ಬೆಂಗಳೂರು ಕೆಐಎ ಟರ್ಮಿನಲ್ 2ನಲ್ಲಿ ಮ್ಯೂಸಿಯಂ ಆಫ್ ಆರ್ಟ್ ಗ್ಯಾಲರಿ ಆರಂಭ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2, MAP ಸಹಯೋಗದೊಂದಿಗೆ ಕಲೆ ಮತ್ತು ಸಂಸ್ಕೃತಿಯ ತಾಣವಾಗಿ ರೂಪಾಂತರಗೊಳ್ಳುತ್ತಿದೆ. 60 ಕ್ಕೂ ಹೆಚ್ಚು ಕಲಾವಿದರಿಂದ 210 ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು, ಡಿಜಿಟಲ್ ತಂತ್ರಜ್ಞಾನದ ಮೂಲಕ ಸಂವಾದಾತ್ಮಕ ಅನುಭವವನ್ನು ನೀಡಲಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ಅನ್ನು ಕಲೆ, ಪರಂಪರೆ ಮತ್ತು ಸಂಸ್ಕೃತಿಯ ವೈಭವವನ್ನು ಪರಿಚಯಿಸುವ ಸಜೀವ ಸಾಂಸ್ಕೃತಿಕ ತಾಣವನ್ನಾಗಿ ಪರಿವರ್ತಿಸಲು ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿ (MAP) ಜೊತೆ ವಿಮಾನ ನಿಲ್ದಾಣದ ಆಡಳಿತ ಸಂಸ್ಥೆ (BIAL) ವಿಶೇಷ ಸಹಯೋಗವನ್ನು ಆರಂಭಿಸಿದೆ.
ಈ ನಿಟ್ಟಿನಲ್ಲಿ, ದಕ್ಷಿಣ ಏಷ್ಯಾದ ಶ್ರೀಮಂತ ಕಲಾ ಪರಂಪರೆಯನ್ನು ಪ್ರಯಾಣಿಕರ ಅನುಭವದ ಭಾಗವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. 60 ಕ್ಕೂ ಹೆಚ್ಚು ಕಲಾವಿದರಿಂದ ಆಯ್ದ 210 ಕ್ಕೂ ಹೆಚ್ಚು ಕಲಾಕೃತಿಗಳ ಮೂಲಕ ವಿಶಿಷ್ಟ ಕಲಾ ಗುರುತಿಗೆ ಹೆಸರುವಾಸಿಯಾದ ಟರ್ಮಿನಲ್ 2, ಈಗ ಡಿಜಿಟಲ್ ತಂತ್ರಜ್ಞಾನದಿಂದ ಶಕ್ತಿಯಾದ ಸಂವಾದಾತ್ಮಕ ಸ್ಥಾಪನೆಗಳ ಮೂಲಕ ಮತ್ತಷ್ಟು ಜೀವಂತವಾಗುತ್ತಿದೆ.
ಪ್ರಯಾಣದ ಜೊತೆಯಾದ ಕಲೆ
ದೇಶೀಯ ಟರ್ಮಿನಲ್‌ನಲ್ಲಿ, ಪ್ರಯಾಣಿಕರು MAP ನ “ಗ್ಯಾಲರಿ ಆನ್ ಡಿಮಾಂಡ್” ಅನ್ನು ಆನ್‌ಲೈನ್‌ನಲ್ಲಿ ಪ್ರವೇಶಿಸಬಹುದು. ಜಾಮಿನಿ ರಾಯ್, ಜಂಗರ್ ಸಿಂಗ್ ಶ್ಯಾಮ್, ಜ್ಯೋತಿ ಭಟ್, ಸುರೇಶ್ ಪಂಜಾಬಿ ಮತ್ತು ಎಲ್.ಎನ್. ತಲ್ಲೂರ್ ಅವರಂತಹ ದಿಗ್ಗಜ ಕಲಾವಿದರ ಕೈಚಳಕವನ್ನು ಇಲ್ಲಿ ವೀಕ್ಷಿಸಬಹುದು. ಬಾಲಿವುಡ್ ಅನ್ನು ಆಧರಿಸಿದ ವಿಶಿಷ್ಟ ಪ್ರದರ್ಶನಗಳು, ಕಲಾವಿದರ ಜೀವನವನ್ನು ಆಳವಾಗಿ ಪರಿಚಯಿಸುವ ಕಿರುಚಿತ್ರಗಳು, ಎಸ್.ಎಚ್. ರಾಝಾ ಮತ್ತು ಎನ್.ಎಸ್. ಬೇಂದ್ರೆ ಅವರ ಕೃತಿಗಳ ಆಧಾರಿತ ಆಸಕ್ತಿದಾಯಕ ಆಟಗಳು, ಹಾಗೂ ಡಿಜಿಟಲ್ ಲ್ಯಾಂಪ್ ಲೈಟಿಂಗ್ ಅನುಭವ ಇವೆಲ್ಲವೂ ನಿಮ್ಮ ಪ್ರಯಾಣವನ್ನು ಜೀವಂತವಾಗಿಡಲಿದೆ! “ಕ್ಯುಮುಲಸ್” ಎಂಬ ವಿಶೇಷ ವ್ಯವಸ್ಥೆ, ಪ್ರಯಾಣಿಕರಿಗೆ MAP ನ ಡಿಜಿಟಲ್ ಸಂಗ್ರಹವನ್ನು ವಿಶ್ಲೇಷಣೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹುಡುಕಾಟ, ಝೂಮ್ ಮತ್ತು ವೈಯಕ್ತಿಕ ಆಯ್ಕೆಗಳನ್ನು ಕೂಡ ಒದಗಿಸುತ್ತದೆ.
ಅಂತರರಾಷ್ಟ್ರೀಯ ಟರ್ಮಿನಲ್‌ನಲ್ಲಿ
ಇಲ್ಲಿ 'ಭೂರಿ ಬಾಯಿ: ಮೈ ಲೈಫ್ ಅಸ್ ಆನ್ ಆರ್ಟಿಸ್ಟ್' ಎಂಬ ಹೆಸರಿನ ವಿಶಿಷ್ಟ ಪ್ರದರ್ಶನವನ್ನು MAP ಆಯೋಜಿಸಿದೆ. ಖ್ಯಾತ ಗೊಂಡ್ ಕಲಾವಿದೆಯಾಗಿರುವ ಪದ್ಮಶ್ರೀ ಭೂರಿ ಬಾಯಿ ಅವರ ಜೀವನಗಾಥೆ, 1980ರ ದಶಕದ ಅವರ ಮೊದಲ ಕೃತಿಗಳಿಂದ ಹಿಡಿದು ಇತ್ತೀಚಿನ ಭವ್ಯ ಕಲಾಕೃತಿಗಳವರೆಗೆ ಇಲ್ಲಿ ಪ್ರದರ್ಶನವಾಗುತ್ತಿವೆ.
ನಾಯಕರ ಅಭಿಪ್ರಾಯ
BIAL ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮಾರಾರ್ ಅವರು, “MAP ಜೊತೆಗೆ ಮಾಡಿದ ಈ ಸಹಯೋಗದಿಂದ T2 ನಿಜವಾಗಿಯೂ ಒಂದು ಕಲಾ ಮತ್ತು ಸಂಸ್ಕೃತಿಯ ಉತ್ಸಾಹಭರಿತ ತಾಣವನ್ನಾಗಿ ಮಾರ್ಪಡಲಿದೆ. ಕಲೆಯನ್ನು ಪ್ರವಾಸದ ಭಾಗವನ್ನಾಗಿ ಮಾಡುವುದು, ಪ್ರಯಾಣಿಕರಿಗೆ ವಿಶ್ರಾಂತಿ, ಸ್ಫೂರ್ತಿ ಹಾಗೂ ಆತ್ಮಪರಿಶೀಲನೆಯ ಅನುಭವ ನೀಡುವುದು ನಮ್ಮ ಉದ್ದೇಶ” ಎಂದರು.
MAP ಸಂಸ್ಥಾಪಕ ಅಭಿಷೇಕ್ ಪೊದ್ದಾರ್ ಅವರು, “ಕಲೆಯು ಬದಲಾವಣೆ ತರಬಲ್ಲ ಶಕ್ತಿ ಹೊಂದಿದೆ ಎಂಬ ನಂಬಿಕೆಯಿಂದ MAP ನುಡಿದು ಬರುತ್ತಿದೆ. ಈ ನೂತನ ಸಹಯೋಗ MAP ಗೆ ದಕ್ಷಿಣ ಏಷ್ಯಾದ ಕಲೆ ಮತ್ತು ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ಪರಿಚಯಿಸಲು ಅಪೂರ್ವ ವೇದಿಕೆಯಾಗಿ ಪರಿಣಮಿಸಲಿದೆ” ಎಂದರು. ಈ ಹೊಸ ಪ್ರಯತ್ನದಿಂದ, ವಿಮಾನ ನಿಲ್ದಾಣದಲ್ಲಿ ಕೇವಲ ವಿಮಾನ ಪ್ರಯಾಣವಲ್ಲ, ಸಂಸ್ಕೃತಿಯ ಚಿಕ್ಕ ಜೀವಂತ ಆನಂದ ಯಾತ್ರೆಯೂ ಸಿಗಲಿದೆ!