ಕೈಯಲ್ಲೇ ದುಡ್ಡೇ ನಿಲ್ಲೋಲ್ವಾ? ಹೀಗ್ ಮಾಡಿ ನೋಡಿ...
ಹಣ ಯಾರಿಗೆ ತಾನೇ ಬೇಡ? ಎಲ್ಲರ ಜೀವನದಲ್ಲೂ ಹಣದ ಪಾತ್ರ ದೊಡ್ಡದು. ಹಣವಿದ್ದರೆ ಬಹಳಷ್ಟು ಸಮಸ್ಯೆಗಳು ಸುಲಭ ಪರಿಹಾರ ಕಾಣುತ್ತವೆ. ಕೆಲವರ ಮನೆಗೆ ಹಣ ಹೊಳೆಯಂತೆ ಹರಿದು ಬಂದರೆ, ಮತ್ತೆ ಕೆಲವರ ಕೈಲಿ ಅದು ನಿಲ್ಲದೆ ನೀರಿನಂತೆ ಹರಿದು ಹೋಗುತ್ತದೆ. ಆದರೆ, ಹಣದ ಹರಿವನ್ನು ಹೆಚ್ಚಿಸಲು, ಧನಲಕ್ಷ್ಮೀ ಒಲಿಸಿಕೊಳ್ಳಲು ಸಾರ್ವತ್ರಿಕ ಶಕ್ತಿಯೊಂದಿಗೆ ಅದನ್ನು ಒಗ್ಗೂಡಿಸಬೇಕು ಎನ್ನುತ್ತದೆ ವಾಸ್ತುಶಾಸ್ತ್ರ. ಹಾಗೆಂದರೆ ಭೂಮಿ, ಆಕಾಶ, ನೀರು, ವಾಯು ಹಾಗೂ ಅಗ್ನಿಗಳು ಸೇರಿದ ಕಾಸ್ಮಿಕ್ ಎನರ್ಜಿ ಒಂದೇ ಟ್ಯೂನ್‌ನಲ್ಲಿ ಇರಬೇಕು. ಇವು ಬ್ಯಾಲೆನ್ಸ್ ಆಗದಿದ್ದಾಗಲೇ ಮನೆಗೆ ನೆಗೆಟಿವ್ ಎನರ್ಜಿ ನುಗ್ಗುವುದು. ಮನೆಯಲ್ಲಿ ಕೆಲ ವಾಸ್ತು ನಿಯಮಗಳನ್ನು ಪಾಲಿಸುವ ಮೂಲಕ ಪಾಸಿಟಿವಿಟಿ ಹೆಚ್ಚಿಸಿ, ಹಣವನ್ನು ಆಕರ್ಷಿಸಲು ಸಾಧ್ಯವಿದೆ.
ಮನೆಯ ನೈಋತ್ಯ ಭಾಗದಲ್ಲಿ ಟಾಯ್ಲೆಟ್ ಇರಕೂಡದು. ಆದಷ್ಟು ಅವನ್ನು ಮನೆಯಿಂದ ಪ್ರತ್ಯೇಕವಾಗಿರಿಸಿದರೆ ಒಳಿತು. ಇದು ಖಾಲಿ ಜೇಬಿಗೆ ಕಾರಣವಾಗುತ್ತದೆ.
ಮನೆಯ ಈಶಾನ್ಯ ಭಾಗದಲ್ಲಿ ನೀರಿನಿಂದ ಕೂಡಿದ ವಸ್ತುವಿಡುವುದರಿಂದ ಹಣದ ಹರಿವು ಹೆಚ್ಚುತ್ತದೆ. ಇದಕ್ಕಾಗಿ ಅಲ್ಲೊಂದು ಅಕ್ವೇರಿಯಂ ಇಲ್ಲವೇ ಪುಟ್ಟ ವಾಟರ್ ಫೌಂಟೇನ್ ಇಡಬಹುದು. ಈ ನೀರು ಕೆಡದಂತೆ ಕಾಳಜಿ ವಹಿಸಬೇಕು.
ಆಭರಣಗಳು, ಹಣ ಹಾಗೂ ಹಣಕಾಸಿನ ದಾಖಲೆಗಳನ್ನೊಳಗೊಂಡ ಮುಖ್ಯವಾದ ಸೇಫ್ ಹಾಗೂ ಲಾಕರ್ಸ್‌ನ್ನು ಮನೆಯ ನೈಋತ್ಯ ಭಾಗದಲ್ಲಿ ಇಡಬೇಕು. ಇದರಿಂದ ಸಂಪತ್ತು ದುಪ್ಪಟ್ಟಾಗುತ್ತದೆ. ದಕ್ಷಿಣ ಅಥವ ಪಶ್ಚಿಮದಲ್ಲಿ ಯಾವುದೇ ಕಾರಣಕ್ಕೂ ಹಣವನ್ನಿಡಬೇಡಿ.
ಕುಬೇರನು ಸಮೃದ್ಧತೆ ಹಾಗೂ ಸಂಪತ್ತಿನ ಅಧಿಪತಿ. ಈಶಾನ್ಯ ದಿಕ್ಕನ್ನು ಕುಬೇರ ಆಳುತ್ತಾನೆ. ಹಾಗಾಗಿ, ನೆಗೆಟಿವ್ ಎನರ್ಜಿ ತರುವಂಥ ಶೂ ಸ್ಟ್ಯಾಂಡ್, ದೊಡ್ಡ ದೊಡ್ಡ ಫರ್ನಿಚರ್‌ಗಳು, ಟಾಯ್ಲೆಟ್ ಯಾವುದೂ ಮನೆಯ ಈಶಾನ್ಯ ದಿಕ್ಕಿನಲ್ಲಿರದಂತೆ ನೋಡಿಕೊಳ್ಳಿ. ಕನ್ನಡಿ ಅಥವಾ ಕುಬೇರ ಯಂತ್ರವನ್ನು ಮನೆಯ ಉತ್ತರ ಭಾಗದ ಗೋಡೆಗಳಲ್ಲಿರುವಂತೆ ನೋಡಿಕೊಂಡರೆ ಅದರಿಂದ ಹೊಸ ಹೊಸ ಆರ್ಥಿಕ ಅವಕಾಸಗಳು ಒದಗುತ್ತವೆ.
ಮನೆ ಯಾವಾಗಲೂ ಸ್ವಚ್ಛವಾಗಿ, ಹೆಚ್ಚು ಸಂತೆಸರಂಜಾಮಿನಿಂದ ತುಂಬಿರದಂತಿರಬೇಕು. ಇದರಿಂದ ಪಾಸಿಟಿವ್ ಎನರ್ಜಿ ಮನೆಯ ಎಲ್ಲ ಭಾಗದಲ್ಲಿ ಚೆನ್ನಾಗಿ ಹರಿದಾಡಲು ಸಾಧ್ಯವಾಗುತ್ತದೆ. ಬಟ್ಟೆ, ವಸ್ತುಗಳನ್ನೆಲ್ಲ ನೀಟಾಗಿ ಜೋಡಿಸಿಟ್ಟಿರಬೇಕು.
ಮನೆಯ ಮುಖ್ಯದ್ವಾರ ಆಕರ್ಷಕವಾಗಿ ಹಾಗೂ ಭದ್ರತೆಯಿಂದ ಕೂಡಿರಬೇಕು. ಅದರಲ್ಲಿ ಯಾವುದೇ ಒಡೆ ಇರಬಾರದು. ಚಿಲಕಗಳೂ ಸರಿಯಾಗಿರಬೇಕು.
ಮನೆಯ ಈಶಾನ್ಯ ಅಥವಾ ಅಗ್ನೇಯ ಭಾಗದಲ್ಲಿ ವಾಟರ್ ಟ್ಯಾಂಕ್ ಅಥವಾ ಇನ್ನಾವುದೇ ಬಹಳ ದೊಡ್ಡ ವಸ್ತುವಿರಬಾರದು. ಇದು ಮನೆಯಲ್ಲಿ ಬಹಳಷ್ಟು ಟೆನ್ಷನ್ ತರುತ್ತದೆ.
ಅಡುಗೆಮನೆ, ಬಾತ್‌ರೂಂ, ಹೊರಗೆ ಗಾರ್ಡನ್ ಏರಿಯಾ, ಗೋಡೆ ಸೇರಿದಂತೆ ಎಲ್ಲಿಯೂ ಯಾವುದೇ ರೀತಿಯಲ್ಲಿ ನೀರು ಲೀಕ್ ಆಗುತ್ತಿರಬಾರದು. ಇದು ಹಣ ಪೋಲಾಗುವುದನ್ನು ಸೂಚಿಸುತ್ತದೆ.
ಮನೆಯ ಎದುರಿನ ಅಂಗಳದಲ್ಲಿ ವಿಂಡ್ ಚೈಮ್ (ಗಾಳಿಗಂಟೆ) ನೇತು ಹಾಕಬೇಕು. ಜೊತೆಗೆ ಒಂದಿಷ್ಟು ಸಸ್ಯಗಳು ಇದ್ದರೆ ಅವು ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುತ್ತವೆ.