ಮದುವೆಯಾಗದ ಪುರುಷರೇ ಹುಷಾರ್; ಮದುವೆ ಹೆಸರಿನಲ್ಲಿ ಈ ವಂಚಕರ ಗ್ಯಾಂಗ್ ಬಲೆಗೆ ಬೀಳದಿರಿ!
ಮದುವೆ ಆಸೆಯಿಂದ ವಂಚನೆಗೆ ಒಳಗಾಗುವ ಪುರುಷರಿಗೆ ಎಚ್ಚರಿಕೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿರುವ ಗ್ಯಾಂಗ್, ಮದುವೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡುತ್ತಿದೆ. ಮದುವೆಗೂ ಮುನ್ನ ಮತ್ತು ನಂತರ ಹಣ ಪಡೆದು, ನಂತರ ಹೆಂಡತಿಯೊಂದಿಗೆ ಪರಾರಿಯಾಗುವ ಈ ಗ್ಯಾಂಗ್‌ನಿಂದ ಎಚ್ಚರ!
ಮದುವೆ ಹೆಸರಲ್ಲಿ ಮಹಾ ಮೋಸ ನಡೆದುಹೋಗಿದೆ. ಮದುವೆ ಆಗುವ ಪುರುಷರೇ ಹುಷಾರ್. ಮದುವೆ ಹೆಸರಲ್ಲಿ ಮಹಾ ಲೂಟಿ ಮಾಡುತ್ತಿರುವ ಖತರನಾಕ್ ಗ್ಯಾಂಗ್‌ಗಳು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿವೆ. ಈ ಗ್ಯಾಂಗ್‌ಗೆ ವಯಸ್ಸಾದ ಅವಿವಾಹಿತ ಪುರುಷರೇ ಇವರ ಟಾರ್ಗೆಟ್ ಆಗಿದ್ದಾರೆ. ಮದುವೆಗೂ ಮುನ್ನ 3 ಲಕ್ಷ ರೂ. ಹಣ ಪೀಕುವ ವಂಚಕರು, ಬಳಿಕ ಮದುವೆ ಮಾಡಿಸಿದ ಬಳಿಕ ಹೊಸ ವರಸೆ ತೆಗೆದು, ಪುನಃ ಹುಡುಗನಿಂದ 3 ಲಕ್ಷ ರೂ. ಹಣ ಪಡೆಯುತ್ತಾರೆ.
ಸಾಲ ಸೋಲ ಮಾಡಿಯಾದರೂ ಸರಿ ಮದುವೆ ಆಯಿತಲ್ಲಾ ಎಂದು ಹುಡುಗ ಹಾಗೂ ಅವರ ಮನೆಯವರು ನೆಮ್ಮದಿಯಿಂದ ಇರುವಾಗ ದೊಡ್ಡ ದುರಂತ ನಡೆಯುತ್ತದೆ. ಒಂದು ತಿಂಗಳು ಸುಖವಾಗಿ ಸಂಸಾರ ಮಾಡುವ ಹುಡುಗಿ ಇದ್ದಕ್ಕಿದ್ದಂತೆ ಒಂದು ದಿನ ಮನೆಯಲ್ಲಿದ್ದ ಎಲ್ಲ ಹಣ ಹಾಗೂ ಚಿನ್ನಾಭರಣವನ್ನು ದೋಚಿಕೊಂಡು ಪರಾರಿ ಆಗಿಬಿಡುತ್ತಾಳೆ. ಆಗ ಕುಟುಂಬಸ್ಥರು ನಾವು ಮದುವೆ ಹೆಸರಿನಲ್ಲಿ ಮೋಸ ಹೋಗಿದ್ದೇವೆ ಎಂದು ತಿಳಿದು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತಾರೆ.
ಆದರೆ, ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ಈ ಗ್ಯಾಂಗ್ ತಮ್ಮ ವೇಷಾವೇಷ ಹಾಗೂ ಸಂಪರ್ಕದ ಮಾಹಿತಿಯನ್ನೇ ಬದಲಿಸುತ್ತದೆ. ಪೊಲೀಸರ ನಿರ್ಲಕ್ಷ್ಯ ಹಾಗೂ ಮದುವೆಯಾಗದ ಪುರುಷರ ವಿವಾಹದ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಈ ಗ್ಯಾಂಗ್ ಮತ್ತೆ, ಇನ್ನೊಂದು ಊರಿನಲ್ಲಿ ಮದುವೆ ನಾಟಕ ಶುರುಮಾಡಿ ಅಲ್ಲಿಯೂ ಬೇರೊಬ್ಬ ಪುರುಷನನ್ನು ನೋಡಿ ಮದುವೆ ಮಾಡಿಸಿ ವಂಚನೆ ಮಾಡಿ ಪರಾರಿ ಆಗುತ್ತಾರೆ.
ಇನ್ನು ಬ್ರೋಕರ್‌ಗಳಿಗೆ ಹೆಣ್ಣು ಹುಡುಕಿಕೊಡಿ ಎಂದು ವಿಳಾಸವನ್ನು ಕೊಟ್ಟಿರುವ ಹುಡುಗರನ್ನು ಹಾಗೂ ಬಸ್, ಬಸ್ ನಿಲ್ದಾಣ, ಉದ್ಯಾನ, ರಸ್ತೆಯಲ್ಲಿ ಅಚಾನಾಕ್ ಆಗಿ ಸಿಗುವುದು ಹೀಗೆ ಎಲ್ಲೆಂದರಲ್ಲಿ ಮಾತನಾಡಲು 10 ನಿಮಿಷ ಸಮಯ ಸಿಕ್ಕಿದರೆ ಸಾಕು ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿ, ಹೆಣ್ಣು ಮಕ್ಕಳಿದ್ದಾರೆ ಮದುವೆ ಮಾಡಿಕೊಡಬೇಕು ಎಂದು ಹೇಳುತ್ತಾರೆ.
ಆದ್ದರಿಂದ ಮದುವೆಯಾಗದಿರುವ ಹಾಗೂ ಮದುವೆಗೆ ಸಿದ್ಧವಾಗಿರುವ ಯುವಕರೇ ಹುಷಾರಾಗಿರಿ. ನಿಮ್ಮನ್ನು ಮದುವೆಯಾಗಿ ಒಂದು ತಿಂಗಳು ನಿಮ್ಮ ಜೊತೆಗೆ ಸಂಸಾರ ನಡೆಸುವ ಹುಡುಗಿ ನಂತರ ಪರಾರಿ ಆಗುತ್ತಾಳೆ. ಇತ್ತ 'ಹೆಣ್ಣು ಇಲ್ಲ, ಹೊನ್ನು ಇಲ್ಲ' ಎಂದು ಕಂಗಾಲಾಗಬೇಕಾಗುತ್ತದೆ. ಇದೇ ರೀತಿ ಬೆಳಗಾವಿ ಜಿಲ್ಎಯ ಚಿಕ್ಕೋಡಿಯ ಕೆಲವು ಗ್ರಾಮಗಳಲ್ಲಿ ಸಾಲ ಸೋಲ ಮಾಡಿ ಮಗನಿಗೆ ಮದುಇವೆ ಮಾಡಿಸಿದ ಕುಟುಂಬಗಳು ಇದೀಗ ಹೆಣ್ಣು, ಹಣ ಎರಡನನ್ನೂ ಕಳೆದುಕೊಂಡು ಕಂಗಾಲಾಗಿವೆ.
ವಂಚಕರ ಗ್ಯಾಂಗಿನ ಸದಸ್ಯರು ಹೆಣ್ಣು ಹುಡುಕಿಕೊಟ್ಟು ಮದುವೆ ಮಾಡಿಸಿಕೊಡುವುದಾಗಿ ಹೇಳುವುದನ್ನು ಕೇಳಿಸಿಕೊಳ್ಳುವ ಮದುವೆಯಾಗದ ಯುವಕರ ಸಂಬಂಧಿಕರು, ಪರಿಚಯಸ್ಥರು ಅಥವಾ ಗ್ರಾಮಸ್ಥರು ಅವರ ವಿಳಾಸವನ್ನು ಕೊಟ್ಟು ಮನೆಗೆ ಕರೆಸುತ್ತಾರೆ. ಆಗ ಪುನಃ ಇವರ ಮದುವೆ ಮಾಡಿಸುವ ನಾಟಕ ಮತ್ತು ವಂಚನೆ ಪ್ರಕ್ರಿಯೆ ಶುರುವಾಗುತ್ತದೆ.
ಇದೇ ರೀತಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಮದುವೆ ಮಾಡಿಸಿಕೊಡುವುದಾಗಿ ಹೇಳಿದ್ದ ಗ್ಯಾಂಗ್ ಒಂದು 3 ಲಕ್ಷ ರೂಪಾಯಿ ಕೊಡಿ ಇವತ್ತೆ ಮದುವೆ ಮಾಡಿಸುತ್ತೇವೆ ಎಂದು ಹೇಳಿದೆ. ಈ ಬಗ್ಗೆ ಅನುಮಾನಗೊಂಡ ಹುಡುಗನ ಮನೆಯವರು ಕೂಡಲೇ ತಮ್ಮ ಏರಿಯಾದಲ್ಲಿ ನಕಲಿ ಮದುವೆ ಗ್ಯಾಂಗ್ ಇರುವುದರ ಸುಳಿವು ಪಡೆದಿದ್ದು, ಅವರು ಇವರೇ ಇರಬೇಕು ಎಂದು ಕೂಡಿ ಹಾಕಿದ್ದಾರೆ. ಆಗ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಇವರನ್ನು ಸೆರೆ ಹಿಡಿಯುವುದಕ್ಕೆ ಸಹಾಯ ಮಾಡಿದ್ದಾರೆ.
ಈ ಗ್ಯಾಂಗ್ ಪಕ್ಕದ ಮಹಾರಾಷ್ಟ್ರ ರಾಜ್ಯದಿಂದ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದ ಕೆಲ ಜನರನ್ನು ಸಂಪರ್ಕಿಸಿ ಮದುವೆ ಆಗದೇ ಇರುವವರನ್ನೆ ಟಾರ್ಗೆಟ್ ಮಾಡಲಾಗುತ್ತಿತ್ತು. ನಾವು ಮದುವೆ ಮಾಡಿಸಿ ಕೊಡ್ತೇವೆ ಎಂದು ಹೇಳಿ 3 ಲಕ್ಷ ರೂ ಪೀಕುವ ಗ್ಯಾಂಗ್ ಇದೀಗ ಕಂಕಣವಾಡಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದೆ. ಈ ಗ್ಯಾಂಗ್‌ನಿಂದ ಇತ್ತೀಚೆಗಷ್ಟೇ ಅಥಣಿ, ರಾಯಬಾಗ, ಹುಕ್ಕೇರಿ ಹಾಗೂ ಮಹಾರಾಷ್ಟ್ರ ಕರ್ನಾಟಕದ ಗಡಿ ಗ್ರಾಮಗಳಲ್ಲಿ ವಂಚನೆ ಮಾಡಿದೆ ಎಂಬುದು ಬೆಳಕಿಗೆ ಬಂದಿದೆ. ಇದೀಗ ಖತರ್ನಾಕ್ ಮದುವೆ ಗ್ಯಾಂಗ್ ರಾಯಬಾಗ ಪೊಲೀಸರ ವಶದಲ್ಲಿದ್ದಾರೆ.