ಸೊಸೆ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡ ಡೋನಾಲ್ಡ್ ಟ್ರಂಪ್‌ಗೆ ಮತ್ತೆ ನಿಷೇಧ!
ಕ್ಯಾಪಿಟಲ್ ಹಿಲ್ ಗಲಭೆ ಬೆನ್ನಲ್ಲೇ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷೇಧಿಸಲಾಗಿತ್ತು. ಇದೀಗ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣ ಬಳಸಲು ಯತ್ನಿಸಿದ ಟ್ರಂಪ್‌ಗೆ ಮತ್ತೆ ನಿಷೇಧ ಹೇರಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಅಮೇರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೇಲೆ ಫೇಸ್‌ಬುಕ್, ಟ್ವಿಟರ್ ಹೇರಿರುವ ನಿರ್ಬಂಧವನ್ನು ಮತ್ತಷ್ಟು ಕಠಿಣಗೊಳಿಸಿದೆ. ಈ ಮೂಲಕ ಟ್ರಂಪ್ ಇನ್ನೆಂದು ಸಾಮಾಜಿಕ ಜಾಲತಾಣ ಬಳಕೆ ಮಾಡುವ ಸಾಧ್ಯತೆಗಳು ಕಾಣಿಸುತ್ತಿಲ್ಲ.
ಸೊಸೆಯ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡ ಟ್ರಂಪ್‌ಗೆ ಮತ್ತೆ ನಿರ್ಬಂಧ ಹೇರಲಾಗಿದೆ. ಇಷ್ಟೇ ಅಲ್ಲ ಸೊಸೆಗೆ ನೊಟೀಸ್ ನೀಡುವ ಮೂಲಕ ಟ್ರಂಪ್ ವಿರುದ್ಧದ ನಿಲುವನ್ನು ಮತ್ತಷ್ಟು ಕಠಿಣಗೊಳಿಸಿದೆ.
ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ವೇಳೆ ನಡೆದ ಪ್ರತಿಭಟನೆ ಹಾಗೂ ಹಿಂಸೆಯನ್ನು ಪ್ರಚೋದಿಸುವ ಟ್ವೀಟ್ ಹಾಗೂ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಟ್ವಿಟರ್, ಫೇಸ್‌ಬುಕ್ ಟ್ರಂಪ್ ಖಾತೆಯನ್ನು ಬ್ಲಾಕ್ ಮಾಡಿತ್ತು.
ಗಲಭೆ, ಹಿಂಸಾಚಾರ ಬಳಿಕ ಅಮೇರಿದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಟ್ರಂಪ್ ಸಾಮಾಜಿಕ ಜಾಲತಾಣದಿಂದ ಅನಿವಾರ್ಯವಾಗಿ ದೂರಉಳಿಯಬೇಕಾಯಿತು. ಇದೀಗ ಸೊಸೆ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡು ಮತ್ತೆ ಮುಖಭಂಗಕ್ಕೆ ಈಡಾಗಿದ್ದಾರೆ.
ಟ್ರಂಪ್ ಪುತ್ರ ಎರಿಕ್ ಪತ್ನಿ ಲಾರಾ ಟ್ರಂಪ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಡೋನಾಲ್ಡ್ ಟ್ರಂಪ್ ಸಂದರ್ಶನದ ವಿಡಿಯೋ ತುಣುಕನ್ನು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಮಾಡಿದ ಬೆನ್ನಲ್ಲೇ ಲಾರಾ ಟ್ರಂಪ್ ಇ ಮೇಲ್‌ಗೆ ಫೇಸ್‌ಬುಕ್ ನೊಟೀಸ್ ನೀಡಿದೆ. ನೀವು ಪೋಸ್ಟ್ ಮಾಡಿದ ವಿಡಿಯೋಗಳನ್ನು ತೆಗೆದುಹಾಕಲಾಗುತ್ತಿದೆ. ಇದರಲ್ಲಿ ನಿಷೇಧಿತ ಡೋನಾಲ್ಡ್ ಟ್ರಂಪ್ ಧ್ವನಿ ಇದೆ ಎಂದು ನೊಟೀಸ್‌ನಲ್ಲಿ ಹೇಳಿದೆ.
ಮುಂದಿನ ದಿನಗಳಲ್ಲಿ ಟ್ರಂಪ್ ವಿಡಿಯೋ ಸೇರಿದಂತೆ ಇತರ ಪೋಸ್ಟ್‌ಗಳನ್ನು ಮಾಡಿದರೆ ಮುಂದಿನ ಕ್ರಮದ ಕುರಿತು ಫೇಸ್‌ಬುಕ್ ಎಚ್ಚರಿಸಿದೆ.
2020ರ ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ವೀಟ್ ಸಮರವೇ ನಡೆದಿತ್ತು. ಚುನಾವಣೆ ಬಳಿಕ ಟ್ರಂಪ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದರು. ಇತ್ತ ಗಲಭೆ, ಹಿಂಸಾಚಾರವನ್ನು ಪ್ರಚೋದಿಸುವ ಟ್ವೀಟ್‌ನಿಂದ ಟ್ರಂಪ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ಸಾಮಾಜಿಕ ಜಾಲತಾಣ ಬ್ಲಾಕ್ ಮಾಡಿದ ಕಾರಣ ಟ್ರಂಪ್ ತಮ್ಮದೇ ಆದ ಸಾಮಾಜಿಕ ಜಾಲತಾಣ ಹುಟ್ಟುಹಾಕಲು ಮುಂದಾಗಿದ್ದರು. ಈ ಕುರಿತು ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಚುನಾವಣೆಯಲ್ಲಿ ಟ್ರಂಪ್ ಪ್ರಚಾರದ ಜವಾಬ್ದಾರಿ ನಿರ್ವಹಿಸಿದ್ದ ಜೇಸನ್ ಮಿಲ್ಲರ್ ಹೇಳಿದ್ದಾರೆ.