ಕೇವಲ 1 ರೂ ಕಡಿಮೆಯಾಗಿದ್ದಕ್ಕೆ ಕರಿಮಣಿ ಅಡವಿಟ್ಟು ಅನುಶ್ರೀ ಸ್ಕೂಲ್ ಫೀಜ್ ಕಟ್ಟಿದ್ದ ಅಮ್ಮ
ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ತುಳುವಿನ ಪಾಡ್ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ತಂದೆ ಬಿಟ್ಟು ಹೋದಾಗ ತನ್ನ ತಾಯಿ ಜೀವನದಲ್ಲಿ ಕಷ್ಟ ಪಟ್ಟ ದಿನಗಳ ಬಗ್ಗೆ ನನೆದು ಕಣ್ಣೀರಾದರು. ದಿ ಪವರ್ ಹೌಸ್ ವೈನ್ಸ್ ಯೂಟ್ಯೂಬ್ ನಲ್ಲಿ ಸಂಫೂರ್ಣ ಸಂದರ್ಶನ ಲಭ್ಯವಿದೆ.
ನನ್ನ ಪ್ರಕಾರ ನನ್ನ ಜೀವನದಲ್ಲಿ ಅಮ್ಮ ಬಹುದೊಡ್ಡ ಹಿರೋ. ಅವರು ಈವರೆಗೂ ನಮ್ಮ ಎದುರು ಕಣ್ಣಿರು ಹಾಕಿದ್ದನ್ನು ನೋಡಿಯೇ ಇಲ್ಲ. ಅವರಿಗೆ ಅಷ್ಟೊಂದು ಗಟ್ಟಿ ಮನಸ್ಸಿದೆ. ಅವರು ಯಾರ ಹಂಗಲ್ಲೂ ಇರಲಿಲ್ಲ. ನಮಗೂ ಅದರ ಅಭ್ಯಾಸವನ್ನು ಮಾಡಿಸಿಲ್ಲ. ಯಾವ ನೆಂಟರ ಮನೆಯಲ್ಲೂ ನಾವಿರಲಿಲ್ಲ. ಬಾಡಿಗೆ ಮನೆಯಲ್ಲಿದ್ದೆವು. ಅಮ್ಮನ ಬಳಿ 4 ಸೀರೆ ಇತ್ತು.
ನಾವು ಯಾವುದೋ ಒಂದು ಬಾವಿಯಿಂದ ನೀರು ತರುತ್ತಿದ್ದೆವು. ಒಂದು ಹೊತ್ತಿನ ಊಟಕ್ಕೂ ಅಷ್ಟು ಕಷ್ಟವಾಗಿತ್ತು. ಅಮ್ಮನಿಗೆ ಪ್ಯಾಕಿಂಗ್ ಮಾಡುತ್ತಿದ್ದಾಗ 200 ರೂ ಸಂಬಳ ಇತ್ತು. ಆರ್ಥಿಕ ಸಮಸ್ಯೆಯಿಂದ ತಮ್ಮನನ್ನು ಇಂಗ್ಲೀಷ್ ಮೀಡಿಯಂಗೆ ಹಾಕಲಾಗಲಿಲ್ಲ. ಹೀಗಾಗಿ ಅಶೋಕನಗರದ ಸರಕಾರಿ ಶಾಲೆಗೆ ಸೇರಿಸಿದರು. ಇಂದು ನನ್ನ ತಮ್ಮ ನನಗಿಂತ ಬುದ್ದಿಶಾಲಿಯಾಗಿದ್ದಾನೆ. ನನಗೆ ಹೆಮ್ಮೆ ಇದೆ.
ನನ್ನ ತಮ್ಮ ಅಂಗನವಾಡಿಗೆ ಹೋಗುತ್ತಿದ್ದಾಗ ಪೌಷ್ಟಿಕ ಆಹಾರ ಎಂದು 2 ಪ್ಯಾಕೇಟ್ ಸಿಗುತ್ತಿತ್ತು. ನಾನು ಅವರಲ್ಲಿ ರಿಕ್ವೆಸ್ಟ್ ಮಾಡಿ ಮತ್ತೆರಡು ತೆಗೆದುಕೊಂಡು ಬರುತ್ತಿದ್ದೆ. ಊಟ ಇಲ್ಲ ಎಂದಾಗ ಎಷ್ಟೋ ಬಾರಿ ನೀರಿನಲ್ಲಿ ಅದನ್ನು ಕಲಸಿ ರೊಟ್ಟಿ ತರ ಮಾಡಿ ನಾವು ತಿಂದಿದ್ದೇವೆ, ನಮಗೇ ಅದೇ ಊಟ ಆಗಿತ್ತು. ಆವಾಗ ಬರದವರು, ಈಗ ಬಂದು ನಾನು ಅಪ್ಪ ಎಂದರೆ ಅದನ್ನು ಒಪ್ಪಿಕೊಳ್ಳಲು ನಾನು ರೆಡಿ ಇಲ್ಲ. ಯಾಕೆಂದರೆ ನನ್ನ ಅಮ್ಮನೇ ನನಗೆ ನನ್ನ ಅಪ್ಪ. ಎಂತ ಸಂಬಂಧ ಇದ್ದರೂ ಅದು ಅಮ್ಮನೊಂದಿಗೆ ಮಾತ್ರ.
ಇದು ಕೊರಗಜ್ಜನ ಮೇಲಾಣೆ. ಇದು ಉತ್ಪ್ರೇಕ್ಷಿತವಲ್ಲ. ನಮ್ಮ ಶಾಲೆಯ ಫೀಸ್ ಕಟ್ಟಲು ಖಾಲಿ 1 ರೂ ಕಡಿಮೆ ಆಯ್ತು ಎಂದಿದ್ದಕ್ಕೆ ಅಮ್ಮ ತನ್ನ ಅವರ ತಾಳಿ ಸರ ಅಡವಿಟ್ಟು ಶಾಲೆಯ ಫೀಸ್ ಕಟ್ಟಿದ್ದಾರೆ. ಯಾರೇ ಸಿಂಗಲ್ ಪೇರೆಂಟ್ ಇದ್ದರೂ ನೀವು ಬಿಟ್ಟು ಬಿಡಬೇಡಿ. ನಾನು ಬಿಟ್ಟು ಹೋಗುವ ಪೋಷಕರಿಗೂ ಇಷ್ಟೇ ಹೇಳುತ್ತೇನೆ. ನೀವು ಹುಟ್ಟಿಸಿದಿರಿ ಅನ್ನುವ ಕಾರಣಕ್ಕೆ ಅಪ್ಪ-ಅಮ್ಮ ಆಗುವುದಿಲ್ಲ. ನೀವು ಮಕ್ಕಳ ಭವಿಷ್ಯದ ಬೆಳವಣಿಗೆಗೆ ಕಾರಣವಾದರೆ ಮಾತ್ರ ಪೋಷಕರೆಂದು ಕರೆಯಬಹುದು. ಇದು ಬಹಳ ದೊಡ್ಡ ಜವಾಬ್ದಾರಿ. ಮದುವೆ ಮಕ್ಕಳು ಎಂಬುದು ಬಹಳ ದೊಡ್ಡ ಜವಾಬ್ದಾರಿ. ನಿಮ್ಮ ಮನಸ್ಸಲ್ಲಿ ಯೋಚಿಸಿ ಜವಾಬ್ದಾರಿ ತೆಗೆದುಕೊಳ್ಳಲು ತಾಕತ್ ಇಲ್ಲವೆಂದರೆ ಅದನ್ನು ತೆಗೆದುಕೊಳ್ಳಲು ಹೋಗಲೇ ಬೇಡಿ. ಇನ್ನೊಂದು ಜೀವವನ್ನು ಯಾಕೆ ಕಷ್ಟಕ್ಕೆ ದೂಡುತ್ತೀರಿ.
ಒಂದು ಹೆಣ್ಣು ತನ್ನವರನ್ನು ಬಿಟ್ಟು ಮನೆ ಬಿಟ್ಟು, ನಿಮ್ಮನ್ನು ನಂಬಿ ಬರುತ್ತಾಳೆ. ನೀವು ಅವರನ್ನು ಬಿಡುವಂತೆಯೇ ಇಲ್ಲ. ಮಕ್ಕಳನ್ನು ಹುಟ್ಟಿಸಿದ ನಂತರ ನಾನು ಮಕ್ಕಳನ್ನು ನೋಡಿಕೊಳ್ಳಲು ತಯಾರಿಲ್ಲ ಎಂದರೆ ಪಾಪ ಆ ಮಕ್ಕಳು ಏನು ತಪ್ಪು ಮಾಡಿರುತ್ತಾರೆ. ಅವರ ಕಷ್ಟ, ಅವರ ಜೀವನ ಕೇಳೋದ್ಯಾರು? ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಶಕ್ತರಾಗಿದ್ದೀರಿ ಎಂದರೆ ಮಾಡಿ. ಇಲ್ಲ ಅಂತಹ ವಿಚಾರಗಳಿಗೆ ಹೋಗಲೇ ಬೇಡಿ. ಇದು ಎಲ್ಲಾ ಸಿಂಗಲ್ ಪೇರೆಂಟ್, ಮದುವೆ ಆಗಲು ತಯಾರಾದವರು, ಅಗದವರಿಗೆ ಎಲ್ಲಿಗೂ ಹೇಳುತ್ತಿದ್ದೇನೆ.