- Home
- Karnataka Districts
- Uttara Kannada
- RCB ಟೀಂ ನೋಡಲು ಹೋಗಿ ಉತ್ತರಕನ್ನಡದ ಸಿದ್ದಾಪುರದ ಅಕ್ಷತಾ ಪೈ ನಿಧನ; ವಿಶ್ವೇಶ್ವರ ಹೆಗಡೆ ಪ್ರತಿಕ್ರಿಯೆ
RCB ಟೀಂ ನೋಡಲು ಹೋಗಿ ಉತ್ತರಕನ್ನಡದ ಸಿದ್ದಾಪುರದ ಅಕ್ಷತಾ ಪೈ ನಿಧನ; ವಿಶ್ವೇಶ್ವರ ಹೆಗಡೆ ಪ್ರತಿಕ್ರಿಯೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಅಕ್ಷತಾ ಪೈ ನಿಧನರಾಗಿದ್ದಾರೆ. ಈ ಬಗ್ಗೆ ವಿಶ್ವೇಶ್ವರ ಹೆಗಡೆ ಕಾವೇರಿ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಎಂಪಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು “ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ (ಜೂನ್ 4, 2025) ನಡೆದ ಕಾಲ್ತುಳಿತ ದುರಂತವು ಅತ್ಯಂತ ಆಘಾತಕಾರಿ ಮತ್ತು ಹೃದಯ ವಿದ್ರಾವಕ ಸಂಗತಿಯಾಗಿದೆ. ಈ ಘಟನೆಯು ಕೇವಲ ಒಂದು ದುರಂತವಲ್ಲ, ಬದಲಿಗೆ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಸಂಭವಿಸಿದ "ಹತ್ಯಾಕಾಂಡ" ಎಂದು ನಾನು ಸ್ಪಷ್ಟವಾಗಿ ಹೇಳಬಯಸುತ್ತೇನೆ” ಎಂದಿದ್ದಾರೆ.
ಈ ದುರ್ಘಟನೆಯಲ್ಲಿ ಅಸುನೀಗಿದ ಎಲ್ಲರಿಗೂ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ. ಮೃತರ ಕುಟುಂಬಗಳಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಅತ್ಯಂತ ದುಃಖದ ಸಂಗತಿಯೆಂದರೆ, ಈ ಭೀಕರ ಕಾಲ್ತುಳಿತದಲ್ಲಿ ಸಿದ್ದಾಪುರದ ಅಕ್ಷತಾ ಪೈ ಅವರು ಅಕಾಲಿಕ ಮರಣವಪ್ಪಿದ್ದಾರೆ. ಅವರ ಕುಟುಂಬದ ನೋವಿನಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಈ ಹಠಾತ್ ಅಗಲಿಕೆ ನಮ್ಮೆಲ್ಲರಿಗೂ ತೀವ್ರ ನೋವನ್ನುಂಟು ಮಾಡಿದೆ.
“ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಸರ್ಕಾರ ತಕ್ಷಣವೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ.
"ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಮೊದಲು ಸಮಗ್ರ ಸುರಕ್ಷತಾ ಯೋಜನೆಗಳನ್ನು ಕಡ್ಡಾಯಗೊಳಿಸಬೇಕು. ಜನರ ಜೀವದೊಂದಿಗೆ ಚೆಲ್ಲಾಟವಾಡಬಾರದು" ಎಂದಿದ್ದಾರೆ.