ರಾಜ್ಯ ರಾಜಕಾರಣದಲ್ಲಿ ಬೆಚ್ಚಿಬೀಳಿಸೋ ಹಗರಣ; ಮಾಜಿ ಸಚಿವರ ಬಾಲಂಗೋಚಿಗಳಿಂದ ₹360 ಕೋಟಿ ಲೂಟಿ!
ಕೆಂಗೇರಿ ಹೋಬಳಿಯ ದೊಡ್ಡಬೆಲೆ ಗ್ರಾಮದಲ್ಲಿ 360 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆ ಹಗರಣ ಬೆಳಕಿಗೆ ಬಂದಿದೆ. ಶಾಸಕರ ಆಪ್ತರು ನಕಲಿ ದಾಖಲೆಗಳ ಮೂಲಕ ಭೂಮಿ ಕಬಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಹೋರಾಟಗಾರರ ಅನುಮಾನಾಸ್ಪದ ಸಾವುಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಬೆಂಗಳೂರು: ರಾಜ್ಯದ ರಾಜಕೀಯ ವಲಯವನ್ನು ಬೆಚ್ಚಿ ಬೀಳಿಸಿರುವ ಬೃಹತ್ ಭೂಕಬಳಿಕೆ ಹಗರಣ ಬೆಳಕಿಗೆ ಬಂದಿದೆ. ಕೆಂಗೇರಿ ಹೋಬಳಿಯ ದೊಡ್ಡಬೆಲೆ ಗ್ರಾಮದಲ್ಲಿ ಕನಿಷ್ಠ 360 ಕೋಟಿಗೂ ಮೌಲ್ಯ ಬಾಳುವ ಸರ್ಕಾರಿ ಭೂಮಿ ಕಬಳಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಹೊರಬಿದ್ದಿದ್ದು, ಈ ಹಗರಣದ ಹಿಂದೆ ಶಾಸಕ ಎಸ್.ಟಿ. ಸೋಮಶೇಖರ್ ಆಪ್ತರೆಂದು ಹೇಳಲಾಗುತ್ತಿರುವ ನಾರಾಯಣಪ್ಪ ಮತ್ತು ಲಕ್ಕಪ್ಪ ಸಹೋದರರು ನಕಲಿ ದಾಖಲೆಗಳ ಆಧಾರದ ಮೇಲೆ 350 ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರಿ ಜಮೀನು ಕಬಳಿಸಿರುವ ಆರೋಪ ಹೊರಬಿದ್ದಿದೆ.
ದೊಡ್ಡಬೆಲೆ ಗ್ರಾಮದಲ್ಲಿ ಒಟ್ಟು 39 ಎಕರೆ ಸರ್ಕಾರಿ ಜಾಗವಿದ್ದು, ಅದರಲ್ಲೂ 24 ಎಕರೆ ಜಮೀನು ನಕಲಿ ದಾಖಲೆಗಳ ಆಧಾರದ ಮೇಲೆ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿಯೊಂದು ಎಕರೆಗೂ ಕನಿಷ್ಠ 15–20 ಕೋಟಿ ರೂಪಾಯಿ ಮೌಲ್ಯ ಬಾಳುವ ಈ ಭೂಮಿಯ ಒಟ್ಟು ಬೆಲೆ 360 ಕೋಟಿಗೂ ಹೆಚ್ಚು.ನಕಲಿ ಹಕ್ಕುಪತ್ರಗಳು, ದಾಖಲೆಗಳು ಹಾಗೂ ಉಳುಮೆದಾರರ ಕಾಯ್ದೆಯ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ರಾಜಕೀಯ ಪ್ರಭಾವ ಬಳಸಿ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಈ ಭೂಮಿಯನ್ನು ಖಾಸಗಿ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ ಎಂಬ ಆರೋಪ ಗಂಭೀರವಾಗಿ ಕೇಳಿಬರುತ್ತಿದೆ.
ಹೋರಾಟಗಾರರ ಅನುಮಾನಾಸ್ಪದ ಸಾವು
ಭೂಗಳ್ಳತನದ ವಿರುದ್ಧ ಹೋರಾಡಿದ ಸ್ಥಳೀಯರು ಮತ್ತು ಹೋರಾಟಗಾರರು ದುರ್ಭಾಗ್ಯಕರ ಅಂತ್ಯ ಕಂಡಿದ್ದಾರೆ. 2002ರಲ್ಲಿ ನಿವೃತ್ತ ಯೋಧ ಕೈಲಾಸ್ ಹತ್ಯೆಗೀಡಾದರು. 2003ರಲ್ಲಿ ಹೋರಾಟಗಾರ್ತಿ ಲಕ್ಷ್ಮಮ್ಮ ಕೊಲೆಯಾದರು. ಅದೇ ವರ್ಷ ಮತ್ತೊಬ್ಬ ಹೋರಾಟಗಾರ ವೆಂಕಟಪ್ಪ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡರು. ಈ ಮೂರು ಪ್ರಕರಣಗಳ ಹಿಂದೆಯೂ ಭೂಮಿಯನ್ನು ಕಬಳಿಸಿದವರ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಎನ್.ಆರ್. ರಮೇಶ್ ಆಗ್ರಹ
ಈ ಹಗರಣದ ಕುರಿತು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ ಹೊರಿಸಿ, ಮರುತನಿಖೆ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ. ಅವರ ಪ್ರಕಾರ, 39 ಎಕರೆಗಳಲ್ಲಿ 24 ಎಕರೆ ಸರ್ಕಾರಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಹತ್ತಿಕ್ಕಲಾಗಿದೆ. ಇನ್ನೂ 15 ಎಕರೆ ಭೂಮಿಯನ್ನು 75 ವರ್ಷಗಳ ಹಿಂದೆ ಕೇವಲ 100 ರೂಪಾಯಿಗೆ ಖರೀದಿಸಿದಂತೆ ಸುಳ್ಳು ದಾಖಲೆ ಮಾಡಲಾಗಿದೆ. ಗ್ರಾಮಸ್ಥರು 2000ರಿಂದಲೇ ಈ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ನಾರಾಯಣಪ್ಪ ಮತ್ತು ಲಕ್ಕಪ್ಪ ಸಹೋದರರು ಸುಳ್ಳು ದಾಖಲೆಗಳ ಮೂಲಕ ಈ ಜಾಗವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.
ಸರ್ಕಾರದ ನಿರ್ಲಕ್ಷ್ಯ?
ಗ್ರಾಮಸ್ಥರ ದೀರ್ಘಕಾಲದ ಹೋರಾಟದ ನಂತರ, ಮುಖ್ಯಮಂತ್ರಿ ಕಚೇರಿ ಹಾಗೂ ಕಂದಾಯ ಸಚಿವರ ಕಚೇರಿಯಿಂದಲೇ ತಹಶೀಲ್ದಾರಿಗೆ ಅಧಿಕೃತ ಪತ್ರ ಬರೆದು, 24 ಎಕರೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಜೂನ್ 2025ರಲ್ಲಿ ನೀಡಲಾದ ಈ ನಿರ್ದೇಶನಕ್ಕೆ ಈಗಾಗಲೇ 50 ದಿನಗಳು ಕಳೆದಿದ್ದರೂ, ಜಿಲ್ಲಾಡಳಿತ ಇನ್ನೂ ಕ್ರಮ ಕೈಗೊಂಡಿಲ್ಲ. ಈ ವಿಳಂಬದ ಹಿಂದಿರುವುದು “ಪ್ರಭಾವಿ ರಾಜಕೀಯ ನಾಯಕರ ರಕ್ಷಣೆಯೇ ಕಾರಣ” ಎಂದು ಗ್ರಾಮಸ್ಥರು ಹಾಗೂ ರಮೇಶ್ ಆರೋಪಿಸಿದ್ದಾರೆ.
ಭವಿಷ್ಯದ ಹೋರಾಟ
“ರಾಜ್ಯದ ಸಂಪತ್ತನ್ನು ಕಬಳಿಸಿ ಖಾಸಗಿ ಸ್ವಾಧೀನಕ್ಕೆ ತೆಗೆದುಕೊಳ್ಳುವವರ ವಿರುದ್ಧ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತವು 360 ಕೋಟಿಗೂ ಹೆಚ್ಚು ಮೌಲ್ಯದ ಈ ಭೂಮಿಯನ್ನು ತಕ್ಷಣ ವಶಪಡಿಸಿಕೊಂಡು, ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಎನ್.ಆರ್. ರಮೇಶ್ ಎಚ್ಚರಿಸಿದ್ದಾರೆ.
ಸರ್ಕಾರದ ಹಸ್ತಕ್ಷೇಪಕ್ಕೆ ಆಗ್ರಹ
“ಈ ಭೂಕಬಳಿಕೆ ಹಗರಣದ ಹಿಂದೆ ರಾಜಕೀಯ ಪ್ರಭಾವ ಬಳಸಲಾಗಿದೆ. ಹೋರಾಟಗಾರರ ಸಾವಿನ ಬಗ್ಗೆ ಮರುತನಿಖೆ ನಡೆಸಬೇಕು. ಕಬಳಿಸಲಾದ ಜಾಗವನ್ನು ತಕ್ಷಣ ಸರ್ಕಾರ ವಶಪಡಿಸಿಕೊಳ್ಳಬೇಕು” ಎಂದು ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ.
ಅವರು ಮುಖ್ಯಮಂತ್ರಿ, ಗೃಹ ಸಚಿವ, ಬೆಂಗಳೂರು ಪೊಲೀಸ್ ಆಯುಕ್ತ, ಪೊಲೀಸ್ ಮಹಾ ನಿರ್ದೇಶಕ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ನ್ಯಾಯ ಸಿಗುವಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.