ತೂತು ಮಡಿಕೆ ಟ್ರೇಲರ್‌ಗೆ ಭಾರಿ ಮೆಚ್ಚುಗೆ; ಕಾರ್ಯಕ್ರಮದಲ್ಲಿ ಮಿಂಚಿದ ಸ್ಟಾರ್‌ಗ
ಜು.8ರಂದು ತೂತು ಮಡಿಕೆ ಸಿನಿಮಾ ಬಿಡುಗಡೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಯಾರೆಲ್ಲಾ ಇದ್ದರು ನೋಡಿ...
ಶ್ರದ್ಧಾವಂತ ಸಿನಿಮಾ ತಂಡಕ್ಕೆ ಪ್ರೋತ್ಸಾಹ ಸಿಕ್ಕಿದರೆ ಫಲಿತಾಂಶ ಹೇಗಿರಬಹುದು ಎಂಬುದಕ್ಕೆ ತೂತು ಮಡಿಕೆ ಸಿನಿಮಾ ಸಾಕ್ಷಿ. ಚಂದ್ರಕೀರ್ತಿ ನಿರ್ದೇಶನದ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜು.8ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆ ಮೊದಲೇ ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಕಲರ್ಸ್ ಕನ್ನಡ ವಾಹಿನಿಯ ಪಾಲಾಗಿದೆ. ಈ ಎಲ್ಲಾ ಕಾರಣದಿಂದ ಚಿತ್ರತಂಡ ಖುಷಿಯಾಗಿದೆ.
ನಿರ್ದೇಶಕ ಚಂದ್ರ ಕೀರ್ತಿ ಎಂ, ‘ಎಂಸಿಎ ಪದವೀಧರ ನಾನು. ಸಿನಿಮಾದಲ್ಲಿ ನಟನಾಗುವ ಆಸೆಯಿಂದ ಚಿತ್ರರಂಗಕ್ಕೆ ಬಂದೆ. ಕೆಲವು ಸಿನಿಮಾಗಳಲ್ಲಿ ನಟಿಸಿದೆ. ಆಮೇಲೆ ಸ್ನೇಹಿತರು ಸೇರಿಕೊಂಡು ಸಿನಿಮಾ ಮಾಡುವ ನಿರ್ಧಾರ ಮಾಡಿದೆವು.
ಆ ಹಂತದಲ್ಲಿ ನಿರ್ಮಾಪಕರಾದ ಶಿವಕುಮಾರ್, ಮಧುಸೂದನ್ ಅವರು ತಾವೇ ನಮ್ಮನ್ನು ಹುಡುಕಿಕೊಂಡು ಬಂದರು. ಎರಡೂವರೆ ವರ್ಷದ ಹಿಂದೆಯೇ ಸಿನಿಮಾ ಕೆಲಸ ಮುಗಿದಿತ್ತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಕಲಾವಿದರು, ತಂತ್ರಜ್ಞರು ಎಲ್ಲರ ಕಾರಣದಿಂದ ಸಿನಿಮಾ ಸೊಗಸಾಗಿ ಬಂದಿದೆ’ಎಂದರು.
ನಿರ್ಮಾಪಕರಾದ ಶಿವಕುಮಾರ್, ಮಧುಸೂದನ್ ಖುಷಿಯಲ್ಲಿ ಇದ್ದರು. ಲಂಡನ್‌ನಲ್ಲಿ ವಾಸವಿದ್ದ ಅವರು ಈಗ ಭಾರತದಲ್ಲೇ ನೆಲೆಸಿದ್ದಾರೆ. ಮಧುಸೂದನ್, ‘ಸಿನಿಮಾ ಮಾಡುವ ಆಸೆ ಇತ್ತು.
ಅದಕ್ಕೆ ತಕ್ಕಂತೆ ಒಳ್ಳೆಯ ತಂಡ ಸಿಕ್ಕಿತು. ಸಿನಿಮಾ ಮೆಚ್ಚಿ ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಸಿನಿಮಾ ಖರೀದಿ ಮಾಡಿದ್ದಾರೆ. ನಾವು ಸಿನಿಮಾ ನೋಡಿ ಖುಷಿಯಿಂದ ಭಾರತಕ್ಕೆ ಮರಳಿ ಬಂದಿದ್ದೇವೆ. ಇನ್ನಷ್ಟುಸಿನಿಮಾ ಮಾಡುವ ಆಸೆ ಇದೆ’ ಎಂದರು.
ಸಂಭಾಷಣಾಕಾರ ಮಾಸ್ತಿ, ನಿರ್ದೇಶಕ ಮಹೇಶ್ ಟ್ರೇಲರ್ ರಿಲೀಸ್ ಮಾಡಿದರು. ಸಂಗೀತ ನಿರ್ದೇಶಕ ಸ್ವಾಮಿನಾಥನ್, ಸಹ ನಿರ್ದೇಶಕರಾದ ಎಎಸ್‌ಜಿ, ನಿತಿನ್ ಕುಮಾರ್, ಡಿಓಪಿ ನವೀನ್ ಚೆಲ್ಲ, ನಟರಾದ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ನರೇಶ್ ಭಟ್, ವಿನಯ್ ಕೃಷ್ಣಸ್ವಾಮಿ, ಗಾಯಕ ಚೇತನ್ ನಾಯ್‌್ಕ, ಪಾವನಾ ಗೌಡ ಇದ್ದರು.