ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪ್ರಕರಣದ ತನಿಖೆ ನಡೆಸುತ್ತಿದ್ದು, ಸೌಜನ್ಯ ಪ್ರಕರಣದ ಮರು ತನಿಖೆ ಎನ್ನಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಬೆಂಗಳೂರು (ಸೆ.05): ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪ್ರಕರಣದ ತನಿಖೆ ನಡೆಸುತ್ತಿದ್ದು, ಸೌಜನ್ಯ ಪ್ರಕರಣದ ಮರು ತನಿಖೆ ಎನ್ನಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ಸೌಜನ್ಯ ಪ್ರಕರಣದಲ್ಲಿ ಆರೋಪಮುಕ್ತರಾಗಿರುವ ಉದಯಕುಮಾರ್‌ ಜೈನ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಿಗಳು ಯಾವ ಆಧಾರದಲ್ಲಿ ವಿಚಾರಣೆ ನಡೆಸಿದ್ದಾರೋ ಗೊತ್ತಿಲ್ಲ. ಅವರಿಗೆ ಸಿಕ್ಕಿರುವ ಮಾಹಿತಿ ಏನು? ಏನಾದರೂ ಮಾಹಿತಿ ಸಿಕ್ಕಿದೆಯೇ ಎಂಬ ಮಾಹಿತಿ ಇಲ್ಲ. ತನಿಖೆ ಸಂದರ್ಭದಲ್ಲಿ ಬೇಕಾದಷ್ಟು ವಿಚಾರ ಕಲೆ ಹಾಕಿರುತ್ತಾರೆ,

ಎಸ್‌ಐಟಿಗೆ ಮಾಹಿತಿ ಕೊಡುವವರು ಏನೋ ಮಾಹಿತಿ ನೀಡಿರಬಹುದು. ಅದಕ್ಕಾಗಿ ಉದಯ್‌ ಜೈನ್‌ರನ್ನು ಕರೆಸಿರಬಹುದು ಎಂದರು. ಟರ್ಮ್ಸ್ ಆಫ್ ರೆಫರೆನ್ಸ್‌ನಲ್ಲಿ ಇಲ್ಲದಿದ್ದರೂ ಲಿಂಕ್ ಇರುತ್ತಲ್ವ? ಲಿಂಕ್‌ಗಳ ಪರಿಶೀಲನೆ ಮಾಡಬೇಕಾಗುತ್ತದೆ. ಇಲ್ಲದಿದ್ರೆ ತನಿಖೆ ಪೂರ್ಣ ಆಗುವುದಿಲ್ಲ. ಕ್ರಾಸ್ ರೆಫರೆನ್ಸ್‌ನಲ್ಲಿ ಯಾರು ಏನು ಮಾಹಿತಿ ಕೊಟ್ಟಿದ್ದಾರೋ ಗೊತ್ತಿಲ್ಲ. ಧರ್ಮಸ್ಥಳ ಪ್ರಕರಣಗಳ ಸಂಬಂಧ ಯಾವುದೋ ಲಿಂಕ್ ಸಿಕ್ಕಿರಬೇಕು. ಇದು ಸೌಜನ್ಯ ಪ್ರಕರಣದ ಮರು ತನಿಖೆ ಅಂತ ನಾನು ಹೇಳುವುದಿಲ್ಲ. ಯಾವ ಲಿಂಕ್, ಯಾವ ಉದ್ದೇಶದಿಂದ ತನಿಖೆ ಮಾಡುತ್ತಿದ್ದಾರೆ ಎಂದು ಆ ನಂತರ ಗೊತ್ತಾಗಲಿದೆ. ಇದರ ಬಗ್ಗೆ ನಾವು ಈಗಲೇ ಏನನ್ನೂ ಹೇಳಲು ಆಗುವುದಿಲ್ಲ ಎಂದರು.

ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ತನಿಖೆಯನ್ನು ಎನ್‌ಐಎಗೆ ಕೊಡಿ ಎಂದು ಅಮಿತ್ ಶಾಗೆ ಎಚ್‌ಡಿಕೆ ಮನವಿ ಕುರಿತು ಮಾತನಾಡಿ, ಅವರು ಎಸ್‌ಐಟಿ ಮತ್ತು ತನಿಖೆಯೇ ಸರಿಯಿಲ್ಲ ಎಂದು ಹೇಳಿದ್ದರು. ಈಗ ಎನ್‌ಐಎ ತನಿಖೆ ಮಾಡಲಿ ಅಂತಿದ್ದಾರೆ. ಅದೂ ತನಿಖೆಯೇ ಅಲ್ವಾ? ವಿದೇಶದಿಂದ ಹಣ ಬಂದಿದೆ ಅಂತ ಆರೋಪ ಬಂದಾಗ ಅದನ್ನು ಕೇಂದ್ರ ಸರ್ಕಾರವೇ ನೋಡಬೇಕು, ರಾಜ್ಯ ಸರ್ಕಾರ ತನಿಖೆ ಮಾಡಲು ಸಾಧ್ಯವಿಲ್ಲ. ಎಸ್‌ಐಟಿ ತನಿಖೆ ನಡೆಸುತ್ತಿರುವುದು ಹೆಣಗಳನ್ನು ಹೂಳಿರುವ ಪ್ರಕರಣದ ಬಗ್ಗೆ. ಇದರಲ್ಲೇನಾದರೂ ನ್ಯೂನತೆಗಳಿದ್ದರೆ ಬೇರೆ ತನಿಖೆ ಮಾಡಬಹುದು. ಎನ್‌ಐಎ ಮಧ್ಯಪ್ರವೇಶ ಮಾಡುವ ಮುನ್ನ ಸ್ಪಷ್ಟನೆ ಕೊಡಬೇಕಾಗುತ್ತದೆ ಎಂದು ಹೇಳಿದರು.