MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಮೊಗೆದಷ್ಟೂ ಸಿಹಿ ನೀಡಿದ ಮಕ್ಕಳ ರಂಗ ಶಿಬಿರ: ಚಿಣ್ಣರ ಸಿಹಿ ಮೊಗೆ-2025

ಮೊಗೆದಷ್ಟೂ ಸಿಹಿ ನೀಡಿದ ಮಕ್ಕಳ ರಂಗ ಶಿಬಿರ: ಚಿಣ್ಣರ ಸಿಹಿ ಮೊಗೆ-2025

ರಂಗ ಶಿಬಿರದ ಕೊನೆಯ ಎರಡು ದಿನ ಮಕ್ಕಳು ಅಭಿನಯಿಸಿದ ಐದು ನಾಟಕಗಳು ಈ ಶಿಬಿರದ ಹೈಲೈಟ್. ಮೊದಲು  ವರದಾ ತಂಡದಿಂದ ಅಭಿನಯಿಸಲ್ಪಟ್ಟಿದ್ದು, ಡಾ||ರಾಜಪ್ಪ ದಳವಾಯಿ ಬರೆದಿರುವ ಹಸಿವಿನ ಕುರಿತಾದ ನಾಟಕ "ಅಮ್ಮಾ.. ತಾಯೀ" ಪ್ರೇಕ್ಷಕರ ಮನ ಕಲಕಿತು. 

4 Min read
Suvarna News
Published : May 07 2025, 06:24 AM IST| Updated : May 07 2025, 06:26 AM IST
Share this Photo Gallery
  • FB
  • TW
  • Linkdin
  • Whatsapp
19

ಎಚ್.ಎಸ್.ನವೀನ ಕುಮಾರ್ ಹೊಸದುರ್ಗ

ಏಪ್ರಿಲ್ ಹನ್ನೆರಡರ ಶನಿವಾರದಂದು ಶಿವಮೊಗ್ಗ ರಂಗಾಯಣದ ಆವರಣದಲ್ಲಿ ಮಕ್ಕಳ ಚಿಲಿಪಿಲಿ. "ಚಿಣ್ಣರ ಸಿಹಿಮೊಗೆ- 2025 ಮಕ್ಕಳ ರಂಗ ಶಿಬಿರ" ಅಂದು ಅಲ್ಲಿ ಉದ್ಘಾಟನೆಗೊಂಡಿತ್ತು. ಉದ್ಘಾಟನೆ ಕೂಡ ಬಹಳ ವಿಶಿಷ್ಟವಾಗಿತ್ತು. ಸಾಗರದ ಹಿರಿಯ ರಂಗಕರ್ಮಿ ಕೆ ಜಿ ಕೃಷ್ಣಮೂರ್ತಿಯವರು, ಶಿಬಿರಾರ್ಥಿಗಳಾಗಿ ಬಂದಿದ್ದ ಎಲ್ಲ ಪುಟಾಣಿಗಳಿಗೆ ವಿವಿಧ ಗಿಡಗಳ ಬೀಜಗಳನ್ನು ನೀಡಿದರು. ಮಕ್ಕಳು ತಮ್ಮ ಹೆಸರು ಬರೆದಿದ್ದ ಮಣ್ಣಿನ ಪೊಟ್ಟಣಕ್ಕೆ ಬೀಜಗಳನ್ನು ನೆಟ್ಟು ನೀರು ಹಾಕಿದರು ಹಾಗೂ  ಶಿಬಿರದುದ್ದಕ್ಕೂ ಅದಕ್ಕೆ ನೀರೆರೆದು ಪೋಷಿಸುವ ಜವಾಬ್ದಾರಿ ಹೊತ್ತರು.

29

"ಇಪ್ಪತ್ಮೂರು ದಿನ ನಡೆಯುವ ಈ ಶಿಬಿರದಲ್ಲಿ, ಮಕ್ಕಳಿಗೆ ನಾಟಕಗಳು, ರಂಗ ಗೀತೆಗಳು ಜಾನಪದ ನೃತ್ಯ, ಕುಂಬಾರಿಕೆ ಓರಿಗ್ಯಾಮಿ, ಚಿತ್ರಕಲೆ, ಮುಖವಾಡ ಮಾಡುವುದು, ಕಥೆ ಹೇಳುವ ಕಲೆ, ಪಕ್ಷಿ ವೀಕ್ಷಣೆ, ವ್ಯಕ್ತಿತ್ವ ವಿಕಸನ, ಮಕ್ಕಳ ಸಂತೆ, ಹೊರ ಸಂಚಾರ, ಮ್ಯಾಜಿಕ್ ಶೋ, ಶ್ವಾನ ಪ್ರದರ್ಶನ,  ಹೀಗೆ  ಬದುಕಿಗೆ ಪೂರಕವಾದ ವಿವಿಧ ಸೃಜನಾತ್ಮಕ ವಿಚಾರಗಳ ಪರಿಚಯ ಮಾಡಿಕೊಡುವುದು ಈ ಶಿಬಿರದ ಮುಖ್ಯ ಉದ್ದೇಶ. ಈ ರಂಗ ಶಿಬಿರದಿಂದ ತಮ್ಮ ಮಕ್ಕಳು ಸಿನಿಮಾ ಸೀರಿಯಲ್ ಗಳಲ್ಲಿ ನಟಿಸುವ ನಟರಾಗಿ ಬಿಡುತ್ತಾರೆ ಎಂಬ ಭ್ರಮೆ ಬೇಡ. ಬದುಕಿಗೆ ಪೂರಕವಾದ ಹಾಗೂ ಚಲನಶೀಲವಾದ ರಂಗಭೂಮಿಯ ಪರಿಚಯವೇ ಇದರ ಉದ್ದೇಶ" ಎಂಬುದಾಗಿ ಶಿಬಿರದ ನಿರ್ದೇಶಕ, ರಂಗಕರ್ಮಿ ಡಾ|| ವೆಂಕಟೇಶ್ವರ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದ್ದರು.
 

Related Articles

Related image1
ಸುಹಾಸ್ ಶೆಟ್ಟಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ
Related image2
ಸಿದ್ದರಾಮಯ್ಯರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದೀರಿ?: ಕೆ.ಎಸ್.ಈಶ್ವರಪ್ಪ
39

ಅಂತೆಯೇ ಇಲ್ಲಿಗೆ ಬಂದಿದ್ದ ರಾಜ್ಯದ ವಿವಿಧ ಭಾಗಗಳ 128 ಮಕ್ಕಳು ತುಂಬಾ ತನ್ಮಯತೆಯಿಂದ ನಾಟಕ, ರಂಗಗೀತೆಗಳು, ನೃತ್ಯ ಇತ್ಯಾದಿಗಳನ್ನು ಕಲಿತರು.  ಪ್ರಯೋಗಶೀಲ ನಾಟಕ ಕಲೆಯ ಪ್ರಮುಖ ಕೇಂದ್ರವಾದ ಹೆಗ್ಗೋಡಿನ ನೀನಾಸಂ ಮತ್ತು  ಪರಿಸರದ ವಸ್ತು ಸಂಗ್ರಹಾಲಯ ಸಾರಾ ಸೆಂಟರ್  ಮುಂತಾದ ಕಡೆಗೆ ಹೊರ ಸಂಚಾರ ಕೂಡ ಹೋಗಿ ಬಂದರು. ಈ ಮಕ್ಕಳನ್ನು ಐದು ತಂಡಗಳಾಗಿ ವಿಂಗಡಿಸಿ, ಈ ತಂಡಗಳಿಗೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ನದಿಗಳ ಹೆಸರುಗಳನ್ನು ನೀಡಲಾಗಿತ್ತು. ಮೇ ಮೂರು ಹಾಗೂ ನಾಲ್ಕರಂದು ಈ ಐದೂ ತಂಡಗಳ ಮಕ್ಕಳು ತಾವು ಕಲಿತಿದ್ದನ್ನು ತಮ್ಮ ಪೋಷಕರ ಮುಂದೆ, ರಂಗಾಸಕ್ತರ ಮುಂದೆ ರಂಗಾಯಣದ ಸುವರ್ಣ ಸಂಸ್ಕೃತಿ ಭವನದ ಭವ್ಯ ಆಡಿಟೋರಿಯಂ ನಲ್ಲಿ ಅದ್ಭುತವಾಗಿ ತೆರೆದಿಟ್ಟರು.  ಈ ಮಕ್ಕಳು ಅಭಿನಯಿಸಿದ ಮೂಕಾಭಿನಯ, ಜಾನಪದ ನೃತ್ಯ ಪ್ರಕಾರಗಳಾದ ಕಂಸಾಳೆ, ಕೋಲಾಟ, ಪಟ ಕುಣಿತ, ಕಂಗೀಲು ನೃತ್ಯಗಳು ನೋಡುಗರ ಮನ ಗೆದ್ದವು. ಎಲ್ಲರೂ ಒಟ್ಟಾಗಿ ಭಾವ ಪರವಶತೆಯಿಂದ ಹಾಡಿದ ರಂಗಗೀತೆಗಳು ರಂಗಾಸಕ್ತರ ಮನ ತಟ್ಟಿದವು. 
 

49

ರಂಗ ಶಿಬಿರದ ಕೊನೆಯ ಎರಡು ದಿನ ಮಕ್ಕಳು ಅಭಿನಯಿಸಿದ ಐದು ನಾಟಕಗಳು ಈ ಶಿಬಿರದ ಹೈಲೈಟ್. ಮೊದಲು  ವರದಾ ತಂಡದಿಂದ ಅಭಿನಯಿಸಲ್ಪಟ್ಟಿದ್ದು, ಡಾ||ರಾಜಪ್ಪ ದಳವಾಯಿ ಬರೆದಿರುವ ಹಸಿವಿನ ಕುರಿತಾದ ನಾಟಕ "ಅಮ್ಮಾ.. ತಾಯೀ" ಪ್ರೇಕ್ಷಕರ ಮನ ಕಲಕಿತು. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಕೆಳಮಟ್ಟದಲ್ಲಿರುವ ಭಾರತದಲ್ಲಿ ಹೊಟ್ಟೆಗಿಲ್ಲದೆ ಸಾಯುವವರು ಅಸಂಖ್ಯ.  ಇದನ್ನು ಕೇಂದ್ರವಾಗಿಟ್ಟುಕೊಂಡು ಹಸಿವಿನ ಮಹತ್ವ ಸಾರುವ ಮೂರು ವಿಭಿನ್ನ ದೃಶ್ಯಾವಳಿಗಳನ್ನು ಕಟ್ಟಿಕೊಡುವ ಈ ನಾಟಕ ಅತ್ಯಂತ ಪರಿಣಾಮಕಾರಿಯಾಗಿತ್ತು. ರೋಮನ್ ಸಾಮ್ರಾಜ್ಯದಲ್ಲಿ ಕೇವಲ ಒಂದು ಲೂಪ್ ಬ್ರೆಡ್ ಕದ್ದಿದ್ದಕ್ಕಾಗಿ ಜೈಲು ಸೇರಿರುವ ತಂದೆ ಸೈಮನ್ ನಿಗೆ ಸ್ವತಃ ಮಗಳು ಫೆರಾ ಸ್ತನ್ಯಪಾನ ಮಾಡಿಸುವ ಮನ ಮಿಡಿಯುವ ಕತೆ, ಹಾಗೂ ಹಸಿವೆಯಿಂದ ಕಂಗೆಟ್ಟು, ಸಮಾರಂಭಗಳಲ್ಲಿ ಊಟ ಮಾಡಿದವರು ಚೆಲ್ಲಿದ ಎಂಜಲನ್ನೇ ಬಾಚಿ ತಿನ್ನುತ್ತಿರುವವರಫೋಟೋ ತೆಗೆದು, ಅದಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದರೂ ಖಿನ್ನತೆಗೆ ಒಳಗಾದ ಛಾಯಾಗ್ರಾಹಕನ ಕಥೆಗಳನ್ನು ಈ ನಾಟಕದ ಹಂದರದಲ್ಲಿ ಮನಮುಟ್ಟುವಂತೆ ತಂದ ನಿರ್ದೇಶಕರಾದ ಉದಯ್ ಅಂಕ್ರವಳ್ಳಿ ಹಾಗೂ ಸಂಜನಾ ಕದಂ ಅಭಿನಂದನಾರ್ಹರು.

59

ರಂಗ ಶಿಬಿರದ ಎರಡನೇ ನಾಟಕ  ಭದ್ರಾ ತಂಡ ಅಭಿನಯಿಸಿದ ಶಿವಮೊಗ್ಗದ ಕಲಾ ಶಿಕ್ಷಕ ಸತೀಶ್ ಕುಮಾರ್ ರಚಿಸಿ ನಿರ್ದೇಶಿಸಿದ "ಉಸಿರಾ?". ಸಹ ನಿರ್ದೇಶನ- ಯೋಗೀಶ್ ಕುಮಾರ್ ಹಾಗೂ ಕಾವೇರಿ ಶೆಟ್ಟಿ. ಯಾವುದು ಸರಿ ಯಾವುದು ತಪ್ಪು ಎನ್ನುವ ಉತ್ತರ ಸಿಗದ ಪ್ರಶ್ನೆಯೇ  ಈ ನಾಟಕದ ವಸ್ತು. ಪರಿಸರ ರಕ್ಷಿಸುವ ಪರಮೇಶಣ್ಣ ಉಸಿರಾಟದ ತೊಂದರೆಗೆ ಸಿಲುಕಿ ನರಳುತ್ತಿದ್ದಾನೆ. ಅವನ ಕಾಯಿಲೆಗೆ ಮದ್ದಾದ ಒಂದು ಕಾಡಿನ ಬೇರು ಅಳಿವಿನಂಚಿನಲ್ಲಿರುವ ಗಿಡ. ಇದನ್ನು ತರ ಹೋದ ಧೀರ ಬಾಲಕನಿಗೆ ತನ್ನನ್ನು ಕಡೆಯ ಬೇಡ, ಮನುಷ್ಯರಿಂದ ನಾನು ನಾಶವಾಗಿದ್ದೇನೆ ಎಂದು ಬೇಡಿಕೊಳ್ಳುವ ಮರಿ ಸಸ್ಯ! ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದೇ ಪ್ರೇಕ್ಷಕರ ಮುಂದೆ ಇರಿಸಲಾದ ಪ್ರಶ್ನೆ. ಪರಿಸರ ಉಳಿಸಿ ಎನ್ನುವ ಪ್ರಜ್ಞೆಯನ್ನು ಬಿತ್ತುವ ಈ ನಾಟಕ,  ಅತ್ಯುತ್ತಮ ರಂಗ ವಿನ್ಯಾಸದಿಂದ ಜನಮನ ಗೆದ್ದಿತು. 

69

ಶಿಬಿರದ ಮೂರನೇ ನಾಟಕ, ಶರಾವತಿ ತಂಡ ಅಭಿನಯಿಸಿದ "ತಿರುಕ", ಅದೇ ಹೆಸರಿನಿಂದ ಪ್ರಖ್ಯಾತರಾಗಿದ್ದ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳ ಜೀವನಾಧಾರಿತ ಕಥೆಯುಳ್ಳದ್ದು. ಸ್ವಚ್ಛತೆಗೆ, ಪರಿಸರ ಮಾಲಿನ್ಯದ ತಡೆಗೆ, ಯೋಗದಿಂದ ರೋಗರಹಿತ ಬದುಕಿಗೆ ಜೋಳಿಗೆ ಹಿಡಿದು ಮನೆ ಮನೆ ಅಲೆದು ಜನರ ಬದುಕನ್ನು ಹಸನುಗೊಳಿಸಲು ಯತ್ನಿಸಿದ ರಾಘವೇಂದ್ರ ಸ್ವಾಮಿಗಳ ಬದುಕಿನ ಚಿತ್ರಣ ಈ ನಾಟಕದ ಹೂರಣ. ಈ ಕಥೆಯನ್ನು ಅಜ್ಜಿ ಒಬ್ಬಳು ಮೊಮ್ಮಕ್ಕಳಿಗೆ ನಿರೂಪಿಸುತ್ತಾ ಹೋಗುತ್ತಾಳೆ. ಇದರಲ್ಲಿ ಬಯಲು ಶೌಚಾಲಯದ ಅಪಾಯಗಳು ಹಾಗೂ ಪ್ಲಾಸ್ಟಿಕ್ ನಿಯಂತ್ರಣದ ಅಗತ್ಯಗಳನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸಿರುವ ನಾಟಕದ ನಿರ್ದೇಶಕರಾದ ಸಜೀ ತುಮರಿ ಹಾಗೂ ಧವನ ಧನರಾಜ್, ರೂಪಕವಾಗಿ ಬಿಡುವ ವಸ್ತುವನ್ನು ಪರಿಣಾಮಕಾರಿ ನಾಟಕವಾಗಿಸಿದ್ದಾರೆ.

79

ಶಿಬಿರದಲ್ಲಿ ಪ್ರದರ್ಶನಗೊಂಡ ನಾಲ್ಕನೇ ನಾಟಕ ತುಂಗಾ ತಂಡದ "ಮೂಕನ ಮಕ್ಕಳು". ರಚನೆ- ವೈದೇಹಿ, ನಿರ್ದೇಶನ- ರೇಣುಕಾ ಎಸ್ ಎನ್ ಹಾಗೂ ಹರಿಸಿಂಗ್. ಊರವರಿಗೆ ಎಲ್ಲರಿಗೂ ಎಲ್ಲದಕ್ಕೂ ಬೇಕಾದ ಮೂಕನಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ತಮ್ಮ ಕೆಲಸ ಕಾರ್ಯಗಳಿಗೆ ಎಲ್ಲರೂ ಬಳಸಿಕೊಳ್ಳುವ ಮೂಕನಿಗೆ ಸಹಜವಾಗಿ ಮದುವೆಯಾಗಬೇಕೆಂಬ ಆಸೆ ಬಂದಾಗ, ಅವನನ್ನು ಮದುವೆಯಾಗಲು ಅವನನ್ನು ಮದುವೆಯಾಗಲು ಮುಂದೆ ಬರುವವರು ಯಾರು ಇಲ್ಲ ಊರಿಗೆ ಬಂದ ಮುಂದೆ ಬರುವವರು ಯಾರು ಇಲ್ಲ. ಊರಿಗೆ ಬಂದ ಸ್ವಾಮಿಗಳು ಮೂಕನ ಕೈಯಲ್ಲಿ ಕೆಲವು ಗಿಡ ನೆಡಿಸಿ ಇವೇ ನಿನ್ನ ಮಕ್ಕಳು ಇವನ್ನೇ ಪೋಷಿಸು ಎಂದು ಹೇಳುತ್ತಾರೆ. ಅಂತೆಯೇ ಗಿಡ ಮರ ನೆಟ್ಟು, ಕಾಡು ಬೆಳೆಸಿ ಅದನ್ನೇ ತನ್ನ ಮಕ್ಕಳಾಗಿಸಿಕೊಳ್ಳುತ್ತಾನೆ ಮೂಕ. ಮುಗ್ಧ ವ್ಯಕ್ತಿಯ ನಿಷ್ಕಲ್ಮಶ ಪರಿಸರ ಪ್ರೇಮವನ್ನು ತೋರಿಸುವ ಈ ನಾಟಕ, ಬಹಳ ಅಚ್ಚುಕಟ್ಟಾಗಿ ರಂಗದ ಮೇಲೆ ಮೂಡಿ ಬಂತು. ಮಕ್ಕಳನ್ನು ರಂಜಿಸುವ ಹಾಸ್ಯ, ಚುರುಕು ಚಟುವಟಿಕೆಗಳು ನಾಟಕದ ಕಳೆಗಟ್ಟಿಸಿದವು. 

89

ರಂಗ ಶಿಬಿರದ ಕೊನೆಯ ನಾಟಕ ಕುಮುದ್ವತಿ ತಂಡ ಪ್ರದರ್ಶಿಸಿದ ಗಜಾನನ ಶರ್ಮ ವಿರಚಿತ "ಗೊಂಬೆ ರಾವಣ". ಇದರ ನಿರ್ದೇಶಕರು ಪ್ರತಾಪ್ ಹಾಗೂ ಮರಿಯಣ್ಣ ರಾಯಚೂರು. ರಾವಣನ ಹತ್ಯೆಯ ನಂತರ, ರಾಮ ರಾಜ್ಯದಲ್ಲಿ ಕಾಣಿಸಿಕೊಳ್ಳುವ ರಾಕ್ಷಸಿ ಒಬ್ಬಳು ಮಾರು ವೇಷದಲ್ಲಿ ಮಕ್ಕಳ ಸಹಾಯ ಪಡೆದು ಸೀತೆಯ ಅಂತಃಪುರ ಪ್ರವೇಶಿಸುತ್ತಾಳೆ. ಅಲ್ಲಿ ರಾವಣನ ಗೊಂಬೆ ತಯಾರಿಸಿ, ಅದಕ್ಕೆ ಸೀತೆಯಿಂದಲೇ ಪ್ರಾಣ ಪ್ರತಿಷ್ಠಾಪನೆ ಮಾಡಿಸುತ್ತಾಳೆ. ಜೀವ ಪಡೆದ ಆ ಗೊಂಬೆ ರಾವಣ, ತನ್ನ ಸುವರ್ಣ ಲಂಕೆಯನ್ನು ನಾಶ ಮಾಡಿದವಳು ನೀನು ಎಂದು ಸೀತೆಯನ್ನು ತನ್ನ ಪರಿವಾರದೊಂದಿಗೆ ದೂಷಿಸಲು ಆರಂಭಿಸುತ್ತಾನೆ. ಇದು  ರಾಮನ ಕೋಪಕ್ಕೆ ತುತ್ತಾಗಿ,  ಸೀತೆಯ ವನವಾಸದಲ್ಲಿ ಕೊನೆಗೊಳ್ಳುತ್ತದೆ. ಎನ್ನುವ ಕಥೆಯುಳ್ಳ ಈ ನಾಟಕದ ಸಂದೇಶ, ರಾಕ್ಷಸ ದ್ವೇಷ ಹಾಗೂ ದ್ವೇಷವೆಂಬ ರಾಕ್ಷಸ ಎಂದಿಗೂ ಒಳ್ಳೆಯದಲ್ಲ ಎಂಬುದು. ಯಕ್ಷಗಾನದ ತಂತ್ರಗಳನ್ನು ಈ ನಾಟಕದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ವಿಶೇಷವೆನಿಸಿತು.

99

ಎಲ್ಲಾ ನಾಟಕಗಳಲ್ಲಿ ಅತ್ಯಂತ ತನ್ಮಯತೆಯಿಂದ ಪಾಲ್ಗೊಂಡು, ತಮ್ಮ ಪ್ರಾರಂಭಿಕ ರಂಗಾನುಭವವನ್ನು ಅತ್ಯಂತ ಸಂತೋಷದಿಂದ ಅನುಭವಿಸಿ, ನಾಟಕ ಎನ್ನುವುದು ಒಂದು ತಂಡವಾಗಿ ಹೊರಹೊಮ್ಮುವ ಸೃಜನಶೀಲ ಅಭಿವ್ಯಕ್ತಿ ಎನ್ನುವುದನ್ನು ಈ ರಂಗ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳು  ಚೆನ್ನಾಗಿ ಅರಿತರು.  ನಾಟಕ, ಜನಪದ ನೃತ್ಯಗಳು ಕಳೆ ಕಟ್ಟುವಂತೆ ರಂಗಸಜ್ಜಿಕೆ ನಿರ್ಮಾಣ ಮಾಡಿದ ಪ್ರಶಾಂತ್ ಹೆಬ್ಬಸೂರು ಹಾಗೂ ಪ್ರಕಾಶ್ ಕುಮಾರ್, ಅದ್ಭುತವಾದ ಸಂಗೀತ ಸಂಯೋಜನೆ ಮಾಡಿ ಹಾಡಿದ ಉಮೇಶ್ ಪತ್ತಾರ್, ಇವರಿಗೆ ತಮ್ಮ ಧ್ವನಿ ವಾದ್ಯಗಳ ಮೂಲಕ ಸಾಂಗತ್ಯ ನೀಡಿದ ಪ್ರಕಾಶ್ ಬಡಿಗೇರ್, ಬೆಳಕಿನ ವಿನ್ಯಾಸ ನಿರ್ವಹಣೆ ಮಾಡಿದ ಶಿವಕುಮಾರ್ ತೀರ್ಥಹಳ್ಳಿ, ಧ್ವನಿವರ್ಧಕದ ನಿರ್ವಹಣೆ ಮಾಡಿದ ದೇವರಾಜ್  ಹಾಗೂ ಇದನ್ನೆಲ್ಲಾ ಉತ್ತಮ ರೀತಿಯಲ್ಲಿ ಸಮನ್ವಯ ಮಾಡಿ ಸಂಯೋಜಿಸಿದ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶೈಲಜಾ ಕೊಡಗು ಹಾಗೂ ನಿರ್ದೇಶಕರಾದ ಪ್ರಸನ್ನ ಡಿ ಸಾಗರ, ಎಲ್ಲ ಪೋಷಕರ ಹಾಗೂ ರಂಗಾಸಕ್ತರ ವಿಶೇಷ ಅಭಿನಂದನೆ ಹಾಗೂ ಮೆಚ್ಚುಗೆಗೆ ಪಾತ್ರರಾದರು. ಒಟ್ಟಾರೆಯಾಗಿ ಶಿಬಿರದ ಆಶಯ ಗೀತೆಯಂತೆ, ಮಕ್ಕಳು ತಮ್ಮ ಬೇಸಿಗೆ ರಜೆಯ ಇಪ್ಪತ್ಮೂರು ದಿನಗಳನ್ನು ಕುಣಿಯುವ ನಲಿಯುವ ಆಟವಾಗಿ, ಅಂದದ ಚಂದದ ನೋಟವಾಗಿ ಅನುಭವಿಸಿ ಸಂತಸ ಪಟ್ಟರು. ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ನಾಟಕಗಳ ಮೂಲಕ ಅರಿತರು. ಮೊಗೆದಷ್ಟೂ ಸಿಹಿ ನೀಡಿದ ಈ "ಚಿಣ್ಣರ ಸಿಹಿಮೊಗೆ- 2025" ಮಕ್ಕಳ ಕನಸಿನ ಲೋಕದ ಒಂದು ವಿಶೇಷ ಪಯಣವಾಗಿತ್ತು.

About the Author

SN
Suvarna News
ಮಕ್ಕಳು
ಶಿವಮೊಗ್ಗ
ಕರ್ನಾಟಕ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved