ಗಾಂಜಾ ಪೆಡ್ಲರ್ ಬಂಧಿಸಿ ಕರೆತರುವಾಗ ಪಿಎಸ್‌ಐಗೆ ಗುದ್ದಿ ಹೋದ ಲಾರಿ; ಚಿಕಿತ್ಸೆ ಫಲಿಸದೇ ಸಾವು
ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿ ಕರೆತರುವಾಗ ಪಿಎಸ್ಐ ಮೆಹಬೂಬ್ ಹಿಟ್ ಅಂಡ್ ರನ್‌ಗೆ ಬಲಿಯಾಗಿದ್ದಾರೆ. ಚಂದಾಪುರ ಬಳಿ ಕಾರು ಕೆಟ್ಟುನಿಂತಾಗ ಲಾರಿ ಡಿಕ್ಕಿ ಹೊಡೆದಿದೆ. ಆರೋಪಿಗಳು ಪರಾರಿಯಾಗಿದ್ದಾರೆ.

ಬೆಂಗಳೂರು (ಜೂ. 29): ಗಾಂಜಾ ಪೆಡ್ಲರ್‌ಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತರುವ ವೇಳೆ ನಡೆದ ಭೀಕರ ಅಪಘಾತದಲ್ಲಿ ಪೊಲೀಸ್ ಉಪನಿರೀಕ್ಷಕ (ಪಿಎಸ್ಐ) ಮೆಹಬೂಬ್ ಗುಡ್ಡಳ್ಳಿ ಹಿಟ್‌ಅಂಡ್‌ರನ್‌ಗೆ ಬಲಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರ ಬಳಿ ನಡೆದಿದೆ.
ಮೃತ ಪಿಎಸ್ಐ ಮೆಹಬೂಬ್ ಕಳೆದ ಎರಡು ವರ್ಷಗಳಿಂದ ಬೆಂಗಳೂರು ದಕ್ಷಿಣ ವಿಭಾಗದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜೂನ್ 23 ರಂದು ಗಾಂಜಾ ಪೆಡ್ಲಿಂಗ್‌ನಲ್ಲಿ ತಲಘಟ್ಟಪುರ ಪೊಲೀಸರಿಗೆ ವಾಂಟೆಡ್ ಆಗಿದ್ದ ಇಬ್ಬರು ಆರೋಪಿಗಳು ಹೊಸೂರು ಬಳಿ ಇದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮೆಹಬೂಬ್ ಮತ್ತು ತಂಡ ಅತ್ತಿಬೆಲೆ ಬಳಿ ಇಬ್ಬರನ್ನು ವಶಕ್ಕೆ ಪಡೆದಿದ್ದರು.
ಆರೋಪಿಗಳನ್ನು ತಲಘಟ್ಟಪುರ ಠಾಣೆಗೆ ಕರೆತರುತ್ತಿರುವಾಗ, ಹೊಸೂರು ಮುಖ್ಯ ರಸ್ತೆಯ ಚಂದಾಪುರ ಬಳಿ ಪೊಲೀಸರು ಪ್ರಯಾಣಿಸುತ್ತಿದ್ದ ಕಾರು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ. ಈ ಸಂದರ್ಭ ಪಿಎಸ್ಐ ಮೆಹಬೂಬ್ ಕಾರಿನಿಂದ ಇಳಿದು ಫೋನ್‌ನಲ್ಲಿ ಮಾತಾಡುತ್ತಿದ್ದಾಗ, ವೇಗದಲ್ಲಿ ಬಂದ ಲಾರಿ ಅವರ ಮೇಲೆ ಹರಿದು ಬಂದು ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೆಹಬೂಬ್ ಅವರನ್ನು ತಕ್ಷಣವೇ ಚಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಆಕ್ಸಿಡೆಂಟ್ ಸಮಯದ ಲಾಭ ಪಡೆದ ಆರೋಪಿತ ಗಾಂಜಾ ಪೆಡ್ಲರ್‌ಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಅಪಘಾತದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಅಪಘಾತದ ನಂತರ ಲಾರಿ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಲಾರಿ ಚಾಲಕನ ಪತ್ತೆಗಾಗಿ ಪೊಲೀಸರು ಗಂಭೀರ ತನಿಖೆ ಮುಂದುವರೆಸಿದ್ದಾರೆ.
ಪಿಎಸ್ಐ ಮೆಹಬೂಬ್ ಅವರ ಸಾವಿಗೆ ಪೊಲೀಸ್ ಇಲಾಖೆ ಮತ್ತು ಸಹೋದ್ಯೋಗಿಗಳು ದುಃಖ ವ್ಯಕ್ತಪಡಿಸಿದ್ದಾರೆ.