ಪ್ರಿ ವೆಡ್ಡಿಂಗ್ ಶೂಟಲ್ಲಿ ಯಕ್ಷಗಾನ -ಭರತನಾಟ್ಯ ವೈಭವ… ವಿಭಿನ್ನ ಚಿಂತನೆಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ!
ಸಾಮಾನ್ಯ ಪ್ರೀ ವೆಡ್ಡಿಂಗ್ ಫೋಟೊ ಶೂಟ್ ಗಿಂತ ವಿಭಿನ್ನವಾಗಿ ಯೋಚಿಸಿ ಮಾಡಿದಂತಹ ಯಕ್ಷಗಾನ ಮತ್ತು ಭರತನಾಟ್ಯ ವೈಭವವನ್ನು ಸಾರುವ ಪ್ರಿ ವೆಡ್ಡಿಂಗ್ ಶೂಟ್ ಅಪಾರ ಜನಮನ್ನಣೆ ಗಳಿಸಿದೆ.
ಇತ್ತೀಚಿನ ದಿನಗಳಲ್ಲಿ ಪ್ರಿ ವೆಡ್ಡಿಂಗ್ ಫೋಟೊ ಶೂಟ್ (pre wedding photo shoot) ಟ್ರೆಂಡ್ ನಲ್ಲಿದೆ. ಪ್ರತಿಯೊಬ್ಬರೂ ಮದುವೆಗೂ ಮುನ್ನ ವಿಭಿನ್ನ ರೀತಿಯಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡುವ ಮೂಲಕ ತಮ್ಮ ವಿಶೇಷ ಕ್ಷಣಗಳನ್ನು ಮತ್ತಷ್ಟು ವಿಶೇಷವಾಗಿಸುತ್ತಾರೆ. ಕೆಲವು ಫೋಟೊ ಶೂಟ್ ವಾರೆ ವಾ ಎನ್ನುವಂತಿದ್ದರೆ, ಮತ್ತೆ ಕೆಲವು ಶೂಟ್ ಗಳು ಅಯ್ಯೋ ಇನ್ನು ನಮ್ಮ ಕಣ್ಣಲ್ಲಿ ಏನೇನು ನೋಡಬೇಕೋ ಎನ್ನುವಂತಿರುತ್ತೆ.
ಇದೀಗ ಜೋಡಿಯೊಂದು ಮಾಡರ್ನ್ ಕಾನ್ಸೆಪ್ಟ್ ಬಿಟ್ಟು ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಪ್ರಿ ವೆಡ್ಡಿಂಗ್ ಶೂಟ್ ಮಾಡಿದ್ದು, ಈ ಫೋಟೊಗಳು ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಈ ಜೋಡಿಯನ್ನು ನೋಡಿ ನೆಟ್ಟಿಗರು ಶಹಭಾಷ್ ಎನ್ನುತ್ತಿದ್ದಾರೆ. ಅಷ್ಟಕ್ಕೂ ಅವರು ಮಾಡಿರೋ ಪ್ರಿ ವೆಡ್ಡಿಂಗ್ ಶೂಟ್ ಹೇಗಿದೆ ಅನ್ನೋದನ್ನ ನೀವೇ ನೋಡಿ.
ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಶಿವಮೊಗ್ಗದ ಚಂದನ್ ಕಲಾಹಂಸ (Chandan Kalahamsa) ಮತ್ತು ಉತ್ತರ ಕನ್ನಡ ಜಿಲ್ಲೆಯ ಭಾರ್ಗವಿ ಬಿಎಚ್ ಅವರ ವಿಭಿನ್ನ ಸಂಸ್ಕೃತಿಯ ಪ್ರಿ ವೆಡ್ಡಿಂಗ್ ವಿಡಿಯೋ ವೈರಲ್ ಆಗಿದೆ. ಯಕ್ಷಗಾನ ಮತ್ತು ಭರತನಾಟ್ಯ ಕಲಾಪ್ರಕಾರಗಳನ್ನು ಬಿಂಭಿಸುವ ಈ ಶೂಟ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕದ ಪ್ರಸಿದ್ಧ ಕಲೆ ಯಕ್ಷಗಾನ ಹಾಗೂ ಭರತನಾಟ್ಯ (Bharatanatya). ನಾಡಿನ ನಾಡಿ, ನುಡಿಗಳಲ್ಲಿ ಬೆರೆತಿರುವ ಜನಪದೀಯತೆಯ ಕಂಪು ಈ ಕಲೆಗಳಲ್ಲಿ ಮೇಳೈಸುವ ಪರಿ ಸವಿದೇ ತಿಳಿಯಬೇಕು. ಹೀಗಿರುವ ಯಕ್ಷಗಾನ ಹಾಗೂ ಭರತನಾಟ್ಯದ ಕಲಿಕೆಯಲ್ಲಿ ತೊಡಗಿರುವ ಯುವಜೋಡಿಯ ನೂತನ ಯತ್ನವಿದು. ವಿವಾಹಪೂರ್ವ ಚಿಂತನೆಯೊಂದಕ್ಕೆ ಹಿಡಿದ ಕೈಗನ್ನಡಿ. ಎನ್ನುವ ಕ್ಯಾಪ್ಶನ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಶೇರ್ ಆಗಿದೆ.
ವರ ಚಂದನ್ ಕಲಾಹಂಸ ಶಿವಮೊಗ್ಗದವರಾಗಿದ್ದು ಇವರು ಯಕ್ಷಗಾನ ಕಲಾವಿದರೂ ಕೂಡ ಹೌದು, ಹಲವು ವರ್ಷಗಳಿಂದ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ವಧು ಭಾರ್ಗರಿ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ಭರತನಾಟ್ಯ ಕಲಾವಿದೆಯಾಗಿದ್ದಾರೆ. ಹಾಗಾಗಿ ಯಕ್ಷಗಾನ ಮತ್ತು ಭರತನಾಟ್ಯ ಎರಡು ವಿಭಿನ್ನ ಕಲೆಗಳನ್ನು ಒಟ್ಟಿಗೆ ತರುವ ಮೂಲಕ ವಿಭಿನ್ನವಾಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡಲಾಗಿದೆ.
ಈ ಜೋಡಿಗಳು ವಿದ್ಯಾಭೂಷಣ್ ಅವರ ಪಿಳ್ಳಂಗೋವಿಯ ಚೆಲುವೆ ಕೃಷ್ಣನ ಎಲ್ಲಿ ನೋಡಿದಿರಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೊದಲಿಗೆ ಈ ಹಾಡಿಗೆ ಭಾರ್ಗತಿ ಭರತನಾಟ್ಯ ನೃತ್ಯ ಮಾಡಿದ್ದು, ನಂತರ ಚಂದನ್ ಯಕ್ಷಗಾನ ಹಾಡಿಗೆ ನರ್ತಿಸಿದ್ದಾರೆ. ಈ ಸುಂದರವಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಇಬ್ಬರ ವಿಡೀಯೋ ನೋಡಿ ಈ ಜೋಡಿಗೆ ಶುಭ ಹಾರೈಸಿದ ಜನರು ಸದಭಿರುಚಿ, ಸಮ ಅಭಿರುಚಿ, ಬಹಳ ವಿಶೇಷ, ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು, ಧನ್ಯವಾದಗಳು ಕೂಡ. ಸಂಸಾರದಲ್ಲಿ ಸಪ್ತ ಸ್ವರಗಳು ಸದಾ ನುಡಿಯುತ್ತಿರಲಿ ಎಂದಿದ್ದಾರೆ. ತುಂಬಾ ಚೆನ್ನಾಗಿದೆ.ಕಲಾ ಜೋಡಿ ಕಲೆಯನ್ನು ಬೆಳೆಸುತ್ತಾ ಸಾಗಿರಿ ಎಂದಿಗೂ.ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯವನ್ನು ಬೆಳೆಸುವ ನಿಮ್ಮ ವಿನೂತನ ಪ್ರಯತ್ನ ಸೊಗಸಾಗಿದೆ ಎಂದು ಸಹ ಹೇಳಿದ್ದಾರೆ.