ಚಂದ್ರನ ಮೇಲೆ ಅಪ್ಪಳಿಸಿದ ಸ್ಪೇಸ್ ಎಕ್ಸ್ ರಾಕೆಟ್: 60 ಅಡಿ ಅಗಲ ಕುಳಿ ನಿರ್ಮಾಣ
ಒಂದು ವರ್ಷದಿಂದ ಬಾಹ್ಯಾಕಾಶದಲ್ಲಿ ತೇಲುತ್ತಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನ ಭಾಗವೊಂದು ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಅಪ್ಪಳಿಸಿದೆ. ಗಂಟೆಗೆ 5,400 ಮೈಲಿ ವೇಗದಲ್ಲಿ ಅಪ್ಪಳಿಸಿದ ಈ ರಾಕೆಟ್, ಚಂದ್ರನ ಮೇಲೆ ದೊಡ್ಡ ಕುಳಿಯನ್ನು ಸೃಷ್ಟಿಸಿರಬಹುದೆಂದು ಅಂದಾಜಿಸಲಾಗಿದೆ.

ಕಳೆದೊಂದು ವರ್ಷದಿಂದ ಬಾಹ್ಯಾಕಾಶದಲ್ಲಿ ಅಲೆಯುತ್ತಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನ ಭಾಗವೊಂದು ಬುಧವಾರ ಬೆಳಗ್ಗೆ ಚಂದ್ರನ ಗುರುತ್ವಾಕರ್ಷಣೆಯ ಸೆಳೆತಕ್ಕೆ ಸಿಕ್ಕು ಅದಕ್ಕಪ್ಪಳಿಸಿದೆ.
ಪರಿಣಾಮ ಭೂಮಿಗೂ ಕಾಣುವಷ್ಟು ಪ್ರಖರ ಬೆಳಕು ಉತ್ಪತ್ತಿಯಾಗಿದೆ. ಒಂದು ಸ್ಕೂಲ್ ಬಸ್‌ನಷ್ಟು ದೊಡ್ಡದಿದ್ದ 4 ಟನ್ ತೂಕದ ರಾಕೆಟ್ ಗಂಟೆಗೆ 5,400 ಮೈಲಿಯ ವೇಗದಲ್ಲಿ ಕ್ರ್ಯಾಶ್ ಆದ ಜಾಗದಲ್ಲಿ 60 ಅಡಿ ಅಗಲ ಹಾಗೂ 12 ಅಡಿ ಆಳದ ಕುಳಿ ಸೃಷ್ಟಿಯಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಚಂದ್ರನ ಐನ್‌ಸ್ಟೈನ್ ಕುಳಿಯ ಬಳಿ ಕ್ರ್ಯಾಶ್ ಆಗಿದ್ದು, ಈ ಪ್ರಕ್ರಿಯೆ ಅಥವಾ ಪರಿಣಾಮದ ಸ್ಪಷ್ಟ ವೀಕ್ಷಣೆ ಈ ವರೆಗೆ ಸಾಧ್ಯವಾಗಿಲ್ಲ. ಆದಕಾರಣ, ಚಂದ್ರನ ಸುತ್ತ ಸುತ್ತುತ್ತಿರುವ ತಮ್ಮ ನೌಕೆಗಳ ಸಹಾಯದಿಂದ ರಾಕೆಟ್ ಬಿದ್ದ ಜಾಗದ ಫೋಟೋಗಳನ್ನು ಸೆರೆಹಿಡಿಯಲು ಅಮೆರಿಕದ ನಾಸಾ ಮತ್ತು ದಕ್ಷಿಣ ಕೊರಿಯಾದ ಬಾಹ್ಯಾಕಾಶ ಸಂಸ್ಥೆಗಳು ಯತ್ನಿಸುತ್ತಿದ್ದವು.
ಇದರ ನಡುವೆ ದಕ್ಷಿಣ ಕೊರಿಯಾದ ಆರ್ಬಿಟರ್ ಆ ಕ್ಷಣದ ಫೋಟೋಗಳನ್ನು ತೆಗೆಯುವಲ್ಲಿ ಯಶ ಕಂಡಿದೆ. ತಾನು ಹೊತ್ತುತಂದಿದ್ದ ಬಾಹ್ಯಾಕಾಶ ನೌಕೆಗಳನ್ನು ಗಮ್ಯಸ್ಥಾನಕ್ಕೆ ತಲುಪಿಸಿದ ಬಳಿಕ ಇಂಧನ ಖಾಲಿಯಾದ ಪರಿಣಾಮ ದಿಕ್ಕು-ದೆಸೆಯಿಲ್ಲದೆ ಅಂತರಿಕ್ಷದಲ್ಲಿ ಈ ರಾಕೆಟ್ ತೇಲಾಡುತ್ತಿತ್ತು.
ಹೀಗೆ ಅಲೆಯುತ್ತಿದ್ದ ವೇಳೆ ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ, ಅದರತ್ತ ಆಕರ್ಷಿಸಲ್ಪಟ್ಟು, ಅಪ್ಪಳಿಸಿದೆ. ಚಂದ್ರನ ಮೇಲೆ ಕುಳಿಗಳ ಸೃಷ್ಟಿಯ ಬಗೆಗಿನ ಅಧ್ಯಯನಕ್ಕೆ ಈ ಪ್ರಕ್ರಿಯೆ ಸಹಕಾರಿಯಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

