- Home
- News
- State
- Karnataka Heavy Rail Alert: ಕರಾವಳಿ ಮತ್ತು ಮಲೆನಾಡಿಗೆ ಹಳದಿ ಅಲರ್ಟ್, ಬೆಂಗಳೂರಿನಲ್ಲೂ ಮಳೆ ಆರ್ಭಟ!
Karnataka Heavy Rail Alert: ಕರಾವಳಿ ಮತ್ತು ಮಲೆನಾಡಿಗೆ ಹಳದಿ ಅಲರ್ಟ್, ಬೆಂಗಳೂರಿನಲ್ಲೂ ಮಳೆ ಆರ್ಭಟ!
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಒಂದು ವಾರ ವ್ಯಾಪಕ ಮಳೆಯಾಗಲಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ, ಜೂನ್ 21 ರಿಂದ 24ರವರೆಗೆ ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರು (ಜೂ.18): ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ ಒಂದು ವಾರ ಕಾಲ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಜೂನ್ 21 ರಿಂದ ಜೂನ್ 24 ರವರೆಗೆ ಕರಾವಳಿ ಜಿಲ್ಲೆಗಳು ಮತ್ತು ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿ ಡಾ. ಎನ್. ಪುವಿಯರಸನ್ ತಿಳಿಸಿದ್ದಾರೆ.
ಮುಂಗಾರು ಮಾರುತಗಳ ಚಲನೆ ಹೇಗಿದೆ?
ನೈಋತ್ಯ ಮುಂಗಾರು ಮಾರುತಗಳು ಪ್ರಸ್ತುತ ಹರ್ನಾಯ್, ಸೋಲಾಪುರ, ಹೈದರಾಬಾದ್ ಮತ್ತು ಭದ್ರಾಚಲಂ ಮೂಲಕ ಹಾದು ಹೋಗುತ್ತಿವೆ. ಮುಂದಿನ 4-5 ದಿನಗಳಲ್ಲಿ ತೆಲಂಗಾಣ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಉಳಿದ ಭಾಗಗಳಿಗೆ ಮುಂಗಾರು ಮತ್ತಷ್ಟು ವಿಸ್ತರಿಸಲು ಪೂರಕ ವಾತಾವರಣವಿದೆ. ಇದರ ಜೊತೆಗೆ, ಅರಬ್ಬೀ ಸಮುದ್ರ ಮತ್ತು ಕೇರಳ ಕರಾವಳಿಯಲ್ಲಿ ವಾಯುಭಾರ ಕುಸಿತ ಹಾಗೂ ಸುಳಿಗಾಳಿ ಉಂಟಾಗಿರುವುದರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ.
ಮುಂದಿನ 24 ಗಂಟೆಗಳ ಹವಾಮಾನ:
ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಗದಗ, ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಲಘುವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೊಡಗು, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಜೂನ್ 21 ರಿಂದ ಭಾರೀ ಮಳೆ ಎಚ್ಚರಿಕೆ:
ಜೂನ್ 21 ರಿಂದ ಜೂನ್ 24 ರವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ, ಜೂನ್ 21 ಮತ್ತು 22 ರಂದು ಮಲೆನಾಡು ಮತ್ತು ಒಳನಾಡಿನ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಭಾರೀ ಮಳೆಯಾಗಲಿದೆ.
ಜಿಲ್ಲಾವಾರು ಮಳೆ ವಿವರ:
ಕರಾವಳಿ ಕರ್ನಾಟಕ: ಮುಂದಿನ 7 ದಿನಗಳ ಕಾಲ ನಿರಂತರ ಮಳೆಯಾಗಲಿದ್ದು, 21ನೇ ತಾರೀಖಿನ ನಂತರ ಮಳೆ ತೀವ್ರಗೊಳ್ಳಲಿದೆ.
ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಜೂನ್ 21 ಮತ್ತು 22 ರಂದು ಗುಡುಗು ಸಹಿತ ಮಳೆಯಾಗಲಿದೆ.
ದಕ್ಷಿಣ ಒಳನಾಡು: ಬೆಂಗಳೂರು ಗ್ರಾಮಾಂತರ, ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರದಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು ಹವಾಮಾನ:
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಗರದಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

