- Home
- News
- State
- ನಟೇಶ್ ಭ್ರಷ್ಟಾಚಾರ ಆರೋಪ: 6 ಸೆಕೆಂಡು ಆಡಿಯೋ ರಿಲೀಸ್ ಮಾಡಿದ ಸ್ನೇಹಮಯಿ ಮನೆಗೆ ಸಿಸಿಬಿ ರೈಡ್! ಏನೆಲ್ಲಾ ದಾಖಲೆ ಸಿಕ್ತು?
ನಟೇಶ್ ಭ್ರಷ್ಟಾಚಾರ ಆರೋಪ: 6 ಸೆಕೆಂಡು ಆಡಿಯೋ ರಿಲೀಸ್ ಮಾಡಿದ ಸ್ನೇಹಮಯಿ ಮನೆಗೆ ಸಿಸಿಬಿ ರೈಡ್! ಏನೆಲ್ಲಾ ದಾಖಲೆ ಸಿಕ್ತು?
ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪದ ಆಡಿಯೋ ಕ್ಲಿಪ್‌ಗಾಗಿ ಸಿಸಿಬಿ ಅಧಿಕಾರಿಗಳು ಸ್ನೇಹಮಯಿ ಕೃಷ್ಣ ಅವರ ಮೈಸೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ,ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ನೂರಾರು ಆಡಿಯೋ ಕ್ಲಿಪ್‌ಗಳ ಹುಡುಕಾಟ
ಮೈಸೂರು: ಮುಡಾ ಮಾಜಿ ಆಯುಕ್ತ ನಟೇಶ್ ಗೆ ಭಡ್ತಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕೋಟಿ ಹಣ ಪಡೆದಿದ್ದಾರೆ. ಜೊತೆಗೆ ನಟೇಶ್ ಗೆ ಸಂಬಂಧಿಸಿದ ಮೈಸೂರಿನಲ್ಲಿ 9 ಕೋಟಿ ಹಣದ ವ್ಯವಹಾರ ನಡೆದಿದೆ ಎಂಬ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ಆರೋಪಕ್ಕೆ ಸಂಬಂಧಿತ ಆಡಿಯೋ ವಿಚಾರದ ಹಿನ್ನೆಲೆಯಲ್ಲಿ, ಬೆಂಗಳೂರು Central Crime Branch (ಸಿಸಿಬಿ) ಅಧಿಕಾರಿಗಳು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ವಶ
ಗೌರಿಶಂಕರ ನಗರದಲ್ಲಿರುವ ಸ್ನೇಹಮಯಿ ಕೃಷ್ಣ ಅವರ ಮನೆ ಮೇಲೆ 10ಕ್ಕೂ ಹೆಚ್ಚು ಸಿಸಿಬಿ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿ, ಸುಮಾರು ಒಂದೂವರೆ ಗಂಟೆಗಳ ಕಾಲ ತಪಾಸಣೆ ನಡೆಸಿವೆ. ಈ ವೇಳೆ ಇಬ್ಬರು ಮಹಿಳಾ ಸಿಬ್ಬಂದಿಯರೂ ಸ್ಥಳಕ್ಕೆ ಆಗಮಿಸಿದ್ದರು. ಸಿಸಿಬಿ ಅಧಿಕಾರಿಗಳು ಸ್ನೇಹಮಯಿ ಕೃಷ್ಣ ಅವರ ಕೊಠಡಿಯಲ್ಲಿ ಜಾಲಾಡಿದ್ದು, ದಾಖಲೆಗಳ ಪರಿಶೀಲನೆಯ ವೇಳೆ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೋ ರೆಕಾರ್ಡ್ ಮಾಡುತ್ತಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಜೊತೆಗೆ ಸ್ನೇಹಮಯಿ ಕೃಷ್ಣ ಅವರ ಪತ್ನಿ ವಿನೋದಾ ಅವರ ಬಳಿ ಕೂಡ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ನಟೇಶ್ ಆಡಿಯೋ ಹುಡುಕಾಟಕ್ಕೆ ತೀವ್ರ ಶೋಧ
ಸಿಸಿಬಿ ಅಧಿಕಾರಿಗಳು ಮುಖ್ಯವಾಗಿ Mysuru Urban Development Authority (ಮುಡಾ) ಮಾಜಿ ಆಯುಕ್ತ ನಟೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸ್ನೇಹಮಯಿ ಕೃಷ್ಣ ಅವರು ತಮ್ಮ ಮೊಬೈಲ್‌ಗೆ ಬಂದಿರುವ ನೂರಾರು ಆಡಿಯೋ ಸಂದೇಶಗಳನ್ನು ಕಂಪ್ಯೂಟರ್‌ನಲ್ಲಿ ಸೇವ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಪೈಕಿ ನಟೇಶ್‌ಗೆ ಸಂಬಂಧಿಸಿದ ಸಂಪೂರ್ಣ ಆಡಿಯೋ ಸಂಭಾಷಣೆ ಕಂಪ್ಯೂಟರ್‌ನಲ್ಲಿ ಇರುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಸಿಸಿಬಿ ಅಧಿಕಾರಿಗಳು ಲ್ಯಾಪ್‌ಟಾಪ್ ಹಾಗೂ ಡಿಜಿಟಲ್ ಡೇಟಾದ ಪರಿಶೀಲನೆ ನಡೆಸಿದ್ದಾರೆ. ನಾಲ್ಕು ದಿನಗಳ ಹಿಂದೆ ಸ್ನೇಹಮಯಿ ಕೃಷ್ಣ ಅವರು ಕೇವಲ 6 ಸೆಕೆಂಡ್‌ಗಳ ಆಡಿಯೋ ಕ್ಲಿಪ್‌ನ್ನು ಮಾತ್ರ ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದರು. ಆದರೆ ಸಂಪೂರ್ಣ ಸಂಭಾಷಣೆ ಇರುವ ಆಡಿಯೋವನ್ನು ಫೆಬ್ರವರಿ 20ರಂದು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಅವರು ಹೇಳಿಕೊಂಡಿದ್ದರು.
ಡಿಜಿಟಲ್ ಸಾಕ್ಷ್ಯ ವಶ
ತಪಾಸಣೆ ವೇಳೆ ಸಿಸಿಬಿ ಅಧಿಕಾರಿಗಳು ಒಂದು ಪೆನ್ ಡ್ರೈವ್, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಹಾಗೂ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಪೂರ್ಣ ಕಾರ್ಯಾಚರಣೆ ಸರ್ಚ್ ವಾರೆಂಟ್ ಪಡೆದು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ವಿನೋದಾ ಹೇಳಿಕೆ
ಸಿಸಿಬಿ ಕಾರ್ಯಾಚರಣೆ ಮುಗಿದ ಬಳಿಕ ಮಾತನಾಡಿದ ಸ್ನೇಹಮಯಿ ಕೃಷ್ಣ ಅವರ ಪತ್ನಿ ವಿನೋದಾ, “ಪೊಲೀಸರು ಸರ್ಚ್ ವಾರೆಂಟ್ ತಂದು ಮನೆಯಲ್ಲಿ ಪರಿಶೀಲನೆ ನಡೆಸಿದರು. ಪೆನ್ ಡ್ರೈವ್, ಸ್ಕ್ಯಾನರ್, ಹಾರ್ಡ್ ಡಿಸ್ಕ್ ಮತ್ತು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅವರು ಕೇಳಿದ ಎಲ್ಲಾ ಮಾಹಿತಿಗಳನ್ನು ನಾವು ನೀಡಿದ್ದೇವೆ,” ಎಂದು ಹೇಳಿದರು.
ಮತ್ತೊಂದು ಮನೆಗೂ ದಾಳಿ
ಗೌರಿಶಂಕರ ನಗರದಲ್ಲಿನ ಮನೆ ಪರಿಶೀಲನೆ ಬಳಿಕ, ಬಂಡಿ ಪಾಳ್ಯದಲ್ಲಿರುವ ಸ್ನೇಹಮಯಿ ಕೃಷ್ಣ ಅವರ ಮತ್ತೊಂದು ನಿವಾಸಕ್ಕೂ ಸಿಸಿಬಿ ಅಧಿಕಾರಿಗಳು ತೆರಳಿ ತಪಾಸಣೆ ನಡೆಸಿದ್ದಾರೆ. ಎರಡೂ ಸ್ಥಳಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಸಿಸಿಬಿ ತಂಡಗಳು ಸ್ಥಳದಿಂದ ತೆರಳಿದ್ದಾರೆ. ಒಟ್ಟಾರೆ, ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಸಂಬಂಧಿಸಿದ ಸಂಪೂರ್ಣ ಆಡಿಯೋ ಸಂಭಾಷಣೆ ಪತ್ತೆಹಚ್ಚುವ ಉದ್ದೇಶದಿಂದ ಈ ದಾಳಿ ನಡೆದಿದ್ದು, ವಶಪಡಿಸಿಕೊಂಡಿರುವ ಡಿಜಿಟಲ್ ಸಾಕ್ಷ್ಯಾಧಾರಗಳ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

