ಪದ್ಮಾವತಿ ಪಾತ್ರ ಚಾಲೆಂಜಿಂಗ್ ಆಗಿತ್ತು: ಮೇಘನಾ ರಾಮ್
ಜು.15ಕ್ಕೆ ಪದ್ಮಾವತಿ ಚಿತ್ರ ಬಿಡುಗಡೆ. ಚಾಲೆಂಜಿಂಗ್ ಪಾತ್ರದ ಬಗ್ಗೆ ಮೇಘನಾ ರಾಮ್ ಮಾತುಗಳು

‘ಚಿಕ್ಕ ವಯಸ್ಸಿಂದ ವೃದ್ಧಾಪ್ಯದವರೆಗೂ ಆವರಿಸುವ ಪದ್ಮಾವತಿ ಪಾತ್ರದಲ್ಲಿ ನಟಿಸೋದು ಚಾಲೆಂಜಿಂಗ್ ಆಗಿತ್ತು’ ಎಂದು ‘ಪದ್ಮಾವತಿ’ ಚಿತ್ರದ ನಾಯಕಿ ಮೇಘನಾ ರಾಮ್ ಹೇಳಿದ್ದಾರೆ.
ಈ ಚಿತ್ರ ಜು.15ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಆಡಿಯೋ ಲಾಂಚ್ ಇತ್ತೀಚೆಗೆ ನಡೆಯಿತು. ಈ ವೇಳೆ ಮಾತನಾಡಿದ ಮೇಘನಾ, ‘ಚಿತ್ರದ ತುಣುಕು ನೋಡುತ್ತಿದ್ದರೆ ನಟನೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನಿಸುತ್ತೆ. ಬಹುಶಃ ಕಲಾವಿದೆ ಬೆಳೆಯುತ್ತಾ ಹೋಗುವಾಗ ಇಂಥಾ ಗೊಂದಲಗಳು ಇದ್ದೇ ಇರುತ್ತವೆಯೇನೋ’ ಎಂದು ಹೇಳಿದರು.
ಈ ವೇಳೆ ಜ್ಯೂ. ಜಾನಕಿ ಎಂದೇ ಜನಪ್ರಿಯವಾಗಿರುವ ಕೊಪ್ಪಳದ ಗಾಯಕಿ ಗಂಗಮ್ಮ ಚಿತ್ರದ ಹಾಡೊಂದನ್ನು ಹಾಡಿ, ತಾನು ನೂರು ಚಿತ್ರಕ್ಕೆ ಹಾಡಬೇಕು ಎಂಬ ಆಸೆ ವ್ಯಕ್ತಪಡಿಸಿದರು.
ಈ ವೇಳೆ ಅಲ್ಲೇ ಇದ್ದ ಲಹರಿ ಸಂಸ್ಥೆಯ ಲಹರಿ ವೇಲು, ಮುಂದೆ ಲಹರಿ ಸಂಸ್ಥೆಯಿಂದ ಇವರ ಧ್ವನಿ ಸುರುಳಿ ಹೊರತರುವುದಾಗಿ ಭರವಸೆ ನೀಡಿದರು.
ನಿರ್ದೇಶಕ ಮಿಥುನ್ ಚಂದ್ರಶೇಖರ್, ‘ಅರಿಯದೇ ಮಾಡಿದ ತಪ್ಪಿನಿಂದ ಮಗು ಪಡೆಯುವ ಕೆಲವರು ತಮ್ಮ ಭವಿಷ್ಯಕ್ಕಾಗಿ ಮಗುವನ್ನು ಅನಾಥ ಮಾಡುತ್ತಾರೆ. ಇಂಥ ಘಟನೆಗಳನ್ನು ಹತ್ತಿರದಿಂದ ನೋಡಿದ್ದೇನೆ.
ಗಾಢವಾಗಿ ಕಲಕಿದ ಈ ವಿಚಾರವನ್ನಿಟ್ಟು ಚಿತ್ರ ಮಾಡಿದ್ದೇನೆ’ ಎಂದರು. ನಾಯಕ ವಿಕ್ರಂ ಆರ್ಯ ಈ ಚಿತ್ರದ ನಟನೆ ತೃಪ್ತಿ ಕೊಟ್ಟಿದೆ ಎಂದರು. ದಾಮೋದರ್ ಪಾರಗೆ, ನಾಮದೇವ ಭಟ್ಟರ್ ಚಿತ್ರದ ನಿರ್ಮಾಪಕರು.