ಆನೆ ನಡೆದಿದ್ದೇ ದಾರಿ ಎನ್ನೋ ಕಾಲ ಹೋಯ್ತು! ಇನ್ಮೇಲೇನಿದ್ದರೂ ನಾವು ತೋರ್ಸಿದ ದಾರಿಗೆ ಆನೆ ಹೋಗಬೇಕು!
ಆನೆ ನಡೆದಿದ್ದೇ ದಾರಿ ಅನ್ನೋ ಕಾಲ ಹೋಯ್ತು. ಇನ್ನೇನಿದ್ದರೂ ನಾವ್ ನಡ್ಸಿದ್ ದಾರೀಲಿ ಆನೆ ನಡೆಯಬೇಕೋ ಅನ್ನೋ ಕಾಲ ಬಂದಿದೆ. ಒಂಟಿ ಸಲಗವಾಗಲೀ, ಹಿಂಡು-ಹಿಂಡು ಆನೆಗಳಾಗಲೀ ನಾವು ಮಾನೀಟರ್ ಮಾಡಿದ ಮಾರ್ಗದಲ್ಲೇ ಹೋಗಬೇಕು..., ಹೋಗ್ತಾವೆ ಅಲ್ಲಲ್ಲಾ..., ಹೋಗ್ತಿವೆ ನೋಡಿ. ಕರ್ನಾಟಕ ಅರಣ್ಯ ಇಲಾಖೆಯು ಆನೆಗಳನ್ನು ನಿಯಂತ್ರಿಸಲು ಹೊಸ ತಂತ್ರಜ್ಞಾನವನ್ನು ಬಳಸುತ್ತಿದೆ.

ಭಾರತ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆನೆಗಳನ್ನು ನಾವು ಹೇಳಿದ ದಾರಿಯಲ್ಲಿ ಹೋಗುವಂತೆ ಮಾಡಿದ ರಾಜ್ಯ ಕರ್ನಾಟಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಕಳೆದೊಂದು ವರ್ಷದಿಂದ ಕಾಫಿನಾಡು ಹಾಗೂ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಮಲೆನಾಡಿಗರು ಆನೆಗಳ ಹಾವಳಿಗೆ ಹೈರಾಣಾಗಿದ್ದರು. ಅರಣ್ಯ ಅಧಿಕಾರಿಗಳು ಹಗಲಿರುಳು ನಿದ್ದೆಗೆಟ್ಟು ಆನೆಗಳನ್ನು ಓಡಿಸುತ್ತಲೇ ಕಂಗೆಟ್ಟು ಹೋಗಿದ್ದರು.
ಆದರೆ, ಇದೀಗ ನೋ ಪ್ರಾಬ್ಲಂ. ಆನೆಗಳು ಸಂಚರಿಸುವ ಕಾಡಿನಲ್ಲಿ 2ರಿಂದ 3 ಜನ ಫಾರೆಸ್ಟ್ ವಾಚರ್ ಸಿಬ್ಬಂದಿ ಇದ್ದರೆ ಸಾಕು. ಆಫೀಸಿನಲ್ಲಿ ಕುಳಿತುಕೊಂಡೇ ಒಂಟಿ ಸಲಗ ಮಾತ್ರವಲ್ಲ, 20 ಆನೆಗಳ ಹಿಂಡು ಇದ್ದರೂ ಸಲೀಸಾಗಿ ಅವುಗಳನ್ನು ನಾವು ತೀರ್ಮಾನಿಸಿದ ದಾರಿಗೆ ಕಳಿಸಬಹುದಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಆನೆ ಎಲ್ಲಿಗೆ ಹೋಗ್ತಾವೆ, ಯಾರ ತೋಟ-ಹೊಲ-ಗದ್ದೆ-ಮನೆಗೆ ಹೋಗ್ತಾವೋ ಯಾರಿಗೂ ಗೊತ್ತಿರಲಿಲ್ಲ. ಮನಸ್ಸೋ ಇಚ್ಛೆ ನುಗ್ಗುತ್ತಿದ್ದವು. ಆನೆಗಳು ರೈತರ ತೋಟಗಳಿಗೆ ನುಗ್ಗಿದ ನಂತರ ಮನಸೋ ಇಚ್ಛೆ ದಾಂಧಲೆ ಮಾಡದೇ ತೋಟದಿಂದ ಕಾಲ್ಕೀಳುತ್ತಿರಲಿಲ್ಲ.
elephant
ಇದೀಗ ಆನೆಗಳ ಹಾವಳಿ ತಪ್ಪಿಸಲು ಸರ್ಕಾರದಿಂದ ಉತ್ತಮ ಪರಿಹಾರ ತಂತ್ರವನ್ನು ಕಂಡುಕೊಳ್ಳಲಾಗಿದೆ. ಇದರಿಂದ ಆನೆಗಳು ರೈತರ ತೋಟಗಳು ಹಾಗೂ ಗ್ರಾಮಗಳತ್ತ ನುಗ್ಗುವುದನ್ನು ಸುಲಭವಾಗಿ ದಾರಿ ತಪ್ಪಿಸಿ ಪುನಃ ಕಾಡಿನ ಕಡೆಗೆ ಅಟ್ಟಬಹುದು. ಇದರಿಂದ ಅಧಿಕಾರಿಗಳ ಜೊತೆ ಮಲೆನಾಡಿಗರು ಕೂಡ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.
ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಓಡಿಸುವುದಕ್ಕೆಂದಲೇ ಹೊಸ ಡಿವೈಸ್ ಬಳಸುತ್ತಿದ್ದಾರೆ. ಡ್ರೋನ್ ಕ್ಯಾಮರಾದಲ್ಲಿ ಆನೆಗಳ ಚಲನ-ವಲನ ಗಮನಿಸೋ ಅಧಿಕಾರಿಗಳು ಆನೆಗಳು ಊರು-ತೋಟಗಳಿಗೆ ಬರುವ ಮಾರ್ಗದಲ್ಲಿ ಈ ಡಿವೈಸ್ ಅಳವಡಿಸುತ್ತಾರೆ. ಮರದ ಮೇಲೆ 6-8 ಅಡಿ ಎತ್ತರದಲ್ಲಿ ಈ ಡಿವೈಸ್ ಕಟ್ಟಿರುತ್ತಾರೆ.
ಆದರೆ, ಆನೆಗಳು ಈ ಡಿವೈಸ್ ನಿಂದ 15-20 ಮೀಟರ್ ದೂರದಲ್ಲಿ ಇರುವಾಗಲೇ ಚಿತ್ರ-ವಿಚಿತ್ರ ಶಬ್ಧ ಮಾಡಲಾರಂಭಿಸುತ್ತದೆ. ಆ ಶಬ್ಧಕ್ಕೆ ಹೆದರಿ ಆನೆಗಳ ಹಿಂಡು ಬಂದ ದಾರಿಯಲ್ಲೇ ವಾಪಸ್ ಹೋಗುತ್ತವೆ. ಮಲೆನಾಡಿನ ಭಾಗವಾದ ಎನ್.ಆರ್. ಪುರದಲ್ಲಿ ಈ ಪ್ರಯೋಗ ಯಶಸ್ವಿ ಕೂಡ ಆಗಿದ್ದು ಮಲೆನಾಡಿಗರ ಜೊತೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಸದ್ಯಕ್ಕೆ ಈ ಡಿವೈಸ್‌ನಿಂದ ಅರಣ್ಯ ಅಧಿಕಾರಿಗಳು ಕಾಡಾನೆಗಳು ನಾಡಿನತ್ತ ಬರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಡಿವೈಸ್ ಪೂರ್ಣ ಪ್ರಮಾಣದಲ್ಲಿ ಸಕ್ಸಸ್ ಆದರೆ, ಕಾಡಾನೆಯಿಂದ ಕೃಷಿಕರು ಕಾಡಾನೆಗಳಿಂದ ಬೆಳೆ ಉಳಿಸಿಕೊಳ್ಳಬಹುದು. ಜೊತೆಗೆ, ಅರಣ್ಯ ಅಧಿಕಾರಿಗಳು ಸ್ವಲ್ಪ ನೆಮ್ಮದಿಯಿಂದ ಇರಬಹುದು. ಈ ಸೋಲಾರ್ ಡಿವೈಸ್ ಸೆನ್ಸಾರ್ ಮೂಲಕವೇ ಕೆಲಸ ಮಾಡುತ್ತೆ. ಹಾಗಾಗಿ, ಮರಗಳ ಮೇಲೆ ನೆಲದಿಂದ 6-8 ಅಡಿ ಎತ್ತರದಲ್ಲಿ ಈ ಡಿವೈಸ್ ಕಟ್ಟಿರುತ್ತಾರೆ. ಆನೆಗಳು ಈ ಡಿವೈಸ್ ಬಳಿ ಬರ್ತಿದ್ದಂತೆ ಡಿವೈಸ್ ಶಬ್ಧ ಮಾಡುತ್ತವೆ. ಆಗ ಆನೆಗಳು ವಾಪಸ್ ಕಾಡಿನ ದಾರಿ ಹಿಡಿಯುತ್ತವೆ.
ರಾತ್ರಿಯಾದರೂ ಇದರ ಲೈಟ್ ಬೆಳಕು ಪಟಾಕಿಯಲ್ಲಿ ಬರೋ ಬೆಳಕಿನಂತೆ ಕಾಣುವುದರಿಂದ ಆನೆಗಳು ಹಿಂದೆ ಹೋಗುತ್ತವೆಯಂತೆ. ಈಗಾಗಲೇ ಇದರ ಪ್ರಯೋಗ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ರೈತರಿಗೂ ಈ ಡಿವೈಸ್ನಗ ಸಬ್ಸಿಡಿಯಲ್ಲಿ ಕೊಡೋದಕ್ಕೆ ಆರಣ್ಯ ಇಲಾಖೆ ಚಿಂತಿಸಿದೆ.
ಒಟ್ಟಾರೆ, ಆನೆ ನಡ್ದಿದ್ದೇ ದಾರಿ ಎಂಬಂತೆ ಇಷ್ಟು ದಿನಗಳ ಕಾಲ ಆನೆಯಿಂದ ರೈತರು ಕಳೆದುಕೊಂಡಿದ್ದೇ ಹೆಚ್ಚು. ಅಧಿಕಾರಿಗಳು-ಸ್ಥಳಿಯರು ಏನೇ ಮಾಡಿದ್ರು ಆನೆಗಳ ಹಾವಳಿ ತಡೆಯೋಕೆ ಆಗ್ತಿರ್ಲಿಲ್ಲ. ಆದ್ರೀಗ, ಬೆಳೆಗಳನ್ನ ಉಳಿಸೋದ್ರ ಜೊತೆ ಆನೆಗಳು ನಗರದತ್ತ ಬಾರದಂತೆ ತಡೆಯಲು ಡಿವೈಸ್ ಕೆಲಸ ಮಾಡ್ತಿದೆ. ಈ ಡಿವೈಸ್ ಸಮರ್ಪಕವಾಗಿ ಸಕ್ಸಸ್ ಆದ್ರೆ, ಮಲೆನಾಡಲ್ಲಿ ಆನೆ ಹಾವಳಿಗೆ ಶಾಶ್ವತ ಬ್ರೇಕ್ ಬೀಳಬಹುದು. ಆದ್ರೆ, ಈ ಶಬ್ಧ ನಿರಂತರವಾದ ಮೇಲೆ ಆನೆಗಳು ಹೇಗೆ ರಿಯಾಕ್ಟ್ ಮಾಡ್ತಾವೆ ಅನ್ನೋದು ಮಾತ್ರ ಗೊತ್ತಿಲ್ಲ.
ವರದಿ : ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್