ಭವ್ಯಾ ಗೌಡ ಮದುವೆ ಪ್ರಸ್ತಾಪ; ನಾಚಿಕೊಳ್ಳುತ್ತಲೇ ತ್ರಿವಿಕ್ರಮ್ ಫಸ್ಟ್ ರಿಯಾಕ್ಷನ್!
ಬಿಗ್ ಬಾಸ್ ಸೀಸನ್ 11ರಲ್ಲಿ ಭವ್ಯಾ ಗೌಡರಿಗೆ ಪ್ರೇಮ ನಿವೇದನೆ ಮಾಡಿದ್ದ ತ್ರಿವಿಕ್ರಮ್, ಇದೀಗ ಭವ್ಯಾ ಅವರನ್ನು ಮದುವೆ ಮಾಡಿಕೊಳ್ಳುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮದುವೆ ಮಾಡಿಕೊಳ್ಳುವ ವಿಚಾರದಲ್ಲಿ ನಗುತ್ತಲೇ ಭವ್ಯಾ ಚಿಕ್ಕವಳಾದಳು ನಂಗೆ ಎಂದು ಉತ್ತರ ನೀಡಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ಆಗಿರುವ ನಟ ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಯಲ್ಲಿ ನಟಿ ಭವ್ಯಾ ಅವರಿಗೆ ಪ್ರೇಮ ನಿವೇದನೆಯನ್ನೂ ಮಾಡಿದ್ದರು. ಆದರೆ, ಈ ವೇಳೆ ಭವ್ಯಾ ಅವರು ಒಪ್ಪಿಗೆ ಕೊಡದೇ, ನಿರಾಕರಿಸದೇ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಇವರಿಬ್ಬರೂ ಮದುವೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ತ್ರಿವಿಕ್ರಮ್ ಉಲ್ಟಾ ಹೊಡೆದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸುಂದರ ಜೋಡಿ ಎಂದರೆ ಅದು ನಟ ತ್ರಿವಿಕ್ರಮ್ ಮತ್ತು ನಟಿ ಭವ್ಯಾ ಗೌಡ ಅವರದ್ದು ಎಂಬ ವದಂತಿಗಳು ಹರಿದಾಡಿದ್ದವು. ಇದಕ್ಕೆ ಪೂರಕ ಎಂಬಂತೆ ಸ್ವತಃ ತ್ರಿವಿಕ್ರಮ್ ನಟಿ ಭವ್ಯಾ ಗೌಡ ಅವರಿಗೆ ಪ್ರೇಮ ನಿವೇದನೆಯನ್ನೂ ಮಾಡಿದ್ದರು.
ಇವರ ಪ್ರೀತಿಗೆ ಇತರ ಸ್ಪರ್ಧಿಗಳಾದ ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ, ಧನರಾಜ್ ಆಚಾರ್ ಅವರೂ ಸಾಕ್ಷಿಯಾಗಿದ್ದಾರೆ. ಆದರೆ, ತ್ರಿವಿಕ್ರಮ್ ಪ್ರಪೋಸ್ ಮಾಡಿದ್ದ ವೇಳೆ ಟಾಸ್ಕ್ ಒಂದರಲ್ಲಿ ಸೋತಿದ್ದರಿಂದ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳದ ಭವ್ಯಾ ಗೌಡ, ನೀನು ಆಟದಲ್ಲಿ ಗೆದ್ದು ಬಂದಿದ್ದರೆ ಒಪ್ಪಿಕೊಳ್ಳುತ್ತಿದ್ದೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದರು. ಆದರೆ, ರಿಜೆಕ್ಟ್ ಮಾಡಿರಲಿಲ್ಲ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ವೈರಲ್ ಆಗಿತ್ತು.
ಇದಾದ ನಂತರ ಮತ್ತೊಂದು ವೈರಲ್ ಆಗಿರುವ ವೀಡಿಯೋದಲ್ಲಿ ರಜತ್ ಅವರ ಬೆಡ್ ಮೇಲೆ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಜಂಟಿಯಾಗಿ ಮಾತನಾಡುತ್ತಾ ಮಲಗಿದ್ದರು. ಆದರೆ, ಬಿಗ್ ಬಾಸ್ ಮನೆಯ ಲೈಟ್ ಆನ್ ಮಾಡಿದಾಕ್ಷಣ ತ್ರಿವಿಕ್ರಮ್ ಮತ್ತು ಭವ್ಯಾ ಅವರು ಎದ್ದು ತಮ್ಮ ತಮ್ಮ ಹಾಸಿಗೆಗಳತ್ತ ಹೋಗುತ್ತಾರೆ.
ಭವ್ಯಾ ಮತ್ತು ತ್ರಿವಿಕ್ರಮ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಸ್ವತಃ ಬಿಗ್ ಬಾಸ್ ಸ್ಪರ್ಧಿಗಳ ಹಾದಿಯಾಗಿ ವೀಕ್ಷಕರೂ ಹೇಳುತ್ತಿದ್ದರು. ಇದಕ್ಕೆ ಇವರಿಬ್ಬರು ಆತ್ಮೀಯತೆಯಿಂದ ಇರುತ್ತಿದ್ದ ವಿಡಿಯೋಗಳೇ ಸಾಕ್ಷಿಯಾಗಿವೆ. ಜೊತೆಗೆ ಸ್ವತಃ ನಟಿ ಭವ್ಯಾ ಗೌಡ ಅವರ ಅಪ್ಪ ತ್ರಿವಿಕ್ರಮ್ ಅವರನ್ನು ಅಳಿಯ ಎಂದಿದ್ದ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಹನುಮಂತ ಟ್ರೋಫಿ ಗೆದ್ದಿದ್ದಕ್ಕೆ ಖುಷಿಯಿದೆ: ಖಾಸಗಿ ವಾಹಿನಿಯೊಂದರಿಂದ ನಟ ತ್ರಿವಿಕ್ರಮ್ ಅವರನ್ನು ಮಾತನಾಡಿಸುತ್ತಾ ಹನುಮಂತು ಅವರು ಬಿಗ್ ಬಾಸ್ ಸೀಸನ್ 11ರ ಟ್ರೋಫಿ ಗೆದ್ದಿದ್ದಕ್ಕೆ ಎಷ್ಟು ಖುಷಿ ಇದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ತ್ರಿವಿಕ್ರಮ್ ಅವರು, ಹನುಮಂತು ಒಂಥರಾ ನಾಟಿ ತಳಿ ಇದ್ದಹಾಗೆ. ನಮಗೆ ಕನ್ನಡಕ್ಕೆ ಸಿಕ್ಕಿರುವ ದೊಡ್ಡ ಗಿಫ್ಟ್. ಅವನು ತುಂಬಾ ಚೆನ್ನಾಗಿ ಹಾಡ್ತಾನೆ, ತುಂಬಾ ಒಳ್ಳೆಯ ವ್ಯಕ್ತಿತ್ವ ಕೂಡ ಇದೆ. ಅವನು ಇದೇ ತರಹ ಇರಲಿ. ಈಗ ಮದುವೆ ಆಗಬೇಕು ಎಂದು ನಿರ್ಧರಿಸಿದ್ದಾನೆ, ಅದಕ್ಕೂ ನಾನು ಕಂಗ್ರಾಟ್ಸ್ ತಿಳಿಸುತ್ತೇನೆ. ಅವನು ತುಂಬಾ ಒಳ್ಳೆಯ ವ್ಯಕ್ತಿ, ಅವರು ಗೆದ್ದಿದ್ದರಲ್ಲಿ ನನಗೇನೂ ಬೇಜಾರಿಲ್ಲ ಎಂದು ಹೇಳುತ್ತಾರೆ.
ಭವ್ಯಾಗೌಡಳನ್ನು ರಿಜೆಕ್ಟ್ ಮಾಡಿದ ತ್ರಿವಿಕ್ರಮ್: ನಿಮ್ಮ ಮದುವೆ ಬಗ್ಗೆ ಹೇಳಿ ಎಂದಾಗ, ನನ್ನ ಮದುವೆಗೆ ಹೆಣ್ಣು ಹುಡುಕಬೇಕು, ಇನ್ನೂ ಯಾರು ಸಿಕ್ತಾರೋ ಏನೋ ನೋಡಬೇಕು. ಯಾರನ್ನಾದರೂ ನೋಡಿ ಕಟ್ಕೊಳೋವಂಥವರು ಸಿಕ್ಕಿದರೆ ಖಂಡಿತಾ ಮದುವೆ ಮಾಡಿಕೊಳ್ಳುತ್ತೇನೆ.
ಭವ್ಯಾ ನನಗಿನ್ನೂ ಚಿಕ್ಕವಳಾಗುತ್ತಾಳೆ: ಬಿಗ್ ಬಾಸ್ ಮನೆಯಲ್ಲಿಯೇ ಹುಡುಗಿ ಸಿಕ್ಕಿದ್ದಾರೆ ಎಂದು ಗಾಸಿಪ್ ಹರಿದಾಡುತ್ತಿದೆ ಎಂದು ಪ್ರಶ್ನೆ ಮಾಡಿದಾಗ, 'ಭವ್ಯಾ ಚಿಕ್ಕವಳಾದಳು ನಂಗೆ' ಎಂದು ಹೇಳುತ್ತಾ ತ್ರಿವಿಕ್ರಮ್ ನಗಾಡುತ್ತಾರೆ. ಈ ಮೂಲಕ ತಾವೇ ಪ್ರಪೋಸ್ ಮಾಡಿದ ಭವ್ಯಾಳನ್ನು ತ್ರಿವಿಕ್ರಮ್ ರಿಜೆಕ್ಟ್ ಮಾಡಿದ್ದಾರೆ.
ನಟ ತ್ರಿವಿಕ್ರಮ್ ಅವರು ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ಆಗಿ 15 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ. ಇನ್ನು ಭವ್ಯಾ ಗೌಡ ಕೂಡ ಫೈನಲಿಸ್ಟ್ ಆಗಿದ್ದು, 5ನೇ ರನ್ನರ್ ಅಪ್ ಆಗಿ 3.5 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇದೀಗ ಇಬ್ಬರ ನಡುವಿನ ಪ್ರೇಮಕಥೆ ಹಾಗೂ ಮದುವೆ ಬಗ್ಗೆ ಗಾಸಿಪ್ ಎದ್ದಿದ್ದಕ್ಕೆ ತ್ರಿವಿಕ್ರಮ್ ಫುಲ್‌ಸ್ಟಾಪ್ ಇಟ್ಟಿದ್ದಾರೆ.
ನಟಿ ಭವ್ಯಾ ಗೌಡ ಅವರ ಕುಟುಂಬದಲ್ಲಿ ಒಟ್ಟು ನಾಲ್ಕು ಜನರು ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ಭವ್ಯಾಳ ಅಕ್ಕ ದಿವ್ಯಾ ಗೌಡ ಹಿರಿಯಳಿದ್ದಾಳೆ. ಅವರ ಮದುವೆ ವಿಚಾರವೂ ಕೂಡ ಭವ್ಯಾಳ ಮದುವೆ ವಿಚಾರಕ್ಕೆ ಅಡ್ಡ ಬಂದರೂ ಬಂದಿರಬಹುದು. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಷ್ಟಕ್ಕೂ ತ್ರಿವಿಕ್ರಮ್ ಪ್ರೀತಿ ಮತ್ತು ಮದುವೆ ಬಗ್ಗೆ ಭವ್ಯಾ ಅವರ ಅಭಿಪ್ರಾಯ ಏನಿದೆ ಎಂಬುದನ್ನೂ ನೋಡಬೇಕಿದೆ.