- Home
- Entertainment
- TV Talk
- ಬೆಂಗಳೂರಿನಲ್ಲಿ ಮದುವೆ ಮನೆ ಸೃಷ್ಟಿ; Just Married ಎಂದ ಶೈನ್ ಶೆಟ್ಟಿ, ಅಂಕಿತಾ ಅಮರ್‌ಗೆ ಶುಭವಾಗಲಿ!
ಬೆಂಗಳೂರಿನಲ್ಲಿ ಮದುವೆ ಮನೆ ಸೃಷ್ಟಿ; Just Married ಎಂದ ಶೈನ್ ಶೆಟ್ಟಿ, ಅಂಕಿತಾ ಅಮರ್‌ಗೆ ಶುಭವಾಗಲಿ!
ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ನಟಿಸಿರುವ ʼಜಸ್ಟ್ ಮ್ಯಾರೀಡ್ʼ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ನಿರ್ಮಿಸಿರುವ, ಸಿ ಆರ್ ಬಾಬಿ ನಿರ್ದೇಶನದ ಸಿನಿಮಾವಿದು. ನಟ ರಿಷಬ್ ಶೆಟ್ಟಿ ಅವರು ಆನ್‌ಲೈನ್ ಮೂಲಕ ಟ್ರೇಲರ್ ರಿಲೀಸ್ ಮಾಡಿದರು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮದುವೆ ಮನೆ ವಾತಾವರಣ ನಿರ್ಮಾಣವಾಗಿತ್ತು. ಮುಂಭಾಗಲಿನಲ್ಲೇ ಮಂಗಳದ್ರವ್ಯಗಳನ್ನು ನೀಡಿ ಮುತ್ತಿನ ಹಾರ ಹಾಕಿ ಬಂದ ಅತಿಥಿಗಳನ್ನು ಸ್ವಾಗತಿಸಲಾಯಿತು. ಹೆಣ್ಣುಮಕ್ಕಳು ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸುತ್ತಿದ್ದದ್ದು ಅಲ್ಲಿ ಕಂಡು ಬಂತು. ಚಿತ್ರತಂಡದರು ಮದುವೆಗೆ ಹೋಗುವಾಗ ಸಿದ್ದವಾಗುವ ಹಾಗೆ ʼಜಸ್ಟ್ ಮ್ಯಾರೀಡ್ʼ ಟ್ರೇಲರ್ ಬಿಡುಗಡೆ ಸಮಾರಂಭಕ್ಕೂ ಬಂದಿದ್ದು ವಿಶೇಷವಾಗಿತ್ತು.
“ಸಿಆರ್ ಬಾಬಿ ಅವರಿಗೆ ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಇತ್ತು. ನಾನು ಕೂಡ ಸಿನಿಮಾ ನಿರ್ದೇಶನ ಮಾಡಿ ಅಂತ ಹೇಳುತ್ತಿದ್ದೆ. ಆದರೆ ಈಗ ಕಾಲ ಕೂಡಿ ಬಂದಿದೆ. ಸಿನಿಮಾ ಆರಂಭವಾದ ದಿನದಿಂದಲೂ ನನಗೆ ಚಿತ್ರತಂಡ ನೀಡುತ್ತಿರುವ ಸಹಕಾರ ಅಪಾರ. ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ವಿಕೆ ಫಿಲಂಸ್ ಮೂಲಕ ನಮ್ಮ ಸಿನಿಮಾವನ್ನು ವಿತರಣೆ ಮಾಡುತ್ತಿದ್ದಾರೆ. ಆಗಸ್ಟ್ 22 ರಂದು ನಮ್ಮ ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆʼ ಎಂದು ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ತಿಳಿಸಿದರು.
“ನಿರ್ದೇಶಕರು ನನ್ನ ಪಾತ್ರವನ್ನು ಗೌಪ್ಯವಾಗಿಟ್ಟಿದ್ದಾರೆ. ಹಾಗಾಗಿ ಪಾತ್ರದ ಬಗ್ಗೆ ಹೇಳುವ ಹಾಗಿಲ್ಲ. ಆದರೆ ಶೂಟಿಂಗ್ ಅನುಭವ ಹೇಳಬಹುದು. ಖಂಡಿತವಾಗಿಯೂ ಇದು ಸಿ ಆರ್ ಬಾಬಿ ಅವರ ಮೊದಲ ನಿರ್ದೇಶನದ ಸಿನಿಮಾ ಅಂತ ಹೇಳಲು ಸಾಧ್ಯವಿಲ್ಲ. ಅನುಭವಿ ನಿರ್ದೇಶಕರ ಹಾಗೆ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ. ಹೀಗಾಗಿ ಮಹಿಳೆಯೊಬ್ಬರಿಗೆ ನಿರ್ದೇಶನ ನೀಡಲು ಅವಕಾಶ ನೀಡಿದ ಅಜನೀಶ್ ಲೋಕನಾಥ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ” ಎಂದರು ನಟಿ ಮಾಳವಿಕ ಅವಿನಾಶ್.
ಆಗಷ್ಟೇ ಕಾಂತಾರ ಸಿನಿಮಾ ಬಿಡುಗಡೆಯಾಗಿತ್ತು. ಆ ಸಮಯದಲ್ಲಿ ಅಜನೀಶ್ ನನಗೆ ಫೋನ್ ಮಾಡಿ ನಾನೊಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ನೀವು ನಾಯಕನಾಗಿ ನಟಿಸಬೇಕು ಎಂದರು. ಆನಂತರ ಸಿ ಆರ್ ಬಾಬಿ, ಅಜನೀಶ್ ಅವರು ಈ ಚಿತ್ರದ ಕಥೆ ಹೇಳುತ್ತಾರೆ. ನನಗಂತೂ ಕಥೆ ಬಹಳ ಇಷ್ಟವಾಯ್ತು. ನಂತರ ಶೂಟಿಂಗ್ ಪ್ರಾರಂಭವಾಗುತ್ತದೆ” ಎಂದರು ನಾಯಕ ಶೈನ್ ಶೆಟ್ಟಿ.
“ನಾನು ಈ ಸಿನಿಮಾ ಜರ್ನಿಯ ಮೂರು ಅಂಶಗಳ ಬಗ್ಗೆ ಮಾತನಾಡುತ್ತೇನೆ. ಅದು ಕನಸು, ಕೆಲಸ ಹಾಗೂ ಕಥೆ. ಚಿಕ್ಕಂದಿನಿಂದಲೂ ನನಗೆ ನಟನೆಯಲ್ಲಿ ಆಸಕ್ತಿ. ಟಿವಿ ಅಥವಾ ದೊಡ್ಡ ಪರದೆಯಲ್ಲಿ ತಾರೆಯರನ್ನು ನೋಡಿದಾಗ ಇವರೆಲ್ಲಾ ಇಷ್ಟು ಚೆನ್ನಾಗಿ ಹೇಗೆ ಅಭಿನಯಿಸುತ್ತಾರೆ. ಹೀಗೆ, ಸಾಕಷ್ಟು ಪ್ರಶ್ನೆಗಳು ಮೂಡುತ್ತಿದ್ದವು. ಇದು ನನ್ನ ಎರಡನೇ ಚಿತ್ರ. ಎರಡನೇ ಚಿತ್ರದಲ್ಲೇ ಇಂತಹ ಮಹಾನ್ ತಾರೆಗಳ ಜೊತೆಗೆ ನಟಿಸುವ ಅವಕಾಶ ಒದಗಿ ಬಂತು. ಈ ಅವಕಾಶ ನೀಡಿದ ಸಿ.ಆರ್ ಬಾಬಿ ಹಾಗೂ ಅಜನೀಶ್ ಅವರಿಗೆ ಅನಂತ ಧನ್ಯವಾದ” ಎಂದರು ಅಂಕಿತಾ ಅಮರ್.