ಐದು ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಹೇಮಾ ಪ್ರಭಾತ್… ನಿಮ್ಮ ಪ್ರೋತ್ಸಾಹ ಇರಲಿ ಎಂದ ನಟಿ
ಅಮೇರಿಕಾ ಅಮೇರಿಕಾ ಸಿನಿಮಾದ ಭೂಮಿಕಾ ಪಾತ್ರದ ಮೂಲಕ ಕನ್ನಡಿಗರ ಮನಸು ಗೆದ್ದ ನಟಿ ಹೇಮಾ ಪ್ರಭಾತ್ ಇದೀಗ ಮತ್ತೆ ಕರಿಮಣಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಜನಪ್ರಿಯ ಸಿನಿಮಾ ಅಮೇರಿಕಾ ಅಮೇರಿಕಾದ (America America) ದಲ್ಲಿ ರಮೇಶ್ ಅರವಿಂದ್ ಜೊತೆ ತೆರೆ ಹಂಚಿಕೊಂಡು ಭೂಮಿಕಾ ಪಾತ್ರದ ಮೂಲಕ ಕನ್ನಡಿಗರ ಮನಸು ಗೆದ್ದ ನಟಿ ಹೇಮಾ ಪ್ರಭಾತ್.
ಸಂಭ್ರಮ, ದೊರೆ, ರವಿಮಾಮ ಮತ್ತು ಗೋಲಿ ಬಾರ್ ಮೊದಲಾದ ಸಿನಿಮಾಗಳಲೂ ನಟಿಸಿದ್ದ ಹೇಮಾ (Hema Prabhath) ತಮ್ಮ ವೈಯಕ್ತಿಕ ಕಾರಣಗಳಿಂದಲೇ ಅಂದರೆ ಮದುವೆ ವಿಚಾರಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು.
ಅಮೇರಿಕಾ ಅಮೇರಿಕಾ ಬಳಿಕ ಸುಮೀಂದ್ರ ಪಂಚಮುಖಿ ಎನ್ನುವವರ ಜೊತೆ ಮದುವೆಯಾಗಿ ಅಮೆರಿಕಾದಲ್ಲಿ ಸೆಟಲ್ ಆಗಿದ್ದ ನಟಿ, ಬಳಿಕ ಕುಟುಂಬ ಕಲಹದಿಂದಾಗಿ ಡಿವೋರ್ಸ್ ಪಡೆದು, ಭಾರತಕ್ಕೆ ಬಂದು ವರ್ಷಗಳ ಬಳಿಕ ನಟ ಸುಮಂತ್ ಆಲಿಯಾಸ್ ಪ್ರಶಾಂತ್ (Prashanth) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಮದುವೆಯ ಬಳಿಕ ಸಿನಿಮಾ, ನಟನೆಯಿಂದ ಸಂಪೂರ್ಣವಾಗಿ ದೂರವಿದ್ದ ಹೇಮಾ, ಅವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಕೂಡ ಇದ್ದಾರೆ. ಭರತನಾಟ್ಯ ಡ್ಯಾನ್ಸರ್ ಆಗಿರುವ ಹೇಮಾ ತಮ್ಮ ಪತಿ ಪ್ರಶಾಂತ್ ಜೊತೆಗೆ ಸೇರಿ ಸುಕೃತಿ ನಾಟ್ಯಾಲಯ ಎಂಬ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದು, ಇವರ ನೃತ್ಯ ತಂಡ ರಾಜ್ಯದ ಹಲವೆಡೆ ನೃತ್ಯ ಪ್ರದರ್ಶನ ನೀಡಿದೆ.
ಡ್ಯಾನ್ಸ್ ನಲ್ಲೆ ಕಳೆದು ಹೋಗಿದ್ದ ಹೇಮಾ 5 ವರ್ಷದ ಹಿಂದೆ ಮತ್ತೆ ಕಿರುತೆರೆಯ ರಕ್ಷಾ ಬಂಧನ (Raksha Bandana) ಧಾರಾವಾಹಿಯಲ್ಲಿ ನಟಿಸುವ ಮೂಲಕ 15 ವರ್ಷಗಳ ಬಳಿಕ ನಟನೆಗೆ ರೀ ಎಂಟ್ರಿ ಕೊಟ್ಟಿದ್ದರು. ಇದೀಗ 5 ವರ್ಷದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಕರಿಮಣಿ (Karimani) ಮೂಲಕ ಮತ್ತೆ ನಟನಾ ಲೋಕಕ್ಕೆ ಕಾಲಿಟ್ಟಿರುವ ಹೇಮಾ ಈ ಬಗ್ಗೆ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಮಾಹಿತಿ ನೀಡಿದ್ದು, ಮೊದಲು ಹೇಗೆ ಪ್ರೀತಿ ನೀಡಿದ್ದಿರೋ ಹಾಗೆಯೇ ಈವಾಗಲೂ ಪ್ರೀತಿ, ವಿಶ್ವಾಸ, ಬೆಂಬಲ ಇರಲಿ ಎಂದು ಕೇಳಿಕೊಂಡಿದ್ದಾರೆ.
ಅಮೇರಿಕಾ ಅಮೇರಿಕಾ ಬೆಡಗಿಯನ್ನು ಮತ್ತೆ ಕಿರುತೆರೆಯಲ್ಲಿ ನೋಡಿ ಖುಷಿ ಪಟ್ಟಿರೋ ಅಭಿಮಾನಿಗಳು, ದೊರೆಯ ರಾಣಿಗೆ ಅಭಿನಂದನೆಗಳು, ನಿಮ್ಮನ್ನು ಮತ್ತೆ ಕಿರುತೆರೆಯಲ್ಲಿ ನೋಡಿ ಖುಷಿಯಾಯಿತು. ನಿಮಗೆ ಶುಭವಾಗಲಿ, ಮತ್ತಷ್ಟು ಪ್ರಾಜೆಕ್ಟ್ ಗಳಲ್ಲಿ ನಟಿಸುವಂತಾಗಲಿ ಎಂದು ಜನ ಹಾರೈಸಿದ್ದಾರೆ.