದರೆ ಬೆಳೆಸಿದ ಮಮತೆ ತಡೆಯುತ್ತಿದೆ. ಕೈಲ್ ಮತ್ತು ಜೆರೆಮಿ ಇಬ್ಬರಿಗೂ ಈಗ ಇಬ್ಬಿಬ್ಬರು ಅಪ್ಪ-ಅಮ್ಮಂದಿರು! ಸಮಾಜಕ್ಕೆ ಇದು ಕೇವಲ ಒಂದು ಸುದ್ದಿ ಅಥವಾ ಅದ್ಭುತ ಎನಿಸಬಹುದು. ಆದರೆ ಆ ತಾಯಂದಿರಿಗೆ ಕೇಳಿ ನೋಡಿ, ಅವರು ಇಂದಿಗೂ ತಮ್ಮ ಮಡಿಲಲ್ಲಿ ಬೆಳೆದ ಮಗನನ್ನೇ ನನ್ನವನು ಎಂದು ಗಟ್ಟಿಯಾಗಿ ಅಪ್ಪಿಕೊಳ್ಳಲು ಬಯಸುತ್ತಿದ್ದಾರೆ. ಯಾಕೆಂದರೆ, ರಕ್ತದ ಸಂಬಂಧಕ್ಕಿಂತಲೂ ಬೆಳೆಸಿದ ಮಮತೆ ಯಾವಾಗಲೂ ಮಿಗಿಲಾಗಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

