ಬೆಳಗಾವಿ ಲೋಕಸಭೆ ಬಿಜೆಪಿ ಟಿಕೆಟ್ ಫೈಟ್; ಮತ್ತೆ ಜೋರಾಯ್ತು 'ಗೋ ಬ್ಯಾಕ್ ಶೆಟ್ಟರ್' ಅಭಿಯಾನ!
ಬೆಳಗಾವಿ (ಮಾ.20): ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕೊಡಬೇಕು ಎಂದು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದ ಬೆನ್ನಲ್ಲಿಯೇ 'ಗೋ ಬ್ಯಾಕ್ ಶೆಟ್ಟರ್' ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಜೋರಾಗುತ್ತಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕಗ್ಗಂಟು ಶುರುವಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಎವೇಕು ಎಂದು ಹೈಕಮಾಂಡ್ ನಿರ್ಧಾರ ಮಾಡಿದೆ.
ಬೆಳಗಾವಿಗೆ ಹೊರಗಿನವರು ಬರುವುದು ಬೇಡ. ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಬೇಕು ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ವಿಪಕ್ಷದ ಕಾರ್ಯಕರ್ತರು ಗೋ ಬ್ಯಾಗ್ ಶೆಟ್ಟರ್ ಅಭಿಯಾನ ಆರಂಭಿಸಿದ್ದಾರೆ.
ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ತೆರಳಿದ್ದರು. ಕಾಂಗ್ರೆಸ್‌ಗೆ ಹೋಗಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಆದರೆ, ಲೋಕಸಭಾ ಚುನಾವಣೆ ವೇಳೆಗೆಪುನಃ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದಾರೆ.
ಈಗಾಗಲೇ ಹುಬ್ಬಳ್ಳಿ-ಧಾರವಾಡ ಲೋಕಸಭಾ ಚುನಾವಣೆಗೆ ಕೇಂದ್ರ ಸಚೊವ ಪ್ರಹ್ಲಾದ್ ಜೋಶಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಆದರೆ, ಲೋಕಸಭಾ ಟಿಕೆಟ್ ಯಾವ ಕ್ಷೇತ್ರದಿಂದ ನೀಡಬೇಕು ಎಂಬ ಪ್ರಶ್ನೆ ಬಂದಿದ್ದು, ಬೆಳಗಾವಿ ಕ್ಷೇತ್ರದ ಟಿಕೆಟ್ ಕೊಡುವುದಾಗಿ ಹೈಕಮಾಂಡ್ ತಿಳಿಸಿದೆ.
ಬಿಜೆಪಿ ಹೈಕಮಾಂಡ್‌ನಿಂದ ಬೆಳಗಾವಿ ಟಿಕೆಟ್ ಶೆಟ್ಟರ್ ಅವರಿಗೆ ಕೊಡಲಾಗುತ್ತದೆ ಎಂಬ ಸುಳಿವು ಸಿಗುತ್ತಿದ್ದಂತೆ, ಸ್ಥಳೀಯರು ಟ್ವಿಟರ್ ಮತ್ತು ಪೆಸ್‌ಬುಕ್ ಗಳಲ್ಲಿ ಗೋ ಬ್ಯಾಕ್ ಶೆಟ್ಟರ್ ಅಭಿಯಾನವನ್ನು ಆರಂಭಿಸಿದ್ದಾರೆ.
ಈಗಾಲೇ ಕಳೆದ 15 ದಿನಗಳ ಹಿಂದೆಯೂ ಗೋ ಬ್ಯಾಕ್ ಶೆಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಆದರೆ, ಈಗ ಮಾ.22ರಂದು ಬಿಜೆಪಿ ಕರ್ನಾಟಕಕ್ಕೆ 2ನೇ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದ ಬೆನ್ನಲ್ಲೇ ಮತ್ತೆ ಅಭಿಯಾನವನ್ನು ಮುನ್ನೆಲೆಗೆ ತಂದಿದ್ದಾರೆ.
ಬೆಳಗಾವಿ ನಮ್ಮ ಸ್ವಾಭಿಮಾನದ ನೆಲ, ಹೊರಗಿನವರು ನಮ್ಮ ನಾಯಕರಾಗುವುದು ನಮಗಿಷ್ಟವಿಲ್ಲ. ಶೆಟ್ಟರ್ ಅವರೇ ನೀವು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಮಾಡಿದ ಅನ್ಯಾಯ ಮರೆತಿಲ್ಲ ಎಂದು ಗೋ ಬ್ಯಾಕ್ ಅಭಿಯಾನದಲ್ಲಿ ಹೇಳಿದ್ದಾರೆ.
ಸ್ವ ಕ್ಷೇತ್ರದಲ್ಲಿ ಸಲ್ಲದವರು ಬೆಳಗಾವಿಯಲ್ಲಿ ಸಲ್ಲುವರೆ? ನಮ್ಮಲ್ಲಿ ಸಾಕಷ್ಟು ನಾಯಕರಿದ್ದಾರೆ ನಿಮ್ಮ ಅವಶ್ಯಕತೆ ಇಲ್ಲ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಶೆಟ್ಟರ್ ವಿರುದ್ಧ ಆಕ್ರೋಶ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಒಂದು ಕಡೆ ಸ್ಥಳೀಯ ನಾಯಕರ ವಿರೋಧ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ಗೋ ಬ್ಯಾಕ್ ಶೆಟ್ಟರ್ ಅಭಿಯಾನ ಆರಂಭವಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿದ್ದ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತಂದಿರುವ ಬಿಜೆಪಿ ನಾಯಕರು ಈಗ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.