ದೀಪಿಕಾ ದಾಸ್ ಆರತಕ್ಷತೆಯಲ್ಲಿ ಮಿಂಚಿದ ಬಿಗ್ ಬಾಸ್ ಸ್ಪರ್ಧಿಗಳು : ಶೈನ್, ಭೂಮಿ ಎಲ್ಲಿ ಅಂತಿದ್ದಾರೆ ಫ್ಯಾನ್ಸ್!
ನಾಗಿಣಿ ಮತ್ತು ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ಅದ್ಧೂರಿ ಆರತಕ್ಷತೆ ಬೆಂಗಳೂರಲ್ಲಿ ನಡೆದಿದ್ದು, ಕಾರ್ಯಕ್ರಮಕ್ಕೆ ಬಂಧಗಳು, ಸ್ನೇಹಿತರು, ಬಿಗ್ ಬಾಸ್ ಸಹ ಸ್ಪರ್ಧಿಗಳು ಆಗಮಿಸಿ ಶುಭ ಕೋರಿದರು.
ಎಲ್ಲಿಯೂ ಸುದ್ದಿ ಮಾಡದೇ ದೂರದ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಿ, ನಂತರ ಫೋಟೋ ಶೇರ್ ಮಾಡುವ ಮೂಲಕ ಸದ್ದು ಮಾಡಿದ ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ (Deepika Das) ಇದೀಗ ಬೆಂಗಳೂರಲ್ಲಿ ಆರತಕ್ಷತೆ ನಡೆಸಿದ್ದಾರೆ.
ನಾಗಿಣಿ ಸೀರಿಯಲ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ದೀಪಿಕಾ ದಾಸ್, ಬಳಿಕ ಒಂದೆರಡು ಸಿನಿಮಾದಲ್ಲೂ ನಟಿಸಿದ್ದರು. ಆದರೆ ಅವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದ್ದು ಮಾತ್ರ ಬಿಗ್ ಬಾಸ್ ಸೀಸನ್ 7, ಈ ಸೀಸನ್ ನಲ್ಲಿ ಬಾಸ್ ಲೇಡಿಯಾಗಿ ಮನಸ್ಸು ಗೆದ್ದಿದ್ದರು.
ತಮ್ಮ ಬಹುಕಾಲದ ಗೆಳೆಯ ದೀಪಕ್ ಅವರನ್ನು ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡಿ, ಮದುವೆ ಆಗೋದಕ್ಕೆ ಇಬ್ಬರಿಗೂ ಒಪ್ಪಿಗೆ ಆದಮೇಲೆ ಇಬ್ಬರ ಮನೆಯವರೂ ಸೇರಿ, ದೀಪಿಕಾ ಆಸೆಯಂತೆ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್(Destination wedding) ಮಾಡಿದ್ದರು.
ತಮ್ಮ ಮದುವೆಯನ್ನು ಸೀಕ್ರೆಟ್ ಆಗಿಟ್ಟುಕೊಂಡಿದ್ದಕ್ಕೆ, ದೀಪಿಕಾ ದಾಸ್ ವಿರುದ್ಧ ಗರಂ ಆದವರೇ ಹೆಚ್ಚು. ಆದರೆ ಇದೀಗ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ, ಬೀಗರ ಊಟ ಕಾರ್ಯಕ್ರಮ ಮಾಡುವ ಮೂಲಕ ದೀಪಿಕಾ ಕಿರುತೆರೆ, ಹಿರಿತೆರೆ ಸ್ನೇಹಿತರು, ಗಣ್ಯರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಾರೆ.
ಬಿಗ್ ಬಾಸ್ ಸೀಸನ್ 7 ಮತ್ತು ಸೀಸನ್ 9 ರಲ್ಲಿ ದೀಪಿಕಾ ದಾಸ್ ಸ್ಪರ್ಧಿಸಿದ್ದು, ಅಲ್ಲಿ ಜೊತೆಗಿದ್ದ ಸಹ ಸ್ಪರ್ಧಿಗಳು ಮತ್ತು ನಟರೂ ಸಹ ಆರತಕ್ಷತೆಗೆ ಕಾರ್ಯಕ್ರಮಕ್ಕೆ ಬಂದು ದೀಪಿಕಾ ದಾಸ್ ಹರಸಿದ್ದಾರೆ. ಗಾಯಕಿ ವಾಸುಕಿ ವೈಭವ್ (Vasuki Vibhav) ಆಗಮಿಸಿ, ಇನ್ನೂನು ಬೇಕಾಗಿದೆ ಎನ್ನುವ ಹಾಡನ್ನು ಕೂಡ ಹಾಡಿದ್ದಾರೆ.
ಇನ್ನು ಕಾರ್ಯಕ್ರಮಕ್ಕೆ ಚಂದನಾ ಅನಂತಕೃಷ್ಣ, ಪ್ರಿಯಾಂಕಾ, ಪನ್ನಗಾಭರಣ, ಕಿಶನ್ ಬಿಳಗಲಿ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ನೀತು ವನಜಾಕ್ಷಿ, ಅನುಪಮಾ ಗೌಡ, ಸಿರಿ ಸೇರಿದಂತೆ ಅನೇಕರು ಭಾಗಿಯಾಗಿ ಶುಭ ಕೋರಿದ್ದರು.
ಬಿಗ್ ಬಾಸ್ ಸೀಸನ್ 7 ರಲ್ಲಿ ದೀಪಿಕಾ ಜೊತೆ ಹೆಚ್ಚು ಸುದ್ದಿಯಾಗಿದ್ದ ನಟ ಶೈನ್ ಶೆಟ್ಟಿ ಮತ್ತು ದೀಪಿಕಾ ಸ್ನೇಹಿತೆ ಭೂಮಿ ಶೆಟ್ಟಿ ಕಾರ್ಯಕ್ರಮದಲ್ಲಿ ಮಿಸ್ ಆಗಿದ್ದು, ಅಭಿಮಾನಿಗಳೆಲ್ಲಾ, ಎಲ್ಲಿದ್ದಾರೆ ಶೆಟ್ರು, ಶೈನ್ ಮಿಸ್ ಆಗ್ಬಿಟ್ರಲ್ಲಾ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.