- Home
- Entertainment
- Sandalwood
- Mandya: ಆಷಾಢ ಏಕಾದಶಿಯಂದು ಪುನೀತ್ ರಾಜ್‌ಕುಮಾರ್ ಫೋಟೋ ಮುಂದೆ ಎಡೆ ಇಟ್ಟು ಅಭಿಮಾನಿಯ ವಿಶೇಷ ಪೂಜೆ
Mandya: ಆಷಾಢ ಏಕಾದಶಿಯಂದು ಪುನೀತ್ ರಾಜ್‌ಕುಮಾರ್ ಫೋಟೋ ಮುಂದೆ ಎಡೆ ಇಟ್ಟು ಅಭಿಮಾನಿಯ ವಿಶೇಷ ಪೂಜೆ
Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಬಳಗ ಅವರನ್ನು ಜೀವಂತ ದೇವರಂತೆ ಪೂಜಿಸುತ್ತಿದೆ. ಆಷಾಢ ಏಕಾದಶಿ ದಿನದಂದು ಮಂಡ್ಯ ಜಿಲ್ಲೆಯ ಅಭಿಮಾನಿಯೊಬ್ಬರು ಪುನೀತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜೊತೆಯಲ್ಲಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾತು ಅಕ್ಷರಷಃ ಸತ್ಯ. ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಬಳಗ ಕಂಡು ಇಡೀ ಚಿತ್ರಲೋಕ ಆಶ್ಚರ್ಯಚಕಿತವಾಗುತ್ತದೆ. ಸರಳತೆ ಸರದಾರ ಎಂದು ಕರೆಸಿಕೊಳ್ಳುತ್ತಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು.
ಆಷಾಢ ಏಕಾದಶಿ ದಿನದಂದು ಮನೆಗಳಲ್ಲಿ ಹಿರಿಯರನ್ನು ಸ್ಮರಿಸಲಾಗುತ್ತದೆ. ಮಂಡ್ಯ ಜಿಲ್ಲೆಯ ಅಭಿಮಾನಿಯೊಬ್ಬರು ಏಕಾದಶಿ ದಿನದಂದು ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ. ಫೋಟೋ ಮುಂದೆ ಎಡೆ ಇರಿಸಿ ಪೂಜೆ ಮಾಡಲಾಗಿದೆ. ಪುನೀತ್ ಜೊತೆಯಲ್ಲಿ ಡಾ.ರಾಜ್‌ಕುಮಾರ್ ಅವರ ಫೋಟೋವನ್ನು ಸಹ ಇರಿಸಲಾಗಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಕ್ಷ್ಮಿಸಾಗರದ ನಿವಾಸಿಯಾಗಿರುವ ಪ್ರತಾಪ್ ಎಂಬವರು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಕುಟುಂಬಸ್ಥರೊಂದಿಗೆ ಪುನೀತ್ ಭಾವಚಿತ್ರಕ್ಕೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿದ್ದಾರೆ.
ಅಪ್ಪು ನಿಧನದ ಬಳಿಕ ಪ್ರತಿವರ್ಷ ನಾವು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರದ ಮುಂದೆ ಎಡೆ ಇರಿಸಿ ಪೂಜೆ ಸಲ್ಲಿಸುತ್ತೇವೆ ಎಂದು ಪ್ರತಾಪ್ ಹೇಳುತ್ತಾರೆ. ಪ್ರತಾಪ್ ಪೂಜೆ ಸಲ್ಲಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಪುನೀತ್ ಅವರ ಮೇಲಿನ ಅಭಿಮಾನದಿಂದ ಪ್ರತಿವರ್ಷ ಏಕಾದಶಿ ದಿನ ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ.
ಬಾಲನಟನಾಗಿ ಚಂದನವನಕ್ಕೆ ಕಾಲಿಟ್ಟ ಪುನೀತ್ ರಾಜ್‌ಕುಮಾರ್ ನಾಯಕ ನಟನಾಗಿ 32 ಸಿನಿಮಾಗಳಲ್ಲಿ ನಟಿಸಿದ್ದಾರೆ. 29ನೇ ಅಕ್ಟೋಬರ್ 2021ರಲ್ಲಿ ಪುನೀತ್ ರಾಜ್‌ಕುಮಾರ್ ನಿಧನರಾದರು. ಕರ್ನಾಟಕ ಸರ್ಕಾರವು ನವೆಂಬರ್ 1, 2022 ರಂದು ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು ನೀಡಿ ಗೌರವಿಸಿದೆ.