ಡ್ರೋನ್ ವಿಜ್ಞಾನಿ ಎಂದು ಪುಂಗಿ ಬಿಟ್ಟು, ಬಿಗ್ ಬಾಸ್‌ಗೆ ಹೋಗಿಬಂದ ಪ್ರತಾಪ್ ಇದೀಗ ಸಿನಿಮಾ ಹೀರೋ!
ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್, ಈಗ ಸಿನಿಮಾ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಡ್ರೋನ್ ತಂತ್ರಜ್ಞಾನದಿಂದ ರೈತರಿಗೆ ಸಹಾಯ ಮಾಡುವುದರ ಜೊತೆಗೆ, ನಟನೆಯಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಲು ಸಜ್ಜಾಗಿದ್ದಾರೆ. ಯಾವ ಸಿನಿಮಾ, ನಿರ್ದೇಶಕರಾರು, ಬಜೆಟ್ ಎಷ್ಟು ಗೊತ್ತಾ?
ರಾಜ್ಯದಲ್ಲಿ ಡ್ರೋನ್‌ಗಳನ್ನು ಸಂಶೋಧನೆ ಮಾಡಿದ್ದಾಗಿ ಹೇಳುತ್ತಾ, ಅಂತಾರಾಷ್ಟ್ರೀಯ ಮಟ್ಟದ ಡ್ರೋನ್ ವಿಜ್ಞಾನಿಗಳ ಸಮಾವೇಶದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾಗಿ, ತಾನೊಬ್ಬ ವಿಜ್ಞಾನಿ ಎಂದು ರೀಲ್ ಬಿಡುತ್ತಿದ್ದ ಡ್ರೋನ್ ಪ್ರತಾಪ್ ತಾನು ಹೇಳಿದ್ದು ಸುಳ್ಳು ಎಂಬುದು ಜಗಜ್ಜಾಹೀರು ಆಗಿತ್ತು. ಇದರ ಬೆನ್ನಲ್ಲಿಯೇ ಡ್ರೋನ್ ಪ್ರತಾಪನಿಗೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶವೂ ಸಿಕ್ಕಿತು. ರಾಜ್ಯದಲ್ಲಿ ಮನೆ ಮಾತಾಗಿದ್ದ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದು ತಾನು ಹೇಳಿದ್ದ ಎಲ್ಲ ಸುಳ್ಳುಗಳನ್ನು ಒಪ್ಪಿಕೊಂಡು ಜನರ ಮುಂದೆ ಕ್ಷಮೆ ಕೇಳಿದ್ದನು.
ಇದಾದ ನಂತರ ಬಿಗ್ ಬಾಸ್ ಮನೆಯಲ್ಲಿ ಅವರ ಆಟಕ್ಕೆ ಜನರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ,ಪ್ರತಾಪನ ತಂದೆ-ತಾಯಿಯ ಗ್ರಾಮೀಣ ಜೀವನ ಹಾಗೂ ರೈತಾಪಿ ಜೀವನವನ್ನು ಮೆಚ್ಚಿಕೊಂಡು ಆತನಿಗೆ ಭರ್ಜರಿ ಮತಗಳನ್ನು ಹಾಕುವ ಮೂಲಕ ಬಿಗ್ ಬಾಸ್ ಸೀಸನ್ 10ರಲ್ಲಿ ಫೈನಲಿಸ್ಟ್ ಆಗುವಂತೆ ಮಾಡಿದರು. ಇದಾದ ನಂತರ ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು. ಇದರಿಂದ ರಾಜ್ಯಾದ್ಯಂತ ಡ್ರೋನ್ ಪ್ರತಾಪ್‌ಗೆ ಭಾರೀ ಬೆಂಬಲ ವ್ಯಕ್ತವಾಯಿತು.
ಇನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಂತರ ತನ್ನ ಕಂಪನಿಯಲ್ಲಿ ತಯಾರಿಸಿದ್ದ ಡ್ರೋನ್ ಅನ್ನು ಹಾರಿಸಿ ರೈತರ ಕೃಷಿ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸಿದ್ದಾನೆ. ಹೀಗಾಗಿ, ಬಿಗ್ ಬಾಸ್ ಮನೆಯಲ್ಲಿ ಹೇಳಿದಂತೆ ಔಷಧಿ ಸಿಂಪಡಣೆಗೆ ರೈತರಿಗೆ ಡ್ರೋನ್ ನೀಡುವ ಮೂಲಕ ತಾನು ಹೇಳಿದ್ದನ್ನು ತಡವಾಗಿಯಾದರೂ ಸಾಧನೆ ಮಾಡಿ ತೋರಿಸಿದ್ದೇನೆ ಎಂದು ವಿಡಿಯೋ ಹರಿಬಿಟ್ಟು ಹೇಳಿದ್ದರು. ಇದಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಸಿನಿಮಾ ನಟಿ ಸಂಗೀತಾ ಶೃಂಗೇರಿ ಅವರೊಂದಿಗೆ ಬಿಗ್ ಬಾಸ್ ಮನೆಯಲ್ಲಿ ತೀರಾ ಆಪ್ತನಾಗಿದ್ದ ಡ್ರೋನ್ ಪ್ರತಾಪ್ ಸಂಗೀತಾಗೆ ದೀದಿ (ಅಕ್ಕ) ಎನ್ನುತ್ತಲೇ ಭಾವನಾತ್ಮಕವಾಗಿಯೂ ಅಟ್ಯಾಚ್‌ಮೆಂಟ್ ಬೆಳೆಸಿಕೊಂಡಿದ್ದರು. ಉಳಿದವರ ಜೊತೆಗೆ ಹೊಂದಾಣಿಕೆ ಕಡಿಮೆ ಇದ್ದರೂ, ಯಾರೊಂದಿಗೂ ಹೆಚ್ಚು ಜಗಳ ಮಾಡಿಕೊಂಡಿರಲಿಲ್ಲ. ಹೀಗಾಗಿ, ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳು ಎಲ್ಲಿಗೆ ಹೋದರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.
ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಯುವಕನಾಗಿರುವ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಹೋಗಿಬಂದ ನಂತರ ಎಲ್ಲೆಡೆ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಇನ್ನು ಇದೇ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಾಪ್ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ನಂತರ ತಾನು ಸಿನಿಮಾವೊಂದಕ್ಕೆ ನಾಯಕನಾಗಿ ನಟಿಸಲು ಸಹಿ ಹಾಕಿದ್ದಾರೆ. ಆದರೆ, ಸಿನಿಮಾ ಹೆಸರು, ನಿರ್ದೇಶಕರು, ಬಜೆಟ್ ಎಷ್ಟು, ಯಾರು ಹೀರೋಯಿನ್, ಕಥೆಯ ಹಿನ್ನೆಲೆ ಯಾವುದನ್ನೂ ಬಹಿರಂಗಪಡಿಸಿಲ್ಲ.
ಬಿಗ್ ಬಾಸ್ ಸೀಸನ್ 10ರ ಬಹುಪಾಲು ಕಂಟೆಸ್ಟೆಂಟ್‌ಗಳು ಪರಸ್ಪರ ಒಟ್ಟಿಗೆ ಸೇರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಮಜಾ ಮಾಡುತ್ತಿದ್ದಾರೆ. ಇದರೊಂದಿಗೆ ತಮ್ಮ ವೃತ್ತಿ ಹಾಗೂ ದುಡಿಮೆಗೆ ಅನುಕೂಲ ಆಗುವಂತೆ ಬೇರೆ ಬೇರೆ ದಾರಿಗಳಲ್ಲಿ ಹೋಗುತ್ತಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಸಿನಿಮಾವೊಂದಕ್ಕೆ ನಾಯಕನಾಗಿ ನಟಿಸಲು ಸಹಿ ಹಾಕಿದ್ದಾನೆ. ಈ ಮೂಲಕ ತಾನು ರೀಲ್ ಬಿಡುತ್ತಾ ರಾಜ್ಯಕ್ಕೆ ನಾಯಕನಾಗಿದ್ದನು ತನ್ನ ತಪ್ಪನ್ನು ತಿದ್ದಿಕೊಂಡು ಬಿಗ್ ಬಾಸ್ ಮನೆಗೆ ಹೋಗಿ ಅಲ್ಲಿಂದ ಬಂದು ರಿಯಲ್ ಆಗಿ ಸಿನಿಮಾದಲ್ಲಿ ನಾಯಕನಾಗಿ ನಟಿಸಲು ಮುಂದಾಗಿದ್ದಾನೆ.
ತಾನು ಅಧಿಕೃತವಾಗಿ ಸಿನಿಮಾ ಹೀರೋ ಆಗುವುದನ್ನು ಸ್ವತಃ ಡ್ರೋನ್ ಪ್ರತಾಪ್ ತಮ್ಮ ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹನುಮಂತ ದೇವರಿಗೆ ಪೂಜೆ ಮಾಡುವುದು, ಸ್ಥಳೀಯರಿಂದ ಸನ್ಮಾನ ಸ್ವೀಕರಿಸುವುದು ಹಾಗೂ ಜನರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿರುವ ದೃಶ್ಯಗಳ ಜೊತೆಗೆ, ತಾನು ಮಾತನಾಡಿದ ವಿಡಿಯೋ ತುಣುಕನ್ನೂ ಸೇರಿಸಿದ್ದಾರೆ.
ಇದರಲ್ಲಿ ನಾನು ಒಂದು ಸಿನಿಮಾದ ನಾಯಕ ನಟನಾಗಿ ಅಭಿನಯಿಸುತ್ತಾ ಇದ್ದೀನಿ. ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ನನ್ನ ಈಗಿ ಡ್ರೋನ್ ಬ್ಯೂಸಿನೆಸ್‌ನ ಜೊತೆಗೆ ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದೇನೆ. ಶ್ರೀ ಆಂಜನೇ ಸ್ವಾಮಿ ಆಶೀರ್ವಾದದೊಂದಿಗೆ ಸಿನಿಮಾಕ್ಕೆ ಬರುತ್ತಿದ್ದು, ನಿಮ್ಮೆಲ್ಲರ ಆಶೀರ್ವಾದವೂ ನನ್ನ ಮೇಲಿರಬೇಕು ಎಂದು ಕೇಳಿಕೊಂಡಿದ್ದಾರೆ.
ಡ್ರೋನ್ ಪ್ರತಾಪ್ ವಿಡಿಯೋಗೆ ಕೆಲವರು ಪೂರಕವಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದರಲ್ಲಿ ಒಬ್ಬರು 'ಜೀವನದಲ್ಲಿ ಸೋತು ಗೆದ್ದವನು ನೀನು ಒಬ್ನಿಗೆ ನೋಡಿರೋದು ಡ್ರೋನ್ ಪ್ರತಾಪ್ ರಿಯಲ್ ವಿನ್ನರ್' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ನೀವು ಆವತ್ತು ನಿಗ್ ಬಾಸ್ ಮನೆಯಲ್ಲಿ ಹೀರೋ ಆಗಿದ್ರಿ, ಇವತ್ತು ನಿಜ ಜೀವನದಲ್ಲಿ ಹೀರೋ ಆಗುತ್ತಿದ್ದೀರಿ, ಶುಭವಾಗಲಿ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಕೆಲವರು ಹೀರೋ ಅನ್ಕೊಂಡ್ ಬಿಗ್ ಬಾಸ್ ಹೋಗ್ತಾರೆ, ಆದ್ರೆ ಪ್ರತಾಪ್ ಬಿಗ್ ಬಾಸ್ ಮನೆಯಿಂದ ಬಂದ್ ಮೇಲೆ ಹೀರೋ ಆಗಿದಾರೆ' ಎಂದು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.