Artificial Intelligence: ಉದ್ಯೋಗಾವಕಾಶ ಸೃಷ್ಟಿಸಲಿರುವ ಕೃತಕ ಬುದ್ಧಿಮತ್ತೆ ಪಾರ್ಕ್‌ಗೆ ಸಚಿವ ಅಶ್ವತ್ಥ ಚಾಲನೆ
ಬೆಂಗಳೂರು(ಮಾ.15): ಗ್ರಾಮೀಣ ಪ್ರದೇಶದ ಯುವಜನರಿಗೆ ಉಜ್ವಲ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿರುವ ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ರೋಬೋಟಿಕ್ ತಂತ್ರಜ್ಞಾನ ಪಾರ್ಕನ್ನು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ(CN Ashwathnarayan) ಅವರು ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಸೋಮವಾರ ಉದ್ಘಾಟಿಸಿದರು.
ಕೃತಕ ಬುದ್ಧಿಮತ್ತೆ ಆಧಾರಿತ ಅರ್ಥವ್ಯವಸ್ಥೆಯು 2030ರ ಹೊತ್ತಿಗೆ 15.7 ಟ್ರಿಲಿಯನ್ ಡಾಲರ್ ಸಾಮರ್ಥ್ಯವುಳ್ಳದ್ದಾಗಿದ್ದು, ದೇಶದ ಈಗಿನ ಜಿಡಿಪಿ ಮೊತ್ತಕ್ಕಿಂತ ಆರು ಪಟ್ಟು ಹೆಚ್ಚು ಶಕ್ತಿಯನ್ನು ತರಲಿದೆ. ಈ ಕೇಂದ್ರದ ಸ್ಥಾಪನೆಗೆ ‘ಎಐ ಫೌಂಡ್ರಿ’ ಕೂಡ ನೆರವು ನೀಡಿದೆ. ಆರ್ಟ್ ಪಾರ್ಕ್ನಲ್ಲಿ ನಡೆಯಲಿರುವ ಸಂಶೋಧನೆಗಳು ಆರೋಗ್ಯಸೇವೆ, ಶಿಕ್ಷಣ, ಸಂಪರ್ಕ, ಮೂಲಸೌಲಭ್ಯ, ಕೃಷಿ, ಚಿಲ್ಲರೆ ವ್ಯಾಪಾರ ಮತ್ತು ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಅತ್ಯಾಧುನಿಕ ಕೌಶಲಗಳನ್ನು ಪೂರೈಸಲಿದೆ. ಈ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರವು .170 ಕೋಟಿ ಕೊಟ್ಟಿದ್ದು, ರಾಜ್ಯ ಸರಕಾರವು .60 ಕೋಟಿ ಗಳನ್ನು ಬೀಜಧನವಾಗಿ (Seed Capital) ನೀಡಿದೆ ಎಂದು ವಿವರಿಸಿದ ಅಶ್ವತ್ಥನಾರಾಯಣ
ಮಾಹಿತಿ ತಂತ್ರಜ್ಞಾನ ಮತ್ತು ಅದಕ್ಕೆ ಪೂರಕವಾಗಿ ಮುನ್ನೆಲೆಗೆ ಬಂದ ಬಿಪಿಒಗಳು(BPO)ತಮ್ಮ ಬೆಳವಣಿಗೆಯ ತುತ್ತತುದಿಯನ್ನು ಈಗಾಗಲೇ ತಲುಪಿವೆ. ಮುಂಬರುವ ದಿನಗಳೆಲ್ಲ ಕೃತಕ ಬುದ್ಧಿಮತ್ತೆಯನ್ನು ಆಧರಿಸಿರಲಿವೆ. ಇದು ಶಿಕ್ಷಣ ಮತ್ತು ಕೌಶಲಗಳ ನಡುವೆ ಇರುವ ಅಂತರವನ್ನು ತೊಡೆದು ಹಾಕಲಿದೆ. ಹೀಗಾಗಿಯೇ, ಆರ್ಟ್ ಪಾರ್ಕ್ ಸ್ಥಾಪನೆಗೆ ರಾಜ್ಯವು ಮುಂದಾಗಿದೆ ಎಂದು ಅವರು ಹೇಳಿದ ಸಚಿವರು
ಸಮಾವೇಶವನ್ನು ಉದ್ದೇಶಿಸಿ ವರ್ಚುಯಲ್ ಮೂಲಕ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್, ಗ್ರಾಮೀಣ ಪ್ರದೇಶಗಳಲ್ಲಿ ಹುದುಗಿರುವ ಆರ್ಥಿಕ ಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಉಪಯೋಗಿಸಿಕೊಂಡರೆ ಭಾರತವು ಜಗತ್ತಿನಲ್ಲಿ ಅಗ್ರಸ್ಥಾನಕ್ಕೆ ಏರಬಹುದು. ಈ ನಿಟ್ಟಿನಲ್ಲಿ ಅಟಲ್ ಇನ್ನೋವೇಶನ್ ಮಿಶನ್(Atal Innovation Mission) ಮತ್ತು ನವೋದ್ಯಮಗಳೊಂದಿಗೆ ಜತೆಗೂಡಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್ಟ್ ಪಾರ್ಕ್ ಸಿಇಒ ಉಮಾಕಾಂತ್ ಸೋನಿ, ನಿರ್ದೇಶಕ ಪ್ರೊ.ರಂಗರಾಜನ್, ಸಿಐಒ ಶುಭಶಿಶ್ ಬ್ಯಾನರ್ಜಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎಸ್.ಚಂದ್ರಶೇಖರ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಉದ್ಯಮಿ ವಿವೇಕ್ ರಾಘವನ್, ಮೋಹನ್ ದಾಸ್ ಪೈ ಮುಂತಾದವರು ಉಪಸ್ಥಿತರಿದ್ದರು.