ಮತ್ತೊಂದು ಸೀರಿಯಲ್‌ಗೆ ಖಡಕ್ ಲಾಯರ್ ಆಗಿ ಎಂಟ್ರಿ ಕೊಟ್ಟ ಧನುಷ್ ಗೌಡ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿ ಶಂಕರ ಧಾರಾವಾಹಿಗೆ ಇದೀಗ ಲಾಯರ್ ಆಗಿ ಎಂಟ್ರಿ ಕೊಡ್ತಿದ್ದಾರೆ ಗೀತಾ ಸೀರಿಯಲ್ ಖ್ಯಾತಿಯ ವಿಜಿ ಆಲಿಯಾಸ್ ಧನುಷ್ ಗೌಡ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗೀತಾ ಸೀರಿಯಲ್ ಬಹಳ ಜನಪ್ರಿಯತೆ ಪಡೆದಿತ್ತು, ಸೀರಿಯಲ್ ಕೊನೆಯಾದರೂ ಸೀರಿಯಲ್ ಪಾತ್ರಧಾರಿಗಳು ಇಂದಿಗೂ ಜನರ ಫೇವರಿಟ್. ಸೀರಿಯಲ್ ನಟ ಧನುಷ್ ಗೌಡ (Dhanush Gowda) ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ.
ಗೀತಾ ಸೀರಿಯಲ್‌ನಲ್ಲಿ ನಾಯಕ ವಿಜಿಯಾಗಿ ಮಿಂಚಿದ್ದ ಧನುಷ್ ಗೌಡ ಇದೀಗ ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರವಾಗುತ್ತಿರುವ ಗೌರಿ ಶಂಕರ ಧಾರವಾಹಿಯಲ್ಲಿ ಲಾಯರ್ ಆಗಿ ಎಂಟ್ರಿ ಕೊಡ್ತಿದ್ದಾರೆ.
ಕೊಲೆ ಕೇಸ್ ಮೇಲೆ ಗೌರಿಯ ತಂದೆ ಜೈಲು ಸೇರಿದ್ದಾರೆ. ಆದರೆ ಅವರನ್ನು ಬಿಡಿಸೋಕೆ ಯಾವ ಲಾಯರ್ ಕೂಡ ತಯಾರಿರೋದಿಲ್ಲ, ಗೌರಿ ಮತ್ತು ಮನೆಯವರೆಲ್ಲರೂ ಯಾಕೆ ಅಪ್ಪಾಜಿಯ ಕೇಸ್ ಯಾರು ತೆಗೆದುಕೊಳ್ಳುತ್ತಿಲ್ಲ ಎನ್ನುವ ಚಿಂತೆಯಲ್ಲಿರೋವಾಗ ಹೊಸ ಲಾಯರ್ ಎಂಟ್ರಿಯಾಗುತ್ತೆ.
ಖಡಕ್ ಲಾಯರ್ ಆಗಿ ಧನುಷ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಗೌರಿ ತಂದೆಯವರ ಕೇಸನ್ನು ತಾನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹಾಗಿದ್ರೆ ಗೆಲುವು ಖಚಿತ ಎನ್ನುವ ನಗು ಗೌರಿಯ ಮುಖದಲ್ಲಿ ಮೂಡಿದೆ.
ಇತ್ತೀಚೆಗಷ್ಟೇ ಸ್ಟಾರ್ ಸುವರ್ಣದ ಆಸೆ ಸೀರಿಯಲ್ ನಲ್ಲಿ ಲಾಯರ್ ಅಹನಾ ಅಗ್ನಿಹೋತ್ರ ಆಗಿ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಹರಿಪ್ರಿಯ (Haripriya) ಎಂಟ್ರಿ ಕೊಟ್ಟಿದ್ದರು. ಇದೀಗ ಸೀರಿಯಲ್ ಇದೇ ವಾಹಿನಿಯ ಮತ್ತೊಂದು ಸೀರಿಯಲ್ ಗೆ ಧನುಷ್ ಲಾಯರ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಧನುಷ್ ಗೌಡರನ್ನು ಮತ್ತೆ ಸೀರಿಯಲ್ ನಲ್ಲಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ರಾಯಲ್ ಎಂಟ್ರಿ, ವಿಜಿ ಅಣ್ಣ ನಿಮ್ಮನ್ನ ನೋಡಿ ಖುಷಿ ಆಯ್ತು ಎಂದು ಹೇಳಿದ್ದಾರೆ. ಇನ್ನು ಕೆಲವರು ಅಹನಾ ಅಗ್ನಿಹೋತ್ರ ಇದ್ರಲ್ವಾ? ಮತ್ತೆ ಇವರ್ಯಾಕೆ ಎಂದು ಸಹ ಕೇಳಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಗೌರಿ ಶಂಕರ (Gouri Shankara) ಕೂಡ ಒಂದು. ಈ ಸಿರಿಯಲ್ ನಲ್ಲಿ ಯಶವಂತ್ ಮತ್ತು ದಿವ್ಯಾ ವಾಗೂಕರ್ ನಟಿಸುತ್ತಿದ್ದಾರೆ. ವಿಭಿನ್ನ ಕತೆಯ ಮೂಲಕ ಸೀರಿಯಲ್ ಅದ್ಭುತವಾಗಿ ಮೂಡಿ ಬರುತ್ತಿದೆ.