- Home
- News
- State
- ಚಿನ್ನಸ್ವಾಮಿ ಕಾಲ್ತುಳಿತ ಸ್ಥಳ ಪರಿಶೀಲನೆ; ಯಾವ ಗೇಟಲ್ಲಿ ಎಷ್ಟು ಜನ ಸತ್ತಿದ್ದಾರೆ ಗೊತ್ತಿಲ್ಲವೆಂದ ಗೃಹ ಸಚಿವ!
ಚಿನ್ನಸ್ವಾಮಿ ಕಾಲ್ತುಳಿತ ಸ್ಥಳ ಪರಿಶೀಲನೆ; ಯಾವ ಗೇಟಲ್ಲಿ ಎಷ್ಟು ಜನ ಸತ್ತಿದ್ದಾರೆ ಗೊತ್ತಿಲ್ಲವೆಂದ ಗೃಹ ಸಚಿವ!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. ಇನ್ನೂ 10 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು (ಜೂ. 5): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿದ ಸ್ಥಳಗಳಿಗೆ ಗೃಹ ಸಚಿವ ಜಿ.ಪರಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವ ಗೇಟಲ್ಲಿ ಎಷ್ಟು ಜನ ಕಾಲ್ತುಳಿತಕ್ಕೆ ಸತ್ತಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಇನ್ನು ಆಸ್ಪತ್ರೆಗೆ 56 ಗಾಯಾಳುಗಳು ದಾಖಲಾಗಿದ್ದು, 46 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 10 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಮಾಹಿತಿ ನೀಡಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಡಿಸಿಪಿಗಳಿಂದ ಮಾಹಿತಿ ಪಡೆದರು. ಬಳಿಕ ಕೆಎಸ್‌ಸಿಎ, ಆರ್‌ಸಿಬಿ ಹಾಗೂ ಬೆಂಗಳೂರು ನಗರ ಪೊಲೀಸರೊಂದಿಗೆ ಸುದೀರ್ಘ ಸಭೆ ನಡೆಸಿ, ಚರ್ಚಿಸಿದರು.
ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ ಅವರು, ಸಿಎಂ ಅವರು ಮೆಜಿಸ್ಟ್ರಿಯಲ್ ವಿಚಾರಣೆಗೆ ಆದೇಶಿಸಿದ್ದು, ಅದರ ಪ್ರಕ್ರಿಯೆ ಆರಂಭವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವ ಸ್ಥಳದಲ್ಲಿ ಕಾಲ್ತುಳಿತ ಆಗಿದೆ. ಅದನ್ನು ಯಾವ ರೀತಿಯಾಗಿ ತಪ್ಪಿಸಬಹುದಾಗಿತ್ತು ಎಂಬುದನ್ನು ತಿಳಿದುಕೊಳ್ಳಲು ಖುದ್ದಾಗಿ ನಾನೇ ಬಂದು ಪರಿಶೀಲಿಸಿದ್ದೇನೆ ಎಂದರು.
ಗೇಟ್ ನಂಬರ್ 6, 7, 2 ಮತ್ತು 2ಎ, 17, 18, 21, 16 ಇಷ್ಟು ಗೇಟ್‌ಗಳಲ್ಲಿ ಕಾಲ್ತುಳಿತ ಆಗಿದೆ. ಘಟನೆ ನಡೆದ ಸ್ಥಳದಲ್ಲಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇಲ್ಲ. ಆಸ್ಪತ್ರೆಗೆ ಕರೆದೊಯ್ಯುವಾಗ, ಚಿಕಿತ್ಸೆ ವೇಳೆ ಕೆಲವರು ಮೃತಪಟ್ಟಿದ್ದಾರೆ. ಹೀಗಾಗಿ ಯಾವ ಗೇಟ್‌ನಲ್ಲಿ ಎಷ್ಟು ಜನ ಸಾವನ್ನಪ್ಪಿದರು ಎಂಬ ಮಾಹಿತಿ ಇಲ್ಲ ಎಂದು ತಿಳಿಸಿದರು.
ವಿಧಾನಸೌಧದ ಮುಂದೆ ಒಂದು ಲಕ್ಷ ಜನ ಸೇರುತ್ತಾರೆ ಎಂದು ಅಂದಾಜಿಸಲಾಗಿತ್ತು. ಸ್ಟೇಡಿಯಂನಲ್ಲಿ 40 ಸಾವಿರ ಮತ್ತು ಸ್ಟೇಡಿಯಂ ಹೊರಗಡೆ 2.50 ಲಕ್ಷ ಜನ ಸೇರಿದ್ದರು ಎಂಬುದಾಗಿ ಅಂದಾಜಿಸಲಾಗಿದೆ. ಮೆಟ್ರೋ ಸಂಸ್ಥೆಯವರು ಹೇಳುವ ಪ್ರಕಾರ 8.7 ಲಕ್ಷ ಜನ ಪ್ರಯಾಣಿಸಿದ್ದಾರೆ. ಇಷ್ಟೊಂದು ಜನ ಒಂದೇ ಕಡೆ ಸೇರಿದ್ದರ ಉದಾಹರಣೆಗಳಿಲ್ಲ. ದುರ್ದೈವದಿಂದ ಈರೀತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದುರ್ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. 46 ಜನ ಚಿಕಿತ್ಸೆ ಪಡೆದು ಮನೆಗಳಿಗೆ ಹೋಗಿದ್ದಾರೆ. 10 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.