ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ ಸ್ಟಾರ್ ಸುವರ್ಣವಾಹಿನಿಯ ಜನಪ್ರಿಯ ಧಾರಾವಾಹಿ
ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಪ್ಪ ಮಗಳ ಬಾಂಧವ್ಯದ ನಂಟನ್ನು ಸಾರುವ ಜನಪ್ರಿಯ ಧಾರಾವಾಹಿ ನಮ್ಮ ಲಚ್ಚಿ ಸದ್ಯದಲ್ಲೇ ಮುಕ್ತಾಯಗೊಳ್ಳಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಸ್ಟಾರ್ ಸುವರ್ಣವಾಹಿನಿಯಲ್ಲಿ (Star Suvarna) ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ನಮ್ಮ ಲಚ್ಚಿ. ಇದು ಅಪ್ಪ ಮತ್ತು ಮಗಳ ಭಾಂದವ್ಯದ ಕಥೆಯಾಗಿದೆ. ಅಪ್ಪ ಮಗಳ ಅನ್ ಕಂಡೀಶನಲ್ ಪ್ರೀತಿಯನ್ನು ಜನರು ಕೂಡ ಸ್ವೀಕರಿಸಿದ್ದರು. ಇದೀಗ ನಮ್ಮ ಲಚ್ಚಿ ವೀಕ್ಷಕರಿಗೆ ಕಹಿ ಸುದ್ದಿ ಇಲ್ಲಿದೆ.
ವಿಜಯ್ ಸೂರ್ಯ (Vijay Surya), ನೇಹಾ ಗೌಡ, ಐಶ್ವರ್ಯ ಸಿಂಧೋಗಿ, ಸಾಂಘವಿ ಕಾಂತೇಶ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಧಾರಾವಾಹಿ ನಮ್ಮ ಲಚ್ಚಿ. ಲಚ್ಚಿಯಾಗಿ ಬಾಲ ನಟಿ ಸಾಂಘವಿ ಅಮೋಘವಾಗಿ ಅಭಿನಯಿಸುವ ಮೂಲಕ ಜನಮನ ಗೆದ್ದಿದ್ದರು.
ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಈ ಜನಪ್ರಿಯ ಧಾರಾವಾಹಿ (Serial) ಶೀಘ್ರದಲ್ಲೇ ಕೊನೆಯಾಗ್ತಿದೆಯಂತೆ. ಲಚ್ಚಿ ಸಂಗಮ್ ಒಂದಾದ ಬೆನ್ನಲ್ಲೇ ಈ ಧಾರಾವಾಹಿ ಮುಗಿಯುವ ಬಗ್ಗೆ ಸುದ್ದಿ ಕೇಳಿಬಂದಿದೆ. ಅದಕ್ಕೆ ತಕ್ಕಂತೆ ಎಪಿಸೋಡ್ ಗಳು ಸಹ ಪ್ರಸಾರವಾಗುತ್ತಿವೆ.
ಕಳೆದ ವರ್ಷ ಅಂದರೆ 2023ರ ಫೆಬ್ರವರಿ 6ಕ್ಕೆ ಪ್ರಸಾರ ಆರಂಭಿಸಿದ ಧಾರಾವಾಹಿ ಆರಂಭದಲ್ಲೇ ಜನಮನಸ್ಸು ಗೆದ್ದಿತ್ತು. ಈ ಸೀರಿಯಲ್ (Namma Lacchi) ಬಂಗಾಳಿ ಭಾಷೆಯ ಪೋಟಲ್ ಕುಮಾರ್ ಗಾನಾವಾಲ ಧಾರಾವಾಹಿಯ ಅಧಿಕೃತ ರೀಮೆಕ್ ಆಗಿತ್ತು, ಆದರೆ ನಮ್ಮ ನೇಟಿವಿಟಿಗೆ ತಕ್ಕಂತೆ ಅದ್ಭುತವಾಗಿ ಮೂಡಿ ಬಂದಿತ್ತು.
ಸಂಗಮ್ ಎಂಬ ಗಾಯಕ ಸಂಪಿಗೆಪುರಕ್ಕೆ ಬಂದಾಗ ಅಲ್ಲಿನ ಗ್ರಾಮದ ಹುಡುಗಿ ಗಿರಿಜಾ ಪ್ರೀತಿಯಲ್ಲಿ ಬಿದ್ದು, ಆಕೆಯನ್ನು ಗುಟ್ಟಾಗಿ ಮದುವೆಯಾಗುತ್ತಾನೆ, ಬಳಿಕ ಸಿಟಿ ಸೇರಿದವನು, ಅಣ್ಣ ಸಾಗರ್, ತಮ್ಮನ ಒಳಿತಿಗಾಗಿ ಮಾಡಿದ ಮೋಸದಿಂದ ಕರಿಯರ್ ಆಯ್ಕೆ ಮಾಡಿ, ಶ್ರೀಮಂತೆ ದೀಪಿಕಾ ಎನ್ನುವವಳನ್ನು ಮದುವೆಯಾಗಿ ರಿಯಾ ಎನ್ನುವ ಮಗಳ ತಂದೆಯಾಗುತ್ತಾನೆ.
ಇತ್ತ ಸಂಪಿಗೆಪುರದಲ್ಲಿ ಸಂಗಮ್ ನ ಪ್ರೀತಿಯಲ್ಲಿ ಕಾಯುತ್ತಿರುವ ಗಿರಿಜಾ, ಅವನ ಮಗುವಿಗೆ ಜನ್ಮ ನಿಡುತ್ತಾಳೆ. ಮಗಳು ಲಚ್ಚಿ ಅಪ್ಪನಂತೆ ಅದ್ಭುತ ಗಾಯಕಿ. ಬಳಿಕ ಅಮ್ಮನ ಸಾವಿನ ನಂತರ ರಾಕ್ಷಸಿ ಅತ್ತೆಯ ಕೈಯಿಂದ ತಪ್ಪಿಸಿ ಹುಡುಗನಂತೆ ವೇಷಮರೆಸಿ, ಯಾರೆಂದೂ ನೋಡೇ ಇರದ ಅಪ್ಪನನ್ನು ಹುಡುಕುತ್ತಾ ಸಂಗಮ್ ಮನೆ ಸೇರುತ್ತಾಳೆ.
ಅಲ್ಲಿಂದ ಅಪ್ಪ -ಮಗಳ ಬಾಂಧವ್ಯ ಆರಂಭವಾಗುತ್ತದೆ. ನಂತರ ದೀಪಿಕಾ ಸಂಚಿಗೂ ಲಚ್ಚಿ ಬಲಿಯಾಗುತ್ತಾಳೆ. ಕೊನೆಗೆ ತನಗೊಬ್ಬ ಮಗಳು ಇರೋ ವಿಷಯ ತಿಳಿದ ಸಂಗಮ್ ಆಕೆಯನ್ನು ಹುಡುಕಿ ಮತ್ತೆ ಸಂಪಿಗೆಪುರಕ್ಕೆ ತೆರಳುತ್ತಾನೆ. ಅಲ್ಲಿಯೇ ಮತ್ತೆ ಅಪ್ಪ ಮಗಳು ಒಂದಾಗುತ್ತಾರೆ.
ಇದೀಗ ಸಂಗಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಜಾಜಿ ರೂಪದಲ್ಲಿರೋ ಗಿರಿಜಾಗೆ ನೆನಪಿನ ಶಕ್ತಿ ವಾಪಾಸು ಬರುತ್ತಿದೆ. ದೀಪಿಕಾಳ ಮೋಸದ ಆಟ ತಿಳಿದು ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಅಲ್ಲಿಗೆ ಸೀರಿಯಲ್ ಮುಗಿಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಈ ಸುದ್ದಿ ಕೇಳಿದಾಗಿನಿಂದಲೇ ವೀಕ್ಷಕರು ಮಾತ್ರ ಬೇಸರಗೊಂಡಿದ್ದಾರೆ. ಎಲ್ಲೂ ಎಳೆಯದೇ, ಬೇಡವಾದದ್ದನ್ನು ತೋರಿಸದೆ ಮುಂದುವರೆದುಕೊಂಡು ಹೋದ ಅತ್ಯುತ್ತಮ ಧಾರಾವಾಹಿ ಇದು, ಪ್ರತಿ ಎಪಿಸೋಡ್ ಇಂಟ್ರಸ್ಟಿಂಗ್ ಆಗಿತ್ತು, 1000 ಎಪಿಸೋಡ್ ತಲುಪುವ ಆಸೆ ನಮಗಿತ್ತು, ಆದರೆ ಸೀರಿಯಲ್ ಕೊನೆಯಾಗುವ ಸುದ್ದಿ ಕೇಳಿ ಬೇಸರವಾಗಿದೆ ಎಂದು ಬೇಜಾರು ವ್ಯಕ್ತಪಡಿಸ್ತಿದ್ದಾರೆ.