- Home
- News
- State
- ರಾಜ್ಯದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಗೋಡೆಯಲ್ಲಿ ವೈಯಕ್ತಿಕ ಕ್ಯೂ ಆರ್ ಕೋಡ್ ಅಂಟಿಸಿದ ಸಿಬ್ಬಂದಿ, 23 ಲಕ್ಷ ಗುಳುಂ!
ರಾಜ್ಯದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಗೋಡೆಯಲ್ಲಿ ವೈಯಕ್ತಿಕ ಕ್ಯೂ ಆರ್ ಕೋಡ್ ಅಂಟಿಸಿದ ಸಿಬ್ಬಂದಿ, 23 ಲಕ್ಷ ಗುಳುಂ!
ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ದುರುಪಯೋಗಪಡಿಸಿ 23 ಲಕ್ಷಕ್ಕೂ ಅಧಿಕ ಹಣದ ವಂಚನೆ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿಗಳು ವೈಯಕ್ತಿಕ ಕೋಡ್ ಬಳಸಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ವೈದ್ಯಕೀಯ ಅಧೀಕ್ಷಕರು ದೂರು ದಾಖಲಿಸಿದ್ದಾರೆ.

ರಾಜ್ಯದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ
ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ನಡೆದ ಯುಪಿಐ ವಂಚನೆ ಪ್ರಕರಣದ ಬೆನ್ನಲ್ಲೇ ಇದೀಗ ರಾಜ್ಯದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಯುಪಿಐ ಸ್ಕ್ಯಾಮ್ ಬೆಳಕಿಗೆ ಬಂದಿದೆ. ರೋಗಿಗಳ ಅನುಕೂಲಕ್ಕಾಗಿ ಪರಿಚಯಿಸಲಾಗಿದ್ದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು, ಆಸ್ಪತ್ರೆಯ ಕೆಲ ಕಳ್ಳ ಸಿಬ್ಬಂದಿಗಳು ಸುಮಾರು 23 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಅಕ್ರಮವಾಗಿ ದೋಚಿರುವುದು ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಅವರು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರೋಗಿಗಳ ಅನುಕೂಲಕ್ಕೆ ತಂದ ಯುಪಿಐ ವ್ಯವಸ್ಥೆಯೇ ವಂಚನೆ ಕಾರಣ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ರೋಗಿಗಳ ಹಾಗೂ ಅವರ ಸಂಬಂಧಿಕರ ಅನುಕೂಲಕ್ಕಾಗಿ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಲ್ಯಾಬ್ ಪರೀಕ್ಷೆ, ಓಪಿಡಿ ಶುಲ್ಕ, ಎಕ್ಸ್-ರೇ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳಿಗಾಗಿ ಯುಪಿಐ ಸ್ಕ್ಯಾನ್ ಮೂಲಕ ಪಾವತಿ ಮಾಡುವ ವ್ಯವಸ್ಥೆ ಆಸ್ಪತ್ರೆಯಲ್ಲಿ ಪರಿಚಯಿಸಲಾಗಿತ್ತು.
ವೈಯಕ್ತಿಕ ಯುಪಿಐ ಕ್ಯೂಆರ್ ಸ್ಕ್ಯಾನ್ ಬಳಕೆ
ಆದರೆ ಇದೇ ವ್ಯವಸ್ಥೆಯನ್ನು ಬಂಡವಾಳ ಮಾಡಿಕೊಂಡ ಕೆಲ ಆಸ್ಪತ್ರೆ ಸಿಬ್ಬಂದಿಗಳು, ಆಸ್ಪತ್ರೆಯ ಅಧಿಕೃತ ಕ್ಯೂಆರ್ ಕೋಡ್ ಬದಲು ತಮ್ಮದೇ ವೈಯಕ್ತಿಕ ಯುಪಿಐ ಕ್ಯೂಆರ್ ಸ್ಕ್ಯಾನ್‌ಗಳನ್ನು ವಿವಿಧ ವಿಭಾಗಗಳಲ್ಲಿ ಅಳವಡಿಸಿದ್ದರು. ರೋಗಿಗಳು ಹಾಗೂ ಸಂಬಂಧಿಕರು ಇದನ್ನು ಗಮನಿಸದೆ ಹಣ ಪಾವತಿ ಮಾಡಿದ ಪರಿಣಾಮ, ಹಣ ನೇರವಾಗಿ ಸಿಬ್ಬಂದಿಗಳ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಆಗುತ್ತಿತ್ತು.
ಲ್ಯಾಬ್, ಓಪಿಡಿ, ಎಕ್ಸ್-ರೇ ವಿಭಾಗಗಳಲ್ಲಿ ವಂಚನೆ
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಯುಪಿಐ ವಂಚನೆ ಲ್ಯಾಬೋರೇಟರಿ, ಓಪಿಡಿ, ಎಕ್ಸ್-ರೇ ಸೇರಿದಂತೆ ಆಸ್ಪತ್ರೆಯ ಹಲವು ಪ್ರಮುಖ ವಿಭಾಗಗಳಲ್ಲಿ ನಡೆದಿದೆ. ಈ ಮೂಲಕ ಕೆಲವು ತಿಂಗಳ ಅವಧಿಯಲ್ಲಿ ಸರಾಸರಿ 23 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ.
ಅನುಮಾನದಿಂದ ತನಿಖೆ, ಬಳಿಕ ಸತ್ಯ ಬಹಿರಂಗ
ಆಸ್ಪತ್ರೆಯಲ್ಲಿ ಯುಪಿಐ ಮೂಲಕ ಸಂಗ್ರಹವಾಗಬೇಕಾದ ಹಣದ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಅವರಿಗೆ ಅನುಮಾನ ಮೂಡಿತ್ತು. ಈ ಹಿನ್ನೆಲೆ ಅವರು ಆಸ್ಪತ್ರೆಯೊಳಗೆ ಆಂತರಿಕ ತನಿಖಾ ಸಮಿತಿ (Internal Committee) ರಚಿಸಿದರು. ಕಳೆದ ಕೆಲ ತಿಂಗಳ ಕಾಲ ಈ ಸಮಿತಿ ಯುಪಿಐ ಪಾವತಿ ಪ್ರಕ್ರಿಯೆಯನ್ನು ನಿಗಾದಲ್ಲಿಟ್ಟುಕೊಂಡು ಪರಿಶೀಲನೆ ನಡೆಸಿತು. ಪರಿಶೀಲನೆಯ ವೇಳೆ ಕೆಲ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿಕೊಂಡು ಹಣ ಸಂಗ್ರಹಿಸುತ್ತಿರುವುದು ಸ್ಪಷ್ಟವಾದ ನಂತರ, ಈ ಬಗ್ಗೆ ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು.
ಪೊಲೀಸ್ ಠಾಣೆಯಲ್ಲಿ ದೂರು, ತನಿಖೆ ಆರಂಭ
ಸಾಕ್ಷ್ಯಗಳು ಲಭ್ಯವಾದ ತಕ್ಷಣ ವೈದ್ಯಕೀಯ ಅಧೀಕ್ಷಕರು ವಿ.ವಿ.ಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವಂಚನೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಗಳ ಸಂಖ್ಯೆ, ಅವರ ಪಾತ್ರ ಹಾಗೂ ಹಣದ ಹರಿವು ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಮೇಲೆ ಪ್ರಶ್ನಾರ್ಥಕ ಚಿಹ್ನೆ
ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐ ಸ್ಕ್ಯಾಮ್ ನಡೆದ ಬಳಿಕ, ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಇಂತಹ ವಂಚನೆ ಬೆಳಕಿಗೆ ಬಂದಿರುವುದು ಸರ್ಕಾರಿ ಸಂಸ್ಥೆಗಳಲ್ಲಿನ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳನ್ನು ತಡೆಯಲು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

