ಮತ್ತೆ ಕಿರುತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರಂತೆ ಅಗ್ನಿಸಾಕ್ಷಿ ವೈಷ್ಣವಿ, ಸೂರ್ಯ!
ಸೀರಿಯಲ್ ಜಗತ್ತಿನಲ್ಲಿ ಒಮ್ಮೆ ಜನ ಮೆಚ್ಚುಗೆ ಪಡೆದ ನಟರು ಯಾವಾಗಲೂ ಸೀರಿಯಲ್ ಪ್ರಿಯರ ಮನಸ್ಸಿನಲ್ಲಿ ಉಳಿಯುತ್ತಾರೆ. ಯಾಕೆಂದರೆ ಪ್ರತಿದಿನ ಬರುವಂತಹ ನಟ- ನಟಿಯರನ್ನು ಜನರು ತಮ್ಮವರು ಎನ್ನುವಂತೆ ಇಷ್ಟ ಪಡ್ತಾರೆ. ಕೆಲವು ಸೀರಿಯಲ್ ಮುಗಿದ ಮೇಲಂತೂ ಜನ ಬೇಜಾರು ಮಾಡ್ಕೊಳ್ಳೋದು ಇದೆ. ಇದೀಗ ನಿಮ್ಮ ನೆಚ್ಚಿನ ನಟ- ನಟಿಯರು ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೆಲವೊಂದು ಸೀರಿಯಲ್ ಗಳು (serials) ಮುಗಿದಾಗ ಅಯ್ಯೋ ಮುಗ್ದೋಯ್ತಾ? ಇನ್ನು ನಮ್ಮ ನೆಚ್ಚಿನ ತಾರೆಯರನ್ನು ದಿನ ನೋಡಲು ಸಾಧ್ಯ ಇಲ್ಲ ಎಂದು ಜನ ಬೇಜಾರ್ ಮಾಡ್ಕೊಂಡಿದ್ದೂ ಉಂಟು. ಇದೀಗ ಕನ್ನಡ ಕಿರುತೆರೆಯ ಸ್ಟಾರ್ ನಟರು ಜನರನ್ನು ರಂಜಿಸಲು ಮತ್ತೆ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿ (re entry to small screen) ಕೊಡಲು ಸಜ್ಜಾಗಿದ್ದಾರೆ. ವೈಷ್ಣವಿ, ನೇಹಾ ಗೌಡ, ಗಗನ್ ಚಿನ್ನಪ್ಪ, ವಿಜಯ್ ಸೂರ್ಯ ಮತ್ತು ಇನ್ನೂ ಅನೇಕರು ಶೀಘ್ರದಲ್ಲೇ ತಮ್ಮ ನಟನೆಯ ಪುನರಾಗಮನವನ್ನು ಮಾಡಲಿದ್ದಾರೆ. ಸಣ್ಣ ಪರದೆಗಳಲ್ಲಿ ಹೊಸ ಸೀರಿಯಲ್ ಮೂಲಕ ರೀ ಎಂಟ್ರಿ ಪಡೆದ ಕೆಲವು ಸ್ಟಾರ್ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.
ನೇಹಾ ಗೌಡಾ (Neha Gowda)
ಬಿಗ್ ಬಾಸ್ ಕನ್ನಡ ಸೀಸನ್‌ನಲ್ಲಿ ಕಾಣಿಸಿಕೊಂಡ ನಂತರ ನಟಿ ನೇಹಾ ಗೌಡ ಹೊಚ್ಚ ಹೊಸ ಯೋಜನೆಯೊಂದಿಗೆ ಕನ್ನಡ ಕಿರುತೆರೆಗೆ ಮರಳಲಿದ್ದಾರೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಧಾರಾವಾಹಿ 'ಲಚ್ಚಿ' ಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನೇಹಾ ಗೌಡ. 'ನಾನು ಹಿಂದೆಂದೂ ಮಾಡದ ವಿಭಿನ್ನ ಪಾತ್ರವನ್ನು ನಾನು ನಿರ್ವಹಿಸುತ್ತೇನೆ. ಈ ಪಾತ್ರವನ್ನು ನಿರ್ವಹಿಸಲು ತುಂಬಾ ಉತ್ಸುಕಳಾಗಿದ್ದೇನೆ ಏಕೆಂದರೆ ಇದು ನೀವು ಈ ಮೊದಲು ನೋಡಿದುದಕ್ಕಿಂತ ಭಿನ್ನವಾಗಿದೆ ಮತ್ತು ಇದು ತುಂಬಾ ಸವಾಲಿನ ಪಾತ್ರ ಇದಾಗಿದೆ ಎಂದು ಗೊಂಬೆ ಹೇಳಿಕೊಂಡಿದ್ದಾರೆ.
ವೈಷ್ಣವಿ ಗೌಡ (Vaishnavi Gowda)
ಕಿರುತೆರೆಯಲ್ಲಿ ಆಗಾಗ್ಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ವೈಷ್ಣವಿ ಈಗ ಕನ್ನಡದ ಪ್ರಮುಖ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಸೀತಾ ರಾಮ' ದಲ್ಲಿ ಪೂರ್ಣ ಪ್ರಮಾಣದ ನಟನೆಯನ್ನು ಮಾಡಲಿದ್ದಾರೆ. ನಟಿ ವಿಚ್ಛೇದಿತ ಮಹಿಳೆಯ ಪಾತ್ರವನ್ನು ಮಾಡಲಿದ್ದಾರಂತೆ. ಗರ್ಭಿಣಿಯಾಗಿದ್ದಾಗ ಗಂಡನಿಂದ ತ್ಯಜಿಸಲ್ಪಟ್ಟು, ಬಳಿಕ ತನ್ನ 4 ವರ್ಷದ ಮಗಳನ್ನು ಸ್ವತಃ ಬೆಳೆಸುವ ತಾಯಿಯಾಗಿ ವೈಷ್ಣವಿ ಕಾಣಿಸಿಕೊಂಡಿದ್ದಾರೆ.
ಗಗನ್ ಚಿನ್ನಪ್ಪ (Gagan Chinnappa)
ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಿದ ನಂತರ, ನಟ ಗಗನ್ ಚಿನ್ನಪ್ಪ ಈಗ ಮತ್ತೆ ಕನ್ನಡಕ್ಕೆ ಮರಳಲು ಸಜ್ಜಾಗಿದ್ದಾರೆ. ನಟ ಶೀಘ್ರದಲ್ಲೇ 'ಸೀತಾ ರಾಮ' ಎಂಬ ಹೊಸ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಮರಳಲಿದ್ದಾರೆ. ನಿಜವಾದ ಪ್ರೀತಿಗಾಗಿ ಹಂಬಲಿಸುವ ಉದ್ಯಮಿಯ ಪ್ರಮುಖ ಪಾತ್ರವನ್ನು ಮಾಡಲಿದ್ದಾರೆ. ಗಗನ್ ನಟಿ ವೈಷ್ಣವಿ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಇವರಿಬ್ಬರು ತಮ್ಮ ವೃತ್ತಿಜೀವನದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.
ಚಂದು ಗೌಡ (Chandu Gowda)
ಕನ್ನಡಕ್ಕೂ ಡಬ್ ಆಗಿರುವ ತೆಲುಗು ಧಾರಾವಾಹಿ 'ತ್ರಿನಯನಿ'ಯ ಜೊತೆಗೆ ಚಂದು ಗೌಡ ಕನ್ನಡದ ಹೊಸ ಪ್ರಾಜೆಕ್ಟ್ ಒಂದನ್ನು ಸಹ ಒಪ್ಪಿಕೊಂಡಿದ್ದಾರೆ. ಮುಂಬರುವ 'ಲಚ್ಚಿ' ಧಾರವಾಹಿಯಲ್ಲಿ ನಟ ತಮ್ಮ ಲಕ್ಷ್ಮಿ ಬಾರಮ್ಮ ಸಹ ನಟಿ ನೇಹಾ ಗೌಡ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
ವಿಜಯ್ ಸೂರ್ಯ (Vijay Suriya)
ನೇಹಾ ಗೌಡ ಮತ್ತು ಚಂದು ಗೌಡ ಅವರೊಂದಿಗೆ ಮುಂಬರುವ ಧಾರಾವಾಹಿ 'ಲಚ್ಚಿ' ಯಲ್ಲಿ ಮತ್ತೋರ್ವ ನಟ ವಿಜಯ್ ಸೂರ್ಯ ಸೇರಿಕೊಂಡಿದ್ದಾರೆ. ಡಿಂಪಲ್ ಕಿಂಗ್ ‘'ಲಚ್ಚಿ'ಯಲ್ಲಿ ಪ್ರಮುಖ ಪಾತ್ರಗಳಲ್ಲಿ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಸೂರ್ಯ ಕೊನೆಯದಾಗಿ ಕೆಲವು ಸೀರಿಯಲ್ ಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಅನಿರುದ್ಧ್ ಜಟ್ಕರ್ (Anirudh Jatkar)
'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರಹಾಕಲ್ಪಟ್ಟ ನಂತರ, ಅನಿರುದ್ಧ್ ಜಟ್ಕರ್ ಇದೀಗ ಎಸ್ ನಾರಾಯಣ್ ನಿರ್ದೇಶನದ ಹೊಸ ಪ್ರಾಜೆಕ್ಟ್ ನಲ್ಲಿ ಅವಕಾಶ ಪಡೆದಿದ್ದಾರೆ. ‘ಸೂರ್ಯವಂಶ’ ಎಂದು ಹೆಸರಿಸಲಾದ ಹೊಸ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅನಿರುದ್ಧ್ ಕಾಣಿಸಿಕೊಳ್ಳಲಿದ್ದಾರೆ.