- Home
- News
- State
- ಬಿಡದಿ ಟೌನ್‌ಶಿಪ್ ಪಾದಯಾತ್ರೆ 2ನೇ ದಿನಕ್ಕೆ ಮೊಟಕು; ಅಡ್ಡಗಟ್ಟಿದ ಪೊಲೀಸರು, ಆ.18ಕ್ಕೆ ಮತ್ತೆ ಹೋರಾಟ-ನಿಖಿಲ್ ಕುಮಾರಸ್ವಾಮಿ
ಬಿಡದಿ ಟೌನ್‌ಶಿಪ್ ಪಾದಯಾತ್ರೆ 2ನೇ ದಿನಕ್ಕೆ ಮೊಟಕು; ಅಡ್ಡಗಟ್ಟಿದ ಪೊಲೀಸರು, ಆ.18ಕ್ಕೆ ಮತ್ತೆ ಹೋರಾಟ-ನಿಖಿಲ್ ಕುಮಾರಸ್ವಾಮಿ
ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯನ್ನು ಪೊಲೀಸರು ತಡೆದರು. ಈ ವೇಳೆ, ಯಾತ್ರೆಯನ್ನು ಮೊಟಕುಗೊಳಿಸಿ ಆಗಸ್ಟ್ 18 ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ನಿಖಿಲ್ ಘೋಷಿಸಿದ್ದಾರೆ.

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಯು ಬೆಂಗಳೂರು ನಗರದತ್ತ ತೆರಳದಂತೆ ಪೊಲೀಸರು ಸೋಮವಾರ ತಡೆಯೊಡ್ಡಿದ್ದರಿಂದ ತಳ್ಳಾಟ-ನೂಕಾಟದಂತಹ ಹೈಡ್ರಾಮಾ ನಡೆದು ಯಾತ್ರೆ ಎರಡನೇ ದಿನವೇ ಮೊಟಕುಗೊಂಡಿತು. ಆದರೆ, ಯೋಜನೆ ವಿರುದ್ಧ ಚಳವಳಿ ಮುಂದುವರಿಸುವುದಾಗಿ ಹೇಳಿರುವ ನಿಖಿಲ್, ಆಗಸ್ಟ್ 18ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.
ಬಿಡದಿ ಪಟ್ಟಣದ ಬಿಜಿಎಸ್ ವೃತ್ತದಲ್ಲಿ ಎರಡನೇ ದಿನವಾದ ಸೋಮವಾರ ಮಾಜಿ ಪ್ರಧಾನಿ ದೇವೇಗೌಡರಿಂದ ಚಾಲನೆ ಪಡೆದ ಪಾದಯಾತ್ರೆ 10 ಕಿಲೋ ಮೀಟರ್ ಸಾಗಿ ಬೆಂಗಳೂರು ದಕ್ಷಿಣ ತಾಲೂಕಿನ ಕಣಿಮಿಣಿಕೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ತಡೆಯೊಡ್ಡಿದರು.
ಹೈಕೋರ್ಟ್ ಸೂಚನೆಯಂತೆ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೆಂಗಳೂರು ನಗರದ ಇತರ ಸ್ಥಳಗಳಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಸೂಚಿಸಿ, ನಿಖಿಲ್ ಸೇರಿದಂತೆ ಪ್ರಮುಖ ನಾಯಕರನ್ನು ವಶಕ್ಕೆ ಪಡೆಯಲು ಪೊಲೀಸರು ಪ್ರಯತ್ನಿಸಿದಾಗ ನೂಕಾಟ-ತಳ್ಳಾಟ ಉಂಟಾಯಿತು.
ಈ ವೇಳೆ, ಪೊಲೀಸರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಪೊಲೀಸರ ಸರ್ಪಗಾವಲನ್ನು ಭೇದಿಸಿದ ನಾಯಕರು ಮತ್ತು ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿ ಬೆಂಗಳೂರಿನತ್ತೆ ಹೆಜ್ಜೆ ಹಾಕಿದರು. ಬಳಿಕ, ಕಣಿಮಿಣಿಕೆ ಸಮೀಪದ ಸಿರಿ ಕನ್ವೆನ್ಷನ್ ಹಾಲ್ ಬಳಿ ಬರುತ್ತಿದ್ದಂತೆ ರಸ್ತೆಗೆ ಬಸ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ, ಸಾವಿರಾರು ಪೊಲೀಸರನ್ನು ನಿಯೋಜಿಸಲಾಯಿತು.
ಈ ವೇಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕೆಲಕಾಲ ಧರಣಿ ಕುಳಿತು, ಸರ್ಕಾರದ ವಿರುದ್ಧ ಘೋಷಣೆ ಕೂಗತೊಡಗಿದರು. ಕೊನೆಗೆ, ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಯನ್ನು ಮೊಟಕುಗೊಳಿಸುತ್ತಿರುವುದಾಗಿ ಘೋಷಿಸಿದರು. ಆಗಸ್ಟ್ 18ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ಹೋರಾಟ ನಡೆಸೋಣ, ಅಲ್ಲಿಗೆ ಎಲ್ಲರೂ ಬನ್ನಿ ಎಂದು ರೈತರು, ಕಾರ್ಯಕರ್ತರಿಗೆ ಕರೆ ನೀಡಿದರು.
ಜೆಡಿಎಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವಿನ ತಳ್ಳಾಟ-ನೂಕಾಟದ ವೇಳೆ ಎಸ್ಪಿ ಶ್ರೀನಿವಾಸ್ಗೌಡರ ಎಡಗೈ ಬೆರಳಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಹಲವು ರೈತರು ಕೂಡ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಪ್ರತಿಭಟನೆಯನ್ನು ಶಾಂತಿಯುತವಾಗಿ ಕೈಬಿಡಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹೋರಾಟ ಮುಂದುವರಿಸುತ್ತೇವೆ. ಆಗಸ್ಟ್ 18ರಂದು ಫ್ರೀಡಂಪಾರ್ಕ್‌ನಲ್ಲಿ ಹೋರಾಟ ನಡೆಯಲಿದೆ.
- ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಜೆಡಿಎಸ್ ಯುವ ಘಟಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

