- Home
- Entertainment
- TV Talk
- ಮಗ ಹುಟ್ಟಿದ್ಮೇಲೆ 'ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ' ನಟಿ Radhika Rao ಇಷ್ಟೆಲ್ಲ ಸಣ್ಣ ಆಗಿದ್ದು ಹೇಗೆ?
ಮಗ ಹುಟ್ಟಿದ್ಮೇಲೆ 'ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ' ನಟಿ Radhika Rao ಇಷ್ಟೆಲ್ಲ ಸಣ್ಣ ಆಗಿದ್ದು ಹೇಗೆ?
ರಾಧಾ ಕಲ್ಯಾಣ, ಮಂಗಳೂರು ಹುಡುಗಿ ಹುಬ್ಬಳಿ ಹುಡುಗ ಧಾರಾವಾಹಿ ನಟಿ ರಾಧಿಕಾ ರಾವ್ ಅವರು ಮಗನಿಗೆ ಜನ್ಮ ನೀಡಿದ ಬಳಿಕ ತೂಕ ಇಳಿಸಿಕೊಂಡಿದ್ದು, ವಿಶೇಷವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಎಷಿಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ.

ಎರಡು ಮಗು ಹೆತ್ತಿದ್ಯಾ ಅಂತ ಕೇಳಿದ್ರು
“ನೀನು ಎರಡು ಮಗು ಹೆತ್ತಿದ್ಯಾ? ಎಂದು ಕೇಳಿದರು. ಆಮೇಲೆ ದಪ್ಪ ಇರೋ ಹೆಂಗಸು ಕೂಡ ನನಗೆ ದಪ್ಪ ಎಂದು ಕಾಮೆಂಟ್ ಮಾಡಿದ್ದರು. ದಪ್ಪ ಇರೋದಿಕ್ಕೆ ಸೀರಿಯಲ್ ಸಿಗ್ತಿಲ್ವಾ ಎಂದು ಕೇಳಿದ್ದರು. ಇದೆಲ್ಲ ಬೇಸರ ಆಗಿತ್ತು. ನಾನು ದಪ್ಪ ಆದಕೂಡಲೇ ಜನರು ಬಾಯಿಗೆ ಬಂದಂತೆ, ಅಸಹ್ಯವಾಗಿ ಮಾತನಾಡಿದ್ದರು. ಇದು ನನಗೆ ಬೇಸರ ತಂದಿತ್ತು. ಆದರೆ ನಾನು ತಿನ್ನೋದು ಕಮ್ಮಿ ಮಾಡುವ ಹಾಗೆ ಇರಲಿಲ್ಲ.
ಮಗುವಿಗೆ ಹಾಲುಣಿಸಬೇಕಿತ್ತು
“ಯಾರು ಏನೇ ಹೇಳಿದರೂ ಕೂಡ ನಾನು ಎರಡೂವರೆ ವರ್ಷ ಮಗುವಿಗೆ ಹಾಲುಣಿಸಬೇಕು ಎಂದುಕೊಂಡಿದ್ದೆ. ನಾನು ಕಡಿಮೆ ತಿಂದರೆ ಮಗುವಿಗೆ ಸಮಸ್ಯೆ ಆಗುತ್ತದೆ ಎನ್ನೋದು ಗೊತ್ತಿತ್ತು. ಮಗನಿಗೋಸ್ಕರ ನಾನು ಡಯೆಟ್ ಮಾಡಲಿಲ್ಲ. ಜಿಮ್‌ಗೂ ಕೂಡ ಹೋಗೋಕೆ ಆಗಿರಲಿಲ್ಲ. ನನ್ನ ಮಗುವನ್ನು ನಾನೇ ನೋಡಿಕೊಳ್ಳಬೇಕು ಎನ್ನೋದಿತ್ತು, ನನ್ನ ಗಂಡ ಮಗುವನ್ನು ನೋಡಿಕೊಳ್ತಾರೆ, ಆದರೆ ಅವರಿಗೆ ಕೆಲಸ ಇರುತ್ತದೆ, ತಾಯಿಯಾಗಿ ಸಂಪೂರ್ಣ ಗಮನ ಕೊಡಬೇಕು ಎಂದುಕೊಂಡಿದ್ದೆ.
ದಪ್ಪ ಇದ್ದೀನಿ ಅಂತ ನಾನೇ ಹೇಳಿದ್ದೆ
ಈ ಮಧ್ಯೆ ನನಗೆ ಸೀರಿಯಲ್ ಆಫರ್ ಕೂಡ ಬಂದಿತ್ತು. ನಾನೇ ದಪ್ಪ ಇದ್ದೀನಿ, ಪಾತ್ರ ಮಾಡೋಕೆ ಆಗೋದಿಲ್ಲ ಅಂತ ಕೂಡ ಹೇಳಿದ್ದೆ. ಮಗನಿಗೆ ಎರಡೂವರೆ ವರ್ಷದ ಬಳಿಕ ನಾನು ಸಣ್ಣ ಆಗಬೇಕು ಅಂತ ನಿರ್ಧಾರ ಮಾಡಿದೆ. ಈ ಥರ ನೆಗೆಟಿವ್ ಮಾತನಾಡೋರಿಗೆ ನಾನು ಉತ್ತರ ಕೊಡಬೇಕು ಎನ್ನೋದು ಮನಸ್ಸಿನಲ್ಲಿತ್ತು.
ಇಷ್ಟ ಆಗಿದ್ದೆಲ್ಲ ತಿನ್ನೋಕೆ ಶುರು ಮಾಡಿದೆ
ಮೊದಲು S Size ಬಟ್ಟೆ ಹಾಕ್ತಿದ್ದೆ, ಆಮೇಲೆ XL, XXL ಬಟ್ಟೆ ಹಾಕೋ ಥರ ಆಗಿತ್ತು. ನಾನಂತೂ ಹೊರಗಡೆಯೇ ಹೋಗುತ್ತಿರಲಿಲ್ಲ. ನಾನು ನಿನ್ನನ್ನು ಒಪ್ಪಿಕೊಂಡಿದ್ದೀನಿ, ಬೇರೆಯವರ ಬಗ್ಗೆ ಯಾಕೆ ಯೋಚನೆ ಮಾಡುತ್ತೀಯಾ ಎಂದು ನನ್ನ ಗಂಡ ಕೂಡ ಹೇಳಿದ್ದರು. ದಪ್ಪ ಇದ್ದಾಗ ಜಾಸ್ತಿ ಕೆಲಸ ಮಾಡೋಕೆ ಆಗುತ್ತಿರಲಿಲ್ಲ, ಸುಸ್ತು ಕೂಡ ಆಗುತ್ತಿತ್ತು. ನನಗೆ ಹೀಗೆ ತಿನ್ನು, ಹಾಗೆ ತಿನ್ನು ಅಂತ ಹೇಳೋರು ಯಾರೂ ಇರಲಿಲ್ಲ, ಹೀಗಾಗಿ ತಾಯಿ ಕೊಟ್ಟಿದ್ದನ್ನು ತಿನ್ನುತ್ತ ದಪ್ಪಗಾದೆ. ಏನು ಇಷ್ಟ ಆಗುವುದೋ ಅದನ್ನೆಲ್ಲ ತರಿಸಿಕೊಂಡು ತಿಂದಿದ್ದೇನೆ.
75kg - 58 Kg ತೂಕ ಇಳಿಸಿದೆ
ಕೊನೆಗೂ ಸಣ್ಣ ಆಗಬೇಕು ಎಂದಾಗ ನಾನು ಒಂದಿಷ್ಟು ರಿಸರ್ಚ್ ಮಾಡಿದೆ. ಅದಕ್ಕೆ ತಕ್ಕಂತೆ ಡಯೆಟ್ ಪ್ಲ್ಯಾನ್ ಮಾಡಿದೆ, ಸಣ್ಣ ಆಗಿದೆ. ಸಣ್ಣ ಆಗೋಕೆ ಒಟ್ಟಾರೆಯಾಗಿ ಎಂಟು ತಿಂಗಳುಗಳ ಕಾಲ ನಾನು ಟೈಮ್ ತಗೊಂಡೆ. ನಾನು ಈಗಲೂ ಡಯೆಟ್ ಕಡೆ ಹೆಚ್ಚು ಗಮನ ಕೊಡುತ್ತೇನೆ. ಡೆಲಿವರಿ ಆದಾಗ 75 ಕೆಜಿ ತೂಕ ಇದ್ದೆ, ಈಗ 58 ಕೆಜಿ ಆಗಿದ್ದೀನಿ. ಆರಂಭದಲ್ಲಿ ಸೀರಿಯಲ್‌ಗೆ ಬಂದಾಗ ನಾನು 50kg ಇದ್ದೆ.
ಡಯೆಟ್ ಹೇಗಿತ್ತು?
ನಾನು ಸಸ್ಯಾಹಾರಿ. ತರಕಾರಿ, ಹಣ್ಣುಗಳನ್ನು ಜಾಸ್ತಿ ತಿಂದಿದ್ದೇನೆ. ಯಾರು ಎಷ್ಟೇ ಹೇಳಿದರೂ ಕೂಡ ಜಂಕ್, ಸ್ವೀಟ್ ತಿನ್ನಲೇ ಇಲ್ಲ. ಬೆಳಗ್ಗೆ ಹಣ್ಣು, ಮಧ್ಯಾಹ್ನ ಸ್ವಲ್ಪ ಅನ್ನದ ಜೊತೆ ತರಕಾರಿ, ಕಾಳುಗಳು ತಿಂದೆ, ಎಣ್ಣೆ ಪದಾರ್ಥವನ್ನು ನಾನು ಮುಟ್ಟಿಲ್ಲ. ಇಷ್ಟು ದಿನಗಳಲ್ಲಿ ಚೀಟ್ ಮೀಲ್ ಮಾಡಿಲ್ಲ.
ತಿನ್ನಬೇಕು ಎಂಬ ಆಸೆ ಆಗತ್ತೆ
ಡಯೆಟ್ ಮಾಡಬೇಕು ಎಂದಾಗ ಮಾನಸಿಕವಾಗಿ ತುಂಬ ಕಷ್ಟ ಆಗತ್ತೆ, ಅತ್ತಿದ್ದೀನಿ. ದೇವರು ನಮ್ಮನ್ನು ದಪ್ಪ ಮಾಡಿ ಜನರ ಕೈಯಲ್ಲಿ ಈ ಥರ ನೆಗೆಟಿವ್ ಮಾತುಗಳನ್ನು ಹೇಳಿಸ್ತಾನೆ, ಅದು ತಿನ್ನೋಣ, ಇದು ತಿನ್ನೋಣ ಅಂತ ಆಸೆ ಹುಟ್ಟಿಸ್ತಾನೆ, ಆಮೇಲೆ ಸಣ್ಣ ಆಗಬೇಕು ಅಂತ ತಿನ್ನದಿರೋ ಥರ ಮಾಡ್ತಾನೆ ಅಂತೆಲ್ಲ ಬೈದುಕೊಂಡಿದ್ದೀನಿ.
ಗರ್ಭಿಣಿ ಆದಾಗ ತುಂಬ ತಿನ್ನುತ್ತಿದ್ದೆ
ನಾನು ಮಗುವಿಗೆ ಹಾಲುಣಿಸುವಾಗ ತುಂಬ ತಿನ್ನುತ್ತಿದ್ದೆ. ನನ್ನ ಗಂಡನೇ ಒಮ್ಮೆ, ನೀನು ಇಷ್ಟು ತಿನ್ನೋಳಲ್ಲ, ಯಾಕೆ ಇಷ್ಟು ತಿಂತಿದ್ಯಾ ಅಂತ ಕೇಳಿದ್ದುಂಟು. ಗರ್ಭಿಣಿಗೆ ಜಾಸ್ತಿ ತಿನ್ನಬೇಕು ಅಂತ ಅನಿಸುತ್ತದೆ, ಅವರಿಗೆ ಗೊತ್ತಿರಲಿಲ್ಲ.
ಹಸಿದುಕೊಂಡಿದ್ದರೆ ಮೈಗ್ರೇನ್ ಬರತ್ತೆ
ಒಂದು ದಿನ ಡಯೆಟ್ ಮಾಡಿದರೆ, ಇನ್ನೊಂದು ದಿನ ಇರೋದೊಂದು ಲೈಫ್, ಯಾಕೆ ಇಷ್ಟೆಲ್ಲ ಮಾಡಬೇಕು, ತಿನ್ನೋಣ ಅಂತ ಕೂಡ ಅನಿಸುತ್ತದೆ. ನಾನು ಒಂದು ದಿನವಂತೂ ಐಸ್‌ಕ್ರೀಂ ಸೇರಿ ಎಲ್ಲವನ್ನು ತರಿಸಿಕೊಂಡು ತಿಂದಿದ್ದೇನೆ. ಅಷ್ಟು ಮಾನಸಿಕವಾಗಿ ಸಮಸ್ಯೆ ಆಗುತ್ತದೆ. ನನಗೆ ಮೈಗ್ರೇನ್ ಇದೆ, ಆ ಮೈಗ್ರೇನ್ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಹಾಕಿಸಿಕೊಂಡು ಅಡ್ಮಿಟ್ ಆಗಬೇಕು, ಅಷ್ಟರಮಟ್ಟಿಗೆ ಇರುತ್ತದೆ, ನನಗೆ ಹಸಿವು ಇದ್ದರೆ ಮೈಗ್ರೇನ್ ಶುರು ಆಗುವುದು. ಹೀಗಾಗಿ ನಾನು ಸ್ವಲ್ಪ ಸ್ವಲ್ಪ ಅಂತ ತಿನ್ನೋದನ್ನು ಕಮ್ಮಿ ಮಾಡುತ್ತ ಬಂದೆ. ಈಗ ನನ್ನ ಮುಂದೆ ನೀವು ಏನೇ ತಿಂಡಿ ಇಟ್ಟರೂ ಕೂಡ ತಿನ್ನೋದಿಲ್ಲ, ಆಸೆಯೂ ಆಗೋದಿಲ್ಲ, ಕಂಟ್ರೋಲ್ ಮಾಡಿಕೊಳ್ತೀನಿ.
ಮತ್ತೆ ಸೀರಿಯಲ್ ಮಾಡ್ತೀನಿ
ಈಗ ಆರೋಗ್ಯವಾಗಿದ್ದೀನಿ, ಡಯೆಟ್ ಎಂದು ತುಂಬ ಕಡಿಮೆ ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳಲು ಕೂಡ ನಾನು ರೆಡಿ ಇಲ್ಲ. ನನ್ನ ಮಗುಗೋಸ್ಕರ ನಾನು ಚೆನ್ನಾಗಿರಬೇಕು ಎನ್ನೋದಿದೆ. ಈಗ ಸೀರಿಯಲ್‌ಗಳಿಂದ ಆಫರ್ ಬರುತ್ತಿದೆ. ವಿಲನ್ ಪಾತ್ರ ಮಾಡುವ ಆಸೆಯೂ ಇದೆ.
ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದೀನಿ, ನನಗೆ ಅವಕಾಶ ಸಿಕ್ಕಕೂಡಲೇ ತೆರೆ ಮೇಲೆ ಕಾಣಿಸಿಕೊಳ್ತೀನಿ.