ವರ್ಷಗಳಾದರೂ ಮುಗಿಯದ ‘ಕನ್ನಡತಿ’ ಕ್ರೇಜ್, ಪಾರ್ಟ್ 2 ಬರ್ಲಿ, ಹರ್ಷ-ಭುವಿ ಮತ್ತೆ ಒಂದಾಗ್ಲಿ ಎಂದ ಫ್ಯಾನ್ಸ್!
ಕನ್ನಡ ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿಗಳಾದ ಹರ್ಷ ಮತ್ತು ಭುವಿಯನ್ನು ಮತ್ತೆ ತೆರೆ ಮೇಲೆ ಜೋಡಿಯಾಗಿ ನೋಡ್ಬೇಕು ಅಂತ ಬಯಸ್ತಿದ್ದಾರೆ ಅಭಿಮಾನಿಗಳು.
ಕನ್ನಡ ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ ಸೀರಿಯಲ್‌ಗಳಲ್ಲಿ ಕನ್ನಡತಿ ಸೀರಿಯಲ್ (Kannadathi serial) ಒಂದು. ಕನ್ನಡದ ಮೇಲಿನ ಅಭಿಮಾನವನ್ನು ಮೆರೆಸುತ್ತ, ಕಥೆಯನ್ನು ತುಂಬಾ ಎಳೆಯದೇ, ವೇಗವಾಗಿ ಸಾಗುತ್ತಿದ್ದ ಧಾರಾವಾಹಿ ಮತ್ತು ಅದರ ಪಾತ್ರಧಾರಿಗಳು ಜನರಿಗೆ ತುಂಬಾ ಇಷ್ಟವಾಗಿದ್ದರು. ಸೀರಿಯಲ್‌ನ ಪ್ರತಿಯೊಬ್ಬ ಪಾತ್ರಧಾರಿಯನ್ನೂ ಜನ ಮೆಚ್ಚಿಕೊಂಡಿದ್ದು, ಬಹುಶಃ ಇದೇ ಧಾರಾವಾಹಿಯಲ್ಲಿ ಇರಬೇಕು.
ಇನ್ನು ಕನ್ನಡತಿ ಧಾರಾವಾಹಿಯ ನಾಯಕ- ನಾಯಕಿಯರಾದ ಹರ್ಷ ಮತ್ತು ಭುವಿಯ ಜೋಡಿ (Harsha -Bhuvi) ಸೀರಿಯಲ್ ಪ್ರಿಯರ ಮೋಸ್ಟ್ ಫೇವರಿಟ್ ಜೋಡಿ. ಇಬ್ಬರ ಮಾತು, ಪ್ರಬುದ್ಧ ಪ್ರೇಮ, ತಿಳಿ ರೊಮ್ಯಾನ್ಸ್, ಪ್ರೀತಿಯನ್ನು ಬಿಟ್ಟು ಕೊಡದ ರೀತಿ ಎಲ್ಲವೂ ಜನರಿಗೆ ಹುಚ್ಚು ಹಿಡಿಸಿತ್ತು ಅನ್ನೋದು ನಿಜಾ.
ಈಗ ಸೀರಿಯಲ್ (Serial) ಮುಗಿದು ಒಂದೂವರೆ ವರ್ಷ ಕಳೆದಿದೆ. ಹಾಗಂತ ಈ ಸೀರಿಯಲ್ ಕುರುತಾದ ಕ್ರೇಜ್ ಜನರಲ್ಲಿ ಇನ್ನೂ ಕಡಿಮೆಯಾಗಿಲ್ಲ. ಇವತ್ತಿಗೂ ಈ ಜೋಡಿ ಮತ್ತೆ ಒಂದಾಗಬೇಕು, ಇವರಿಬ್ಬರನ್ನ ಇಟ್ಕೊಂಡು ಮತ್ತೆ ಸೀರಿಯಲ್ ಮಾಡಬೇಕು ಅಂತ ಹೇಳೋ ಜನರಿಗೂ ಕಡಿಮೆ ಇಲ್ಲ.
ಟ್ರೋಲ್ ಪೇಜ್ ಗಳೂ (troll page) ಸಹ ಇವರಿಬ್ಬರ ಫೋಟೋ ಹಾಕಿ ಮತ್ತೆ ಈ ಇಬ್ಬರೂ, ಒಂದೇ ಪರದೆಯ ಮೇಲೆ ಬರುವಂತಹ ಕಥೆ ಬರೆಯಿರಿ ಡೈರೆಕ್ಟರೇ, ಎಂದು ಪೋಸ್ಟ್ ಮಾಡಿದೆ, ಇದಕ್ಕೆ ಅಭಿಮಾನಿಗಳು ಸಹ ಅಷ್ಟೇ ಪ್ರೀತಿಯಿಂದ ಕಾಮೆಂಟ್ ಮಾಡಿದ್ದು, ಹೌದು, ಇಬ್ಬರೂ ಮತ್ತೆ ಜೊತೆಯಾಗಬೇಕು, ಕನ್ನಡತಿ 2 ಬರಬೇಕು ಎಂದಿದ್ದಾರೆ.
ಒಬ್ಬರು ಕಾಮೆಂಟ್ ಮಾಡಿ ಪ್ಲೀಸ್ ಹರ್ಷ-ಭುವಿ ಇಬ್ಬರೂ ಇರಬೇಕು, ಅಮ್ಮಮ್ಮನೂ ಇರ್ಬೇಕು, ಅಂತಹ ಒಂದು ಸೀರಿಯಲ್ ಬರಲಿ. ಕನ್ನಡತಿ ಸೀರಿಯಲ್ ಬೇರೆ ಸೀರಿಯಲ್ ತರ ಇರಲಿಲ್ಲ. ಅದು ತುಂಬಾ ಇಂಟ್ರೆಸ್ಟ್ ಆಗಿತ್ತು. ತೀರಾ ಕೊರಿತಿರ್ಲಿಲ್ಲ ಚೆನ್ನಾಗಿ ಇತ್ತು ಧಾರವಾಹಿ. ಕಿರುತೆರೆಯ ಮುದ್ದಾದ ಜೋಡಿ ಇವರು, ಮತ್ತೆ ಇವರಿಬ್ಬರು ಜೊತೆಯಾದ್ರೆ ನಮ್ಮಷ್ಟು ಖುಷಿ ಪಡೋರು ಯಾರೂ ಇಲ್ಲ ಎಂದಿದ್ದಾರೆ.
ಹಾಗೇ ನೋಡಿದ್ರೆ ಇಬ್ಬರೂ ಮತ್ತೆ ಕಿರುತೆರೆಯಲ್ಲಿ ನಟಿಸುವಂತೆ ಕಾಣಿಸುತ್ತಿಲ್ಲ. ಯಾಕಂದ್ರೆ ಹರ್ಷ ಖ್ಯಾತಿಯ ಕಿರಣ್ ರಾಜ್ (Kiran Raj) ಅವರು ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಭರ್ಜರಿ ಗಂಡು, ರಾನಿ, ಚಿಕನ್ ಪುಳಿಯೊಗರೆ ಮೊದಲಾದ ಸಿನಿಮಾಗಳಲ್ಲಿ ಕಿರಣ್ ಬ್ಯುಸಿಯಾಗಿದ್ದಾರೆ.
ಇನ್ನು ಭುವಿ ಖ್ಯಾತಿಯ ರಂಜನಿ ರಾಘವನ್ (Ranjani Raghavan) ಕೂಡ ಸಿನಿಮಾ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಂಜನಿ ಅಭಿನಯದ ಹಕುನಾಮ ಟಾಟ, ನೈಟ್ ಕರ್ಫ್ಯೂ, ಕಂಗಾರೂ ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ. ಇನ್ನು ತೆಲುಗು ಮತ್ತು ಕನ್ನಡದಲ್ಲಿ ರಿಲೀಸ್ ಆಗಲಿರುವ ಸತ್ಯಂ ಮತ್ತು ಬರಗೂರು ರಾಮಚಂದ್ರಪ್ಪನವರ ಸ್ವಪ್ನ ಮಂಟಪ ಸಿನಿಮಾದಲ್ಲಿ ನಟಿಸಲಿದ್ದಾರೆ. ಹಾಗೇ ತಾವು ಇನ್ನು ಮುಂದೆ ಸೀರಿಯಲ್ ಗಳಲ್ಲಿ ನಟಿಸೋದಿಲ್ಲ ಎಂದು ಇತ್ತೀಚೆಗೆ ಒಂದು ಇಂಟರ್ವ್ಯೂನಲ್ಲೂ ತಿಳಿಸಿದ್ದಾರೆ.