- Home
- Viral News
- Dog's Milk: ನಾಯಿ ಹಾಲು ಕುಡಿಯಲ್ವಾ? ಆಕಳು, ಎಮ್ಮೆ ಹಾಲು ಯಾಕೆ ಕುಡಿಯುತ್ತೀರಿ? ಆಕ್ರೋಶ ಹುಟ್ಟುಹಾಕಿದ PETA ಜಾಹೀರಾತು
Dog's Milk: ನಾಯಿ ಹಾಲು ಕುಡಿಯಲ್ವಾ? ಆಕಳು, ಎಮ್ಮೆ ಹಾಲು ಯಾಕೆ ಕುಡಿಯುತ್ತೀರಿ? ಆಕ್ರೋಶ ಹುಟ್ಟುಹಾಕಿದ PETA ಜಾಹೀರಾತು
ವೀಗನ್ ಜೀವನಶೈಲಿಯನ್ನು ಉತ್ತೇಜಿಸಲು ಉದ್ದೇಶಿಸಿದ ಒಂದು ಜಾಹೀರಾತು ಬದಲಿಗೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಆನಿಮಲ್ಸ್ (PETA) ಇಂಡಿಯಾದ ಇತ್ತೀಚಿನ ಜಾಹೀರಾತು, ವಿಶ್ವ ಕ್ಷೀರ ದಿನದಂದು ಪ್ರಾರಂಭವಾದ, ಅದರ ಅಸಹಜವಾದ ಶೂಟಿಂಗ್ ಮತ್ತು ಸಂದೇಶದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಜಾಹೀರಾತಿನಲ್ಲಿ ಓರ್ವ ಮಹಿಳೆಯು ನಾಯಿಯ ಹಾಲನ್ನು ಕುಡಿಯಲು ರೆಡಿ ಆಗಿರುವುದನ್ನು ತೋರಿಸಲಾಗಿದೆ. “ನೀವು ನಾಯಿಯ ಹಾಲನ್ನು ಕುಡಿಯದಿದ್ದರೆ, ಬೇರೆ ಯಾವುದೇ ಪ್ರಾಣಿಯ ಹಾಲನ್ನು ಯಾಕೆ ಕುಡಿಯುತ್ತೀರಿ? ದಯವಿಟ್ಟು, ವೀಗನ್ ಆಗಿರಿ” ಎನ್ನೋದು ಈ ಜಾಹೀರಾತಿನ ತಿರುಳಾಗಿತ್ತು. ಬೆಂಗಳೂರು, ಮುಂಬೈನಲ್ಲಿ ಕೂಡ ಈ ಪೋಸ್ಟರ್ ಹಂಚಿಕೊಳ್ಳಲಾಗಿದೆ.
ಅಹಮದಾಬಾದ್, ಬೆಂಗಳೂರು, ಭೋಪಾಲ್, ಚೆನ್ನೈ, ಮುಂಬೈ ಮತ್ತು ನೋಯ್ಡಾದಂತಹ ಪ್ರಮುಖ ನಗರಗಳಲ್ಲಿ ಬಿಲ್‌ಬೋರ್ಡ್‌ಗಳಲ್ಲಿ ಈ ಜಾಹೀರಾತು ಇರೋದನ್ನು ನೋಡಬಹುದು. ಈ ಸಂಸ್ಥೆಯು, “ಹೈನುಗಾರಿಕೆಯ ಉತ್ಪಾದನೆಯು ಕ್ರೌರ್ಯದಲ್ಲಿ ಬೇರೂರಿದೆ, ಬಲವಂತದ ಗರ್ಭಧಾರಣೆಯಿಂದ ಹಿಡಿದು ಕರುಗಳನ್ನು ತಾಯಿಯಿಂದ ಹೃದಯವಿದ್ರಾವಕವಾಗಿ ಬೇರ್ಪಡಿಸುವ ಮಟ್ಟಕ್ಕೆ ಇದೆ. ಗೋವುಗಳು ಹಾಲಿನ ಯಂತ್ರಗಳಲ್ಲ; ಅವುಗಳ ಹಾಲು ಕರುಗಳಿಗಾಗಿ, ಮನುಷ್ಯರಿಗಾಗಿ ಅಲ್ಲ. ಹಾಲಿನ ಉತ್ಪನ್ನಗಳನ್ನು ತ್ಯಜಿಸಿ” ಎಂದು ಬರೆದಿದೆ.
ಈ ಮಾತು ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಎಲ್ಲರಿಗೂ ಇಷ್ಟವಾಗಿಲ್ಲ. ಅನೇಕರು ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “PETAನ ಜಾಹೀರಾತು ತಂಡದಲ್ಲಿ ಯಾರಿದ್ದರೂ, ಅವರು ಶಾಶ್ವತವಾಗಿ ಲಾಗ್ ಆಫ್ ಆಗಬೇಕು,” ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಇದನ್ನು “ಮೂರ್ಖತನದ ಕಂಟೆಂಟ್”, “ಮಕ್ಕಳವಾದ” ಎಂದು ಕರೆದಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆದಾರರು ಈ ಜಾಹೀರಾತು ತುಂಬ ದೂರ ಹೋಗಿದೆ ಎಂದು ಭಾವಿಸಿದ್ದಾರೆ. ಓರ್ವರು, “ಈ ಸಂದೇಶವನ್ನು ಬೇರೆ ರೀತಿಯಲ್ಲಿ ತಿಳಿಸಬಹುದಿತ್ತು. ಇದು ಸಂಪೂರ್ಣವಾಗಿ ಇದರ ಗುರಿಯನ್ನು ತಪ್ಪಿಸಿದೆ,” ಎಂದರೆ, ಇನ್ನೊಬ್ಬರು, “ಇದನ್ನು ಈಗ ಹೇಗೆ ಮರೆಯಲಿ?” ಎಂದು ಪ್ರಶ್ನಿಸಿದ್ದಾರೆ.
ಓರ್ವ ಬಳಕೆದಾರ ಈ ಜಾಹೀರಾತಿನ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದು, “ಇದು ನಿಮಗೆ ತೊಂದರೆಯಾಗಿದ್ದರೆ, ವಾಸ್ತವವೇ ನಿಮಗೆ ತೊಂದರೆಯಾಗಿದೆ. ಪ್ರಾಣಿಗಳ ಹಾಲನ್ನು ಕುಡಿಯೋದು ಸಾಮಾನ್ಯ ಅಂತ ಭಾವಿಸಿದ್ದೇವೆ. ಆದರೆ ಯಾವುದೇ ಪ್ರಾಣಿಯ ಹಾಲನ್ನು ಕುಡಿಯುವುದು ವಿಚಿತ್ರವಾಗಿದೆ. PETA ಈ ಬಗ್ಗೆ ಕೇವಲ ಒಂದು ಕ್ಷಣ ಯೋಚಿಸಿ ಅಂತ ನಮಗೆಲ್ಲ ಹೇಳುತ್ತಿದೆ” ಎಂದು ಹೇಳಿದರು.