- Home
- Entertainment
- Sandalwood
- Vijay Raghavendra ಸೀತಾರಾಮ್ ಬಿನೋಯ್ ತಂಡದ ಮತ್ತೊಂದು ಚಿತ್ರ ಕೇಸ್ ಆಫ್ ಕೊಂಡಾಣ
Vijay Raghavendra ಸೀತಾರಾಮ್ ಬಿನೋಯ್ ತಂಡದ ಮತ್ತೊಂದು ಚಿತ್ರ ಕೇಸ್ ಆಫ್ ಕೊಂಡಾಣ
ದೇವಿಪ್ರಸಾದ್ ಶೆಟ್ಟಿನಿರ್ದೇಶನ, ಸಾತ್ವಿಕ್ ಹೆಬ್ಬಾರ್ ನಿರ್ಮಾಣದ ಚಿತ್ರ ಕೇಸ್ ಆಫ್ ಕೊಂಡಾಣ. ವಿಜಯ್ ರಾಘವಂದ್ರಗೆ ಖುಷಿ ರವಿ ಜೋಡಿ....

ಯಾವುದೇ ಸದ್ದುಗದ್ದಲವಿಲ್ಲದೆ ತಮ್ಮ ಪಾಡಿಗೆ ‘ಸೀತಾರಾಮ್ ಬಿನೋಯ್’ ಎಂಬ ಸಿನಿಮಾ ಮಾಡಿ ಗೆದ್ದು ಬೀಗಿದ ಯುವತಂಡ ಮತ್ತೊಂದು ಸಿನಿಮಾ ಶುರು ಮಾಡಿದೆ. ಅದರ ಹೆಸರು ‘ಕೇಸ್ ಆಫ್ ಕೊಂಡಾಣ’.
ದೇವಿಪ್ರಸಾದ್ ಶೆಟ್ಟಿನಿರ್ದೇಶನದ ಈ ಚಿತ್ರಕ್ಕೆ ಗುರುವಾರ ಮುಹೂರ್ತ ನಡೆಯಿತು. ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಕ್ಲಾಪ್ ಮಾಡಿದರು. ಹಿರಿಯ ಪತ್ರಕರ್ತ ಬಾ.ನಾ. ಸುಬ್ರಹ್ಮಣ್ಯ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
ಈ ಸಿನಿಮಾದಲ್ಲಿಯೂ ವಿಜಯ ರಾಘವೇಂದ್ರ ಅವರೇ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಜೊತೆಗೆ ಭಾವನಾ ಮೆನನ್ ಮತ್ತು ದಿಯಾ ಖ್ಯಾತಿಯ ಖುಷಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ, ‘ಒಂದಕ್ಕೊಂದು ಸಂಬಂಧ ಇರುವ ಬೇರೆ ಬೇರೆ ವಿಚಾರಗಳು ಒಟ್ಟುಗೂಡುವ ಕತೆಯುಳ್ಳ ಸಿನಿಮಾ ಇದು. ಇಲ್ಲಿ ಸಂದರ್ಭಗಳೇ ವಿಲನ್.
ಕತೆಯೇ ಪ್ರಧಾನವಾಗಿರುವ ಸಿನಿಮಾ ಇದು. ನಾವು ಮೊದಲ ಸಿನಿಮಾ ಮಾಡಿದಾಗ ಬಜೆಟ್ ಹೆಚ್ಚಿರಲಿಲ್ಲ. ತಾಂತ್ರಿಕ ವರ್ಗದಲ್ಲೂ ಪ್ರಸಿದ್ಧರು ಇರಲಿಲ್ಲ. ಈ ಸಲ ಒಳ್ಳೆಯ ತಾಂತ್ರಿಕ ವರ್ಗ ಕಟ್ಟಿದ್ದೇವೆ. ಒಳ್ಳೆಯ ಸಿನಿಮಾ ಕೊಡುವ ಭರವಸೆ ನೀಡುತ್ತೇವೆ’ ಎಂದರು.
ನಟ ವಿಜಯ ರಾಘವೇಂದ್ರ, ‘ಈ ತಂಡ ನನಗೆ ಮತ್ತೊಂದು ಅವಕಾಶ ಕೊಟ್ಟಿರುವುದಕ್ಕೆ ಖುಷಿ ಇದೆ. ದೇವಿಪ್ರಸಾದ್ ಅವರ ಡೆಡಿಕೇಷನ್ ಅಸಾಧ್ಯವಾದುದು. ಚಿತ್ರರಂಗದಲ್ಲಿರುವ ವಿರಳ ತಂತ್ರಜ್ಞರಲ್ಲಿ ಅವರು ಒಬ್ಬರು. ನನಗೆ ಸೀತಾರಾಮ್ ಬಿನೋಯ್ ನಂತರ ಇದಕ್ಕಿಂತ ಒಳ್ಳೆಯ ಕತೆ ಸಿಗುತ್ತಿರಲಿಲ್ಲ ಅನ್ನಿಸಿತು’ ಎಂದರು.
ದಿಯಾ ಖ್ಯಾತಿಯ ಖುಷಿ ವಿಜಯ ರಾಘವೇಂದ್ರ ಜೊತೆ ನಟಿಸುವ ಖುಷಿ ವ್ಯಕ್ತಪಡಿಸಿದರು. ಚಿತ್ರಕ್ಕೆ ಸಂಭಾಷಣೆ ಬರೆದಿರುವ ಪತ್ರಕರ್ತ ಜೋಗಿ, ‘ಹಲವು ವರ್ಷಗಳಿಂದ ಸಿನಿಮಾ ಬರವಣಿಗೆ ಬಿಟ್ಟಿದ್ದೆ.
ನನಗೆ ಎಕ್ಸೈಟ್ ಆಗದೇ ಇದ್ದರೆ ನಾನು ಬರೆಯಲಾರೆ. ಇವರ ಕತೆ ಕೇಳಿ ಎಕ್ಸೈಟ್ ಆದೆ. 50 ವಯಸ್ಸಿನ ನಂತರ ಹೊಸ ವಿಷಯ ಕಲಿಯಬೇಕು. ಈ ಹುಡುಗರ ತಂಡದ ಜೊತೆ ಇದ್ದರೆ ಕಲಿಯಬಹುದು ಅನ್ನಿಸಿತು. ಹಾಗಾಗಿ ಸಂಭಾಷಣೆ ಬರೆದೆ. ಈ ತಂಡಕ್ಕೆ ಸ್ಪಷ್ಟತೆ ಇದೆ. ಇವರು ಮುಂದಿನ ಸಿನಿಮಾಗೆ ಬರೆಯಲು ಕೇಳಿಕೊಂಡರೆ ಅದಕ್ಕೂ ಬರೆಯುತ್ತೇನೆ’ ಎಂದರು.
ನಿರ್ಮಾಪಕ ಸಾತ್ವಿಕ್ ಹೆಬ್ಬಾರ್ ಎಲ್ಲರಿಗೂ ಧನ್ಯವಾದ ಹೇಳಿದರು. ತಾವು ತಂಡವಾಗಿ ಕೆಲಸ ಮಾಡುವ ಖುಷಿಯನ್ನು ವಿವರಿಸಿದರು. ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ವಿಶ್ವಜಿತ್ ರಾವ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಆರ್ಚ್ ಡೈರೆಕ್ಟರ್ ಆಗಿ ಭವಾನಿ ಶಂಕರ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.