ದಾಂಡೇಲಿಯಲ್ಲಿ ₹12 ಕೋಟಿ ಮೌಲ್ಯದ ₹500 ಮುಖಬೆಲೆಯ ನಕಲಿ ನೋಟು ಪತ್ತೆ!
ದಾಂಡೇಲಿಯ ಗಾಂಧಿನಗರದ ಮನೆಯೊಂದರಲ್ಲಿ ₹12 ಕೋಟಿ ಮೌಲ್ಯದ 500 ರೂ. ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಚಲನಚಿತ್ರ ಚಿತ್ರೀಕರಣಕ್ಕೆ ಮಾತ್ರ ಬಳಕೆ ಎಂದು ನಮೂದಿಸಿದ್ದ ನೋಟುಗಳ ಮೇಲೆ RBI ಸಹಿ, ಸೀರಿಯಲ್ ನಂಬರ್, ಗಾಂಧಿ ಚಿತ್ರ ಇದ್ದವು. ಪೊಲೀಸರು ಆರೋಪಿ ಅರ್ಷದ್ ಅಜುಂ ಖಾನ್‌ನನ್ನು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿನಗರದ ಮನೆಯೊಂದರಲ್ಲಿ ಬರೋಬ್ಬರಿ 12 ಕೋಟಿ ರೂ. ಮೌಲ್ಯದ 500 ರೂ. ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಈ ನೋಟಿಗಳನ್ನು ನೋಡಿದರೆ, ಅಸಲಿ ನೋಟಿಗೆ ಭಾರೀ ಸಾಮ್ಯತೆಯನ್ನು ಹೊಂದಿದ್ದು, ನೋಟಿನ ಬಗ್ಗೆ ಹೆಚ್ಚು ಗಮನ ಹರಿಸದವರು ಈ ನೋಟುಗಳನ್ನು ಪಡೆದು ಸುಲಭವಾಗಿ ಮೋಸ ಹೋಗುವಂತಿವೆ. ಇದೀದ ಪೊಲೀಸರು ಖಚಿತ ಸುಳಿವಿನ ಮೇರೆಗೆ ದಾಳಿ ಮಾಡಿದ್ದು, ಆರೋಪಿಯೊಬ್ಬ ನಕಲಿ ನೋಟುಗಳ ಹಾಸಿಗೆಯನ್ನೇ ಮಾಡಿಕೊಂಡು ಮಲಗಿದ್ದನ್ನು ಪತ್ತೆ ಮಾಡಿದ್ದಾರೆ.
ದಾಂಡೇಲಿಯಲ್ಲಿ ಕೋಟಿಗಟ್ಟಲೆ 500 ರೂ. ಮಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಂಡೇಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿನಗರದ ಮನೆಯೊಂದರಲ್ಲಿ ಬಾಡಿಗೆಗೆ ನೆಲೆಸಿದ್ದ ಅರ್ಷದ್ ಅಜುಂ ಖಾನ್ (36) ಬಂಧಿತ ಆರೋಪಿ ಆಗಿದ್ದಾನೆ. ಈತನ ಬಳಿ ಬರೋಬ್ಬರಿ 12 ಕೋಟಿ ರೂ. ಮೌಲ್ಯದ ನೋಟುಗಳು ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಇನ್ನು ಹಣದ ಬ್ಯಾಗ್‌ಗಳನ್ನು ತೆರೆದು ನೋಡಿದರೆ ಸಿನಿಮಾ ಚಿತ್ರೀಕರಣಕ್ಕೆ ಮಾತ್ರ ಬಳಕೆ ಎಂದು ನೋಟಿನ ಬ್ಯಾಗ್ ಮೇಲೆ ನಮೂದಿಸಲಾಗಿತ್ತು. ಆದರೆ, ನೋಟಿನ ಮೇಲೆ ಮಾತ್ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಹಿ, ಸೀರಿಯಲ್ ನಂಬರ್, ಗಾಂಧಿ ಚಿತ್ರ ಸೇರಿದಂತೆ ಎಲ್ಲವನ್ನೂ ಯಥಾವತ್ತಾಗಿ ನಮೂದು ಮಾಡಲಾಗಿತ್ತು. ನಕಲಿ ನೋಟುಗಳನ್ನು ಚಲಾವಣೆಗೆ ತರುವುದಕ್ಕೆಂದೇ ಈ ನೋಟುಗಳನ್ನು ಮುದ್ರಣ ಮಾಡಿದ್ದಾರೆಂದು ಪೊಲೀಸರಿಗೆ ಅನುಮಾನ ಬಂದಿದೆ.
ಈ ಕುರಿತಂತೆ ದಾಂಡೇಲಿ ಪೊಲೀಸರು ನಕಲಿ ನೋಟುಗಳನ್ನು ಇಟ್ಟುಕೊಂಡ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನ ಮಾಡಿದಾಗ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ, ಪೊಲೀಸರು ಆತನ ಪೂರ್ವಾಪರ ಹಿನ್ನೆಲೆಯ ಬಗ್ಗೆ ಶೋಧನೆ ಮಾಡಿದಾಗ ಆತನೊಬ್ಬ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿ ಎಂಬುದು ಕಂಡುಬಂದಿದೆ. ಆದ್ದರಿಂದ ಇದು ನಕಲಿ ನೋಟಿನ ಜಾಲವೆಂದು ಶಂಕೆ ವ್ಯಕ್ತಪಡಿಸಿದ ದಾಂಡೇಲಿ ಪೊಲೀಸರು ಆರೋಪಿ ಬಂಧಿಸಲು ಹುಡುಕಾಟ ನಡೆಸಿದ್ದಾರೆ.
ನಕಲಿ ನೋಟಿನ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯ ಬೆನ್ನುಹತ್ತಿದಾಗ ಅರ್ಷದ್ ಅಜುಂ ಖಾನ್ ಉತ್ತರ ಪ್ರದೇಶ ರಾಜ್ಯದ ಲಕ್ನೋದಲ್ಲಿ ಇರುವ ಸುಳಿವು ಪತ್ತೆ ಮಾಡಿದ್ದಾರೆ. ನಂತರ ಉತ್ತರ ಪ್ರದೇಶ ಪೊಲೀಸರ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಿದ್ದು, ಕಾರವಾರಕ್ಕೆ ಕರೆತಂದಿದ್ದಾರೆ. ಆತನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ, ಇಂದು ದಾಂಡೇಲಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.