ಬೆಂಗಳೂರಿನಲ್ಲಿ ಹೈ-ಫೈ ಭಿಕ್ಷಾಟನೆ ಗ್ಯಾಂಗ್ ಹಾವಳಿ; ₹500ಕ್ಕಿಂತ ಕಡಿಮೆ ಹಣ ಮುಟ್ಟಲ್ಲ!
ಬೆಂಗಳೂರಿನ ಬ್ರಿಗೇಡ್ ರೋಡ್ ಮತ್ತು ಎಂಜಿ ರಸ್ತೆಯಲ್ಲಿ ಹೊಸ ರೀತಿಯ ಭಿಕ್ಷಾಟನೆ ಗ್ಯಾಂಗ್ ಕಾಣಿಸಿಕೊಂಡಿದ್ದು, ₹500 ಕ್ಕಿಂತ ಹೆಚ್ಚಿನ ಹಣಕ್ಕೆ ಭಿಕ್ಷೆ ಬೇಡುತ್ತಿದ್ದಾರೆ. ರಾಜಸ್ಥಾನದಿಂದ ಬಂದಿರುವ ಈ ಗ್ಯಾಂಗ್, ಯುವಜನರನ್ನು ಗುರಿಯಾಗಿಸಿ ಹಣ ಪಡೆಯುತ್ತಿದ್ದು, ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.

ಬೆಂಗಳೂರು (ಜೂ. 9): ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿರುವ ಬ್ರಿಗೇಡ್ ರೋಡ್ ಮತ್ತು ಎಂಜಿ ರಸ್ತೆಯಲ್ಲಿ ಇತ್ತೀಚೆಗೆ ವಿಚಿತ್ರ ರೀತಿಯ ಭಿಕ್ಷಾಟನೆಯ ಗ್ಯಾಂಗ್ ಕಾಣಿಸಿಕೊಂಡಿದೆ. ನೋಡೋಕೆ ಒಂದೊಳ್ಳೆ ಕುಟುಂಬದವರಂತೆ ಕಂಡರೂ ಪ್ರತಿಷ್ಠಿತ ರಸ್ತೆಯಲ್ಲಿ ₹500 ರೂ. ಮೇಲ್ಪಟ್ಟ ಹಣಕ್ಕೆ ಭಿಕ್ಷೆ ಬೇಡುತ್ತಿರುವುದು ಕಂಡುಬಂದಿದೆ.
ದೂರದ ರಾಜಸ್ಥಾನದಿಂದ ಬಂದ ಈ 'ಹೈ-ಫೈ ಭಿಕ್ಷಾಟನೆ ಗ್ಯಾಂಗ್' ಇಂದು ಬೆಂಗಳೂರಿನ ಸ್ಟೈಲಿಶ್ ಆಗಿ ಕಾಣಿಸುವ ಯುವಕರು, ಯುವತಿಯರನ್ನು ಟಾರ್ಗೆಟ್ ಮಾಡಿ ಭಿಕ್ಷಾಟನೆ ಮಾಡುತ್ತಿದ್ದಾರೆ. ಹಣ ಕೊಡದವರನ್ನು ಮುಂದಕ್ಕೆ ಬಿಡದೇ ದುಂಬಾಲು ಬಿದ್ದು ಭಿಕ್ಷಾಟನೆ ಮಾಡುತ್ತಿದ್ದಾರೆ. ಈ ಭಿಕ್ಷಾಟನೆ ಗ್ಯಾಂಗ್ ಸಾಮಾನ್ಯ ಭಿಕ್ಷುಕರಂತಲ್ಲ. ಇವರು ಅತ್ಯಂತ ಶಿಷ್ಟಚಾರವಾಗಿ ಮಾತನಾಡುತ್ತಾ ಕೈಯಲ್ಲಿ ಲ್ಯಾಮಿನೇಷನ್ ಮಾಡಲಾದ ಜೆರಾಕ್ಸ್ ಕಾಗದ ಹಿಡಿದು ಬಂದು ಹಣ ಕೇಳುತ್ತಾರೆ.
ಭಿಕ್ಷಾಟನೆ ಮಾಡುವ ಪತ್ರದಲ್ಲಿ ಏನಿದೆ:
ನಾವು ರಾಜಸ್ಥಾನದ ರಾಣಿಪುಲಾ ಗ್ರಾಮದ ನಿರಾಶ್ರಿತರು. ನಮ್ಮ ಊರು ನೈಸರ್ಗಿಕ ವಿಪತ್ತಿಗೆ ಒಳಗಾಗಿ ಮನೆ-ಆಸ್ತಿ ಎಲ್ಲವೂ ನಷ್ಟವಾಗಿದೆ. ನೀವು ಸಹೃದಯರಾದವರು, ದಯವಿಟ್ಟು ₹500 ಅಥವಾ ₹1000 ರೂಪಾಯಿಗೆ ಸಹಾಯ ಮಾಡಿ ಎಂದು ಭಿಕ್ಷೆ ಬೇಡುತ್ತಾರೆ. ಜೊತೆಗೆ, ಹಣ ಕೊಟ್ಟವರ ಹೆಸರು ಮತ್ತು ಹಣವನ್ನು ಅವರಿಂದಲೇ ಬರೆಸಿಕೊಳ್ಳುತ್ತಾರೆ.
ಗ್ಯಾಂಗ್‌ನ ಕಾರ್ಯವೈಖರಿ:
ಈ ಗ್ಯಾಂಗ್ ಪ್ರತಿ ಸ್ಥಳದಲ್ಲೂ 2-3 ಜನರ ಗುಂಪುಗಳಾಗಿ ಹಂಚಿಕೊಂಡು ಕಾರ್ಯನಿರ್ವಹಿಸುತ್ತಿದೆ. ಮುಖ್ಯವಾಗಿ ಮಹಿಳೆಯರು ಮತ್ತು ಪುಟ್ಟ ಮಕ್ಕಳು ಇರುವ ಈ ತಂಡ, ಓಯೋ ಹೋಟೆಲ್, ಪಬ್, ಶಾಪಿಂಗ್ ಮಾಲ್‌ಗಳ ಬಳಿಯಲ್ಲಿ ಕಾಣಿಸಿಕೊಂಡು ಶ್ರೀಮಂತ ಯುವಜನರನ್ನು ಟಾರ್ಗೆಟ್ ಮಾಡುತ್ತಿದೆ.
ಮೊದಲು ಕಾಗದವನ್ನು ಓದಿಸಿ, ಭಿಕ್ಷೆ ಕೇಳುತ್ತಾರೆ. ಹಣ ನೀಡದಿದ್ದರೆ, ಬೆನ್ನಟ್ಟಿಕೊಂಡು ಅವರ ಹಿಂದೆಯೇ ಓಡುತ್ತಾ ಹೋಗಿ ಕೈ-ಕಾಲು ಹಿಡಿದು 'ಮಾನಸಿಕವಾಗಿ ಕಾಟ' ಕೊಡುತ್ತಾರೆ. ಇವರು ಬಿಟ್ಟು ಹೋದರೆ ಸಾಕು ಎನ್ನುವಂತಹ ಪರಿಸ್ಥಿತಿಗೆ ತಂದು ಹಣವನ್ನು ಪಡೆಯುತ್ತಾರೆ. ಕೆಲವೊಮ್ಮೆ ಹುಡುಗರಿಗೆ ಅಥವಾ ಜೋಡಿಯಾಗಿ ಹೋಗುವ ಯುವಜನರಿಗೆ ಭಿಕ್ಷಾಟನೆ ವೇಳೆ ತೀವ್ರ ಕಿರಿಕಿರಿ ಉಂಟುಮಾಡುತ್ತಾರೆ.
ಸಮಾಜ ಕಲ್ಯಾಣ ಇಲಾಖೆಗೆ ಮತ್ತು ಪೊಲೀಸರಿಗೆ ಸಂದೇಶ:
ಇವರು ಕೇವಲ ಭಿಕ್ಷುಕರು ಅಲ್ಲ. ಇವರು ಸಂಘಟಿತ ರೀತಿಯಲ್ಲಿ, ಮಕ್ಕಳನ್ನು ಉಪಯೋಗಿಸಿ ನಗರದಲ್ಲಿ ಭಿಕ್ಷಾಟನೆ ಉದ್ಯಮ ನಡೆಸುತ್ತಿರುವ ಗ್ಯಾಂಗ್. ಮಕ್ಕಳ ಹಕ್ಕುಗಳನ್ನು ದ್ವೇಷಮಾಡುವ ಈ ತಂತ್ರಕ್ಕೆ ಕಡಿವಾಣ ಹಾಕಬೇಕಾಗಿದ್ದು, ನಗರ ಪೊಲೀಸ್ ಆಯುಕ್ತರು ಮತ್ತು ಮಕ್ಕಳ ಕಲ್ಯಾಣ ಮಂಡಳಿ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಭಿಕ್ಷಾಟನೆಯಲ್ಲಿ ಮಕ್ಕಳನ್ನು ಉಪಯೋಗಿಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗಿದೆ. ಅನಧಿಕೃತವಾಗಿ ಹಣ ಸಂಗ್ರಹಿಸುವುದು ಕ್ರಿಮಿನಲ್ ನಡತೆಯಲ್ಲದೆ, ಸಾರ್ವಜನಿಕರಿಗೆ ತೊಂದರೆ ನೀಡುವಂತೆ ಮಾಡುತ್ತಿದೆ. ಈ ಗ್ಯಾಂಗ್ ಅನ್ನು ಹೀಗೆಯೇ ಬಿಟ್ಟರೆ ಭವಿಷ್ಯದಲ್ಲಿ ಇನ್ನಷ್ಟು ಅಪಾಯಕಾರಿಯಾದ ಅಕ್ರಮ ಚಟುವಟಿಕೆಗಳತ್ತ ತಿರುಗುವ ಸಾಧ್ಯತೆ ಇದೆ.
ಇನ್ನು ಮಕ್ಕಳು ನಮಗೇನಾದರೂ ತಿಂಡಿ ಕೊಡಿಸಿ ಎಂದು ಪ್ರತಿಷ್ಠಿತ ಹೋಟೆಲ್‌ನೊಳಗೆ ಹೋಗಿ ದುಂಬಾಲು ಬೀಳುತ್ತಾರೆ. ಊಟ ಕೊಡಿಸುವವರೆಗೀ ಅವರು ಅಲ್ಲಿಂದ ಎದ್ದು ಹೋಗುವುದಿಲ್ಲ.
ಬೆಂಗಳೂರು ನಗರ ನಿವಾಸಿಗಳಿಗೆ ಮಹತ್ವದ ಸೂಚನೆ:
ರಾಜ್ಯ ಪೊಲೀಸ್ ಇಲಾಖೆ, ಸಾಮಾಜಿಕ ಕಾರ್ಯಕರ್ತರು, ಮಕ್ಕಳ ಹಕ್ಕುಗಳ ರಕ್ಷಣಾ ಸಂಸ್ಥೆಗಳು ಇಂತಹ ಗ್ಯಾಂಗ್‌ಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಭಿಕ್ಷಾಟನೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸಂಚುಗಳ ಹಿಂದೆ ಪೋಷಕರಿಲ್ಲದ ಮಕ್ಕಳು ಬಲಿಯಾಗಬಾರದು.