ಚಿತ್ರರಂಗಕ್ಕೆ ಮತ್ತೊಬ್ಬ ಸಂಗೀತ ನಿರ್ದೇಶಕಿ ಸಾಧ್ವಿನಿ ಕೊಪ್ಪ!
ಜಲಪಾತ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ಸಾಧ್ವಿನಿ ಕೊಪ್ಪ ಮಾತುಗಳು...
ನನ್ನ ತಂದೆ, ಅಜ್ಜಿ ಸಂಗೀತ ಹಿನ್ನೆಲೆ ಇರುವವರು. ಕೊಪ್ಪದಲ್ಲಿ ನಮ್ಮ ಸಂಗೀತ ಶಾಲೆ ಇದೆ. ಅದಕ್ಕೆ 30 ವರ್ಷ ತುಂಬಿದೆ. ತಂದೆ ಹಲವಾರು ಭಕ್ತಿಗೀತೆ, ಭಾವಗೀತೆ, ನೃತ್ಯ ರೂಪಕಗಳಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡುತ್ತಿದ್ದರು.
ಹೀಗೆ ಪರಂಪರೆಯಿಂದ ಸಂಗೀತ ಹತ್ತಿರವಾಯ್ತು. ಜೀ ಕನ್ನಡದ ‘ಸರಿಗಮಪ’ ರಿಯಾಲಿಟಿ ಶೋದಲ್ಲಿ ರನ್ನರ್ ಅಪ್ ಆಗಿದ್ದೆ. ಜೀ ಕನ್ನಡದಲ್ಲಿ ಜ್ಯೂರಿ ಮೆಂಬರ್ ಆಗಿಯೂ ಕೆಲಸ ಮಾಡಿದ್ದೆ.
ಮುಖ್ಯಮಂತ್ರಿಗಳಿಂದ ‘ಕಲಾಶ್ರೀ’ ಪ್ರಶಸ್ತಿ ಪಡೆದಿದ್ದೇನೆ. ಸುಮಾರು 5 ವರ್ಷ ವಯಸ್ಸಿರುವಾಗಲೇ ಸ್ಟೇಜ್ ಹತ್ತಿ ಹಾಡಲು ಶುರು ಮಾಡಿದವಳು ನಾನು.
ಸರಿಗಮಪ ಶೋದಲ್ಲಿ ಭಾಗವಹಿಸಿದ ಮೇಲೆ ಸಿನಿಮಾದಲ್ಲಿ ಹಾಡಲು ಅವಕಾಶ ಬರತೊಡಗಿತು. ಅದಕ್ಕೂ ಮೊದಲು ಆಲ್ಬಂನಲ್ಲಿ ಹಾಡ್ತಿದ್ದೆ. ರಮೇಶ್ ಬೇಗಾರ್ ನಮ್ಮ ಊರಿನವರೇ.
ಅವರ ಹಿಂದಿನ ಸಿನಿಮಾಕ್ಕೆ ನನ್ನ ತಂದೆ ಸಂಗೀತ ನಿರ್ದೇಶನ ಮಾಡಿದ್ದರು. ಒಂದು ಹಾಡಿಗೆ ನಾನು ರಾಗ ಸಂಯೋಜಿಸಿದ್ದೆ. ಇದೀಗ ಜಲಪಾತ ಸಿನಿಮಾ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕಿಯಾದೆ.
ಗಾಯಕ ವಿಜಯ ಪ್ರಕಾಶ್ ನನಗೆ ಸರಿಗಮಪ ದಿನಗಳಿಂದ ಗೈಡ್ ಥರ ಇದ್ದರು. ಅವರ ಬಳಿ ನಾನು ಸಂಗೀತ ಸಂಯೋಜಿಸುತ್ತಿರುವ ವಿಚಾರ ಹೇಳಿದಾಗ ಖುಷಿ ಪಟ್ಟರು. ತಕ್ಷಣ ಹಾಡಲು ಒಪ್ಪಿಕೊಂಡರು.
ನನಗೆ ವೆಸ್ಟರ್ನ್ ಮ್ಯೂಸಿಕ್ ಪರಿಚಯವೂ ಇದೆ. ಹೀಗಾಗಿ ಆ ವಿಭಾಗದಲ್ಲೂ ಸಂಗೀತ ಸಂಯೋಜನೆ ಮಾಡುವ ಧೈರ್ಯವಿದೆ. ಸಿನಿಮಾಕ್ಕೆ ಆ ಸ್ಟೈಲಿನ ರಾಗ ಸಂಯೋಜನೆ ಬೇಕಿದ್ದರೆ ಆ ವಿಭಾಗದಲ್ಲೂ ಪ್ರಯತ್ನಿಸುವೆ. ಸಿನಿಮಾ ಸಂಗೀತದ ಜೊತೆಗೆ ಸ್ವತಂತ್ರ ಕಂಪೊಸಿಷನ್ ಮಾಡಬೇಕು ಅನ್ನುವ ಆಸೆ ಇದೆ.