Kunigal:ತಿಪ್ಪೂರು ಮೇಗಲಮನೆ ಕುಟುಂಬಸ್ಥರಿಂದ ತಿಮ್ಮರಾಯಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ!
ಪುರಾತನ ಕಾಲದ ತಿಮ್ಮರಾಯಸ್ವಾಮಿ ದೇಗುಲದ ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಮೇಗಲಮನೆಯವರು ಹಮ್ಮಿಕೊಂಡಿದ್ದರು. ಸುತ್ತಮುತ್ತಲ ಊರಿನವರು ಹಾಗೂ ರಾಜಕೀಯ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಎಡಿಯೂರು ಹೋಬಳಿ, ತಿಪ್ಪೂರು ಗ್ರಾಮದಲ್ಲಿರುವ ಸುಮಾರು 500 ವರ್ಷಗಳ ಪುರಾತನ ಶ್ರೀ ತಿಮ್ಮರಾಯಸ್ವಾಮಿ ದೇಗುಲದ ಪ್ರಥಮ ಉತ್ಸವ ಮೂರ್ತಿ ಪ್ರತಿಷ್ಥಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ನವೆಂಬರ್ 21 ಮತ್ತು 22ರಂದು ಕುಂಭ ಲಗ್ನದಲ್ಲಿ ತಿಮ್ಮರಾಯಸ್ವಾಮಿ ಸಮೇತ ಶ್ರೀದೇವಿ ಮತ್ತು ಭೂದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ತಿಮ್ಮರಾಯಸ್ವಾಮಿ ಪ್ರೇರಣೆಯಂತೆ ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಮೇಗಲಮನೆಯವರಾದ ಶ್ರೀಮತಿ ಹೇಮಾವತಿ, ಶ್ರೀ ಚಂದ್ರಶೇಖರ್ ಅವರು ಸುತ್ತಮುತ್ತಲಿನ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿಸಿದರು.
ಎರಡು ದಿನಗಳ ಪೂಜೆಗೆ ಆಗಮಿಸಿದ ಸುಮಾರು 2 ಸಾವಿರ ಭಕ್ತರಿಗೆ, ಕುಟುಂಬಸ್ಥರಿಗೆ ಅನ್ನ ಸಂತರ್ಪಣಯನ್ನೂ ಹಮ್ಮಿಕೊಳ್ಳಲಾಗಿತ್ತು.
ತಮಕೂರು ಜಿಲ್ಲೆಯ ಹಾಲು ಉತ್ಪನ್ನ ಒಕ್ಕೂಟದ ನಿರ್ದೇಶಕರು ಹಾಗೂ ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷರಾಗಿರುವ ಶ್ರೀಯುತ ಕೃಷ್ಣಕುಮಾರ್, ಕೊಪ್ಪ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ದೊಡ್ಡತಿಮ್ಮೇ ಗೌಡ, ತಿಪ್ಪೂರು ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಗಾಯಿತ್ರಿ ಅವರು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಮೊದಲ ದಿನ ಗಂಗಾ ಭಗೀರತಿ ಪೂಜೆ ಸೇರಿದಂತೆ 28 ರೀತಿಯ ಪೂಜೆಗಳನ್ನು ಮಾಡಲಾಗಿತ್ತು. ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಪೂಜೆ ನಡೆಯಿತು.
ಎರಡನೇ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗ ಹಲವು ಪೂಜೆಗಳು ನಡೆದಿದ್ದು,ಮಧ್ಯಾಹ್ನ ಪೂರ್ಣಾಹುತಿ ನೆರವೇರಿತು.