ನಮ್ಮ ತುಳುನಾಡು ಎಷ್ಟು ಚೆಂದ ಅಲ್ಲವಾ? ಇಲ್ಲಿಯ ಶ್ರೀಮಂತಿಕೆ ಸಂಸ್ಕೃತಿಯನ್ನ ಹೊಗಳಿದ ಬಾಲಿವುಡ್ ನಟ & ಕ್ರಿಕೆಟಿಗ
ಬಾಲಿವುಡ್ ನಟ ಸುನಿಲ್ ಶೆಟ್ಟಿ ನಮ್ಮ ತುಳುನಾಡು ಎಷ್ಟು ಚೆಂದ ಅಲ್ಲವಾ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನ್ನು ಅಳಿಯ, ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟ ಸುನಿಲ್ ಶೆಟ್ಟಿ (Bollywood Actor Suniel Shetty) ಮೂಲತಃ ಕರ್ನಾಟಕದವರು. ಅದರಲ್ಲಿಯೂ ತುಳುನಾಡಿನ ಜನರು. ಮುಂಬೈನಲ್ಲಿ ಸೆಟಲ್ ಆದರೂ ಕರಾವಳಿಯ (Karnataka Coastal) ಯಾವ ಆಚರಣೆ ಮತ್ತು ಪದ್ಧತಿಯನ್ನು ಸುನಿಲ್ ಶೆಟ್ಟಿ ಮರೆತಿಲ್ಲ.
ಮಗಳು ಆಥಿಯಾ ಶೆಟ್ಟಿಯನ್ನು ಕನ್ನಡಿಗ ಕೆಎಲ್ ರಾಹುಲ್‌ಗೆ ಮದುವೆ ಮಾಡಿಕೊಡುವ ಮೂಲಕ ಕರುನಾಡಿನ ನಂಟನ್ನು ಮುಂದುವರಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ಸಹ ಅಪ್ಪಟ ದೈವಭಕ್ತರಾಗಿದ್ದು, ಬಿಡುವು ಸಿಕ್ಕಾಗಲ್ಲೆಲ್ಲಾ ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದುಕೊಳ್ಳುತ್ತಾರೆ.
ಇದೀಗ ಸುನಿಲ್ ಶೆಟ್ಟಿ ತಾವು ಕಂಡ ತುಳುನಾಡಿ ಸಂಸ್ಕೃತಿ, ಅಲ್ಲಿಯ ಜನತೆಯ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಮ್ಮ ತುಳುನಾಡು ಎಷ್ಟು ಚೆಂದ ಅಲ್ಲವಾ ಎಂದು ಮಾತುಗಳನ್ನು ಸುನಿಲ್ ಶೆಟ್ಟಿ ಆರಂಭಿಸಿದ್ದಾರೆ. ತುಳುನಾಡಿನ ಜನರು ಹೇಗೆ ಒಬ್ಬರೊಬ್ಬರನ್ನು ಹೇಗೆ ಸಂಭೋದಿಸುತ್ತಾರೆ ಎಂಬುದನ್ನು ಹೇಳಿದ್ದಾರೆ.
ನಾವು ಹೋಟೆಲ್‌ಗೆ ಹೋದಾಗ ಅಲ್ಲಿಯ ವೇಟರ್‌ನ್ನು ಧಣಿ ಎಂದು ಕರೆಯುತ್ತೇವೆ. ಆ ವೇಳೆ ಅಲ್ಲಿಗೆ ಬಂದ ಆ ವ್ಯಕ್ತಿ ಹೇಳಿ ಧಣಿ ಎಂದು ಹೇಳುತ್ತಾನೆ. ಇಲ್ಲಿ ಇಬ್ಬರು ಆಗರ್ಭ ಶ್ರೀಮಂತರೇನು ಅಲ್ಲ. ನಾನು ಅಂಗಡಿಗೆ ಹೋಗಿ ಅಲ್ಲಿಯ ಮಾಲೀಕನನ್ನು ಅಣ್ಣಾ ಎಂದು ಕರೆದೆ. ಅಂಗಡಿ ಮಾಲೀಕ ವಾಪಸ್ ಹೇಳಿ ಅಣ್ಣಾ ಅಂತ ನನ್ನನ್ನು ಕರೆದರು. ಆದರೆ ನಾವಿಬ್ಬರು ಅಸಲಿಗೆ ಸೋದರರು ಅಲ್ಲ.
ನಾನು ಫಿಶ್ ಮಾರ್ಕೆಟ್‌ಗೆ ಹೋಗಿ ಅಲ್ಲಿ ವ್ಯಾಪಾರಿ ಮಹಿಳೆಯನ್ನು ಅಮ್ಮಾ ಅಂತಾ ಕರೆದರೆ ಅವರು ನಗುತ್ತಾ ಬನ್ನಿ, ಏನು ಬೇಕು ಮಗ ಅಂತ ಕೇಳುತ್ತಾರೆ. ಆದ್ರೆ ನಾವು ತಾಯಿ-ಮಗ ಅಲ್ಲ. ಇದು ನಮ್ಮ ತುಳುನಾಡಿದ ಸಂಪ್ರದಾಯ ಎಂದು ಸುನಿಲ್ ಶೆಟ್ಟಿ ಬರೆದುಕೊಂಡಿದ್ದಾರೆ. ತುಳುನಾಡಿನ ಜನರು ಪರಸ್ಪರ ಒಬ್ಬರನ್ನೊಬ್ಬರನ್ನು ಹೇಗೆ ಗೌರವಿಸುತ್ತಾರೆ ಮತ್ತು ಇಲ್ಲಿಯ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆ ಎಂಬುದನ್ನು ಹೇಳಿದ್ದಾರೆ.
ತುಳುನಾಡು ತನ್ನ ಸಂಸ್ಕೃತಿಯಿಂದಲೇ ಗಮನ ಸೆಳೆಯುವ ಪ್ರದೇಶವಾಗಿದೆ. ಸುನಿಲ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಹಲವು ಕಲಾವಿದರನ್ನು ಚಿತ್ರರಂಗಕ್ಕೆ ನೀಡಿದೆ. ಎಲ್ಲಾ ಸ್ಟಾರ್‌ಗಳು ಹೊರ ರಾಜ್ಯಗಳಲ್ಲಿ ಸೆಟಲ್ ಆಗಿದ್ರೂ ಇಲ್ಲಿಯ ಸಂಸ್ಕೃತಿಯನ್ನು ಮರೆತಿಲ್ಲ. ಈ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.
ಕರ್ನಾಟಕದ ಕರಾವಳಿ ತುಳುನಾಡು ಎಂದೇ ಪ್ರಸಿದ್ಧಿ. ಇಲ್ಲಿ ನಡೆಯುವ ಪ್ರಮುಖ ಆಚರಣೆಯ ದೈವಾರದ ದಿನ ಅಥವಾ ಭೂತಾರಾಧನೆ. ಭೂತ ಅಂದ ಕೂಡಲೇ ಭಯದ ವಾತಾವರಣ ನಿರ್ಮಾಣವಾಗುತ್ತದೆ. ತುಳುವರಿಗೆ ಭೂತ ಅಂದ ಕೂಡಲೇ ಭಯ ಭಕ್ತಿಯ ಆರಾಧ್ಯಮೂರ್ತಿ ಕಣ್ಣ ಮುಂದೆ ಬರುತ್ತದೆ. ದೈವ ಅಥವಾ ಭೂತ ಎಂಬುದು ಭಕ್ತಿಯ ಸಂಕೇತವಾಗಿ ಬಳಸಲ್ಪಡುವ ಶಬ್ದಗಳು.