ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಗೆ ನಾಯಕಿಯಾದ ಮಹಾನಟಿ ಪ್ರಿಯಾಂಕಾ ಆಚಾರ್
ಝೀ ಕನ್ನಡದಲ್ಲಿ ಪ್ರಸಾರವಾಗಿದ್ದ ಜನಪ್ರಿಯ ರಿಯಾಲಿಟಿ ಶೋ ಮಹಾನಟಿ ವಿನ್ನರ್ ಆಗಿದ್ದ ಪ್ರಿಯಾಂಕಾ ಆಚಾರ್ ಇದೀಗ ನಾಯಕಿಯಾಗಿ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು ಅಂದ್ರೆ ಅದು ಮಹಾನಟಿ (Mahanati Reality Show). ಈ ರಿಯಾಲಿಟಿ ಶೋನಲ್ಲಿ ಎಲ್ಲಾ ರೀತಿಯ ಅಭಿನಯ ಮಾಡಿ, ಮಹಾನಟಿ ಕಿರೀಟ ತೊಟ್ಟ ಬೆಡಗಿ ಪ್ರಿಯಾಂಕಾ ಆಚಾರ್. ತಮ್ಮ ಸೌಂದರ್ಯ, ಅಭಿನಯ, ಎಕ್ಸ್ ಪ್ರೆಶನ್, ಡ್ಯಾನ್ಸ್ ಮೂಲಕ ಜನಮನ ಗೆದ್ದಿದ್ದ ಮಹಾನಟಿಗೆ ಇದೀಗ ದೊಡ್ಡ ಅವಕಾಶವೇ ಒದಗಿ ಬಂದಿದೆ.
ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮ ಕಥೆ ಎನ್ನುವ ಸಬ್ ಟೈಟಲ್ ಹೊಂದಿರುವ ಪ್ರೊಡಕ್ಷನ್ ನಂ 2 ಸಿನಿಮಾಗೆ ನಾಯಕಿಯಾಗಿ ಮಹಾನಟಿ ಪ್ರಿಯಾಂಕ ಆಚಾರ್ (Priyanka Achar) ಆಯ್ಕೆಯಾಗಿದ್ದಾರೆ. ಈ ಸಿನಿಮಾ ನಾಯಕ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ.
ಏಳುಮಲೆಯೇ ಕರಗುವಂತ ಹೂವಂತಹ ಹುಡುಗಿ, ಎದೆ ನಡುಗಿಸಿದ ಈ ಪ್ರೇಮ ಕಥೆಯ ನಾಯಕಿ ಎನ್ನುತ್ತಾ ತರುಣ್ ಸುಧೀರ್ (Tarun Sudhir) ಅವರು ನಾಯಕಿಯನ್ನು ಪರಿಚಯಿಸಿದ್ದಾರೆ. ಕಿರುತೆರೆಯಲ್ಲಿ ಮಹಾನಟಿಯಾಗುವ ಮೂಲಕ ವಿಜೇತೆಯಾಗಿದ್ದ ನಟಿ ಇದೀಗ, ಹಿರಿತೆರೆಯ ಮೇಲೆ ನಾಯಕಿಯಾಗೋದಕ್ಕೆ ಸಜ್ಜಾಗಿದ್ದಾರೆ.
ತರುಣ್ ಸುಧೀರ್ ಜೊತೆ ಕೆಲಸ ಮಾಡಿದ್ದ, ಪುನೀತ್ ರಂಗಸ್ವಾಮಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾಗೆ ಮೈಸೂರಿನ ಸುಂದರಿ ಪ್ರಿಟಿ ಪ್ರಿಯಾಂಕ ನಾಯಕಿಯಾಗಿದ್ದಾರೆ. ತರುಣ್ ಸುಧೀರ್ ಅವರೇ ಈ ಸಿನಿಮಾ ನಿರ್ಮಾಪಕರಾಗಿದ್ದು, ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಪರಿಚಯವಾಗುತ್ತಿರುವ ನಾಯಕಿ ಪ್ರಿಯಾಂಕಾಗೆ ಸ್ವಾಗತ ಕೋರುತ್ತಾ ‘ಏಳುಮಲೆಯ ಹೂವಾಗಿ ಪರಿಚಯಿಸುತ್ತಿದ್ದೇವೆ ಪ್ರಿಯಾಂಕ ಆಚಾರ್, ಎದೆ ನಡುಗಿಸಿದ ಈ ಪ್ರೇಮ ಕಥೆಯ ನಾಯಕಿಗೆ ನಮ್ಮ ಪ್ರೀತಿಯ ಸ್ವಾಗತ’ ಎಂದು ಹಾರೈಸಿದ್ದಾರೆ.
ಪ್ರಿಯಾಂಕಾ ಆಚಾರ್ ಮಹಾನಟಿ ಶೋನಲ್ಲಿ ಇದ್ದಾಗಲೇ ತರುಣ್ ಸುಧೀರ್ ಅವರು ಇವರ ನಟನೆಯನ್ನು ಮೆಚ್ಚಿಕೊಂಡಿದ್ದರು. ಇದೀಗ ದೊಡ್ಡ ನಟಿಯಾಗಬೇಕೆಂದು ಕನಸು ಕಂಡು, ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಪ್ರಿಯಾಂಕಾಗೆ ಚಂದನವನದಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲು ತರುಣ್ ಸಾಥ್ ನೀಡಿದ್ದಾರೆ.
ಪುನೀತ್ ರಂಗಸ್ವಾಮಿ (Punith Rangaswamy) ನಿರ್ದೇಶನದ ಈ ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮ ಕಥೆ ಕನ್ನಡ, ತಮಿಳು ಮತ್ತು ತೆಲುಗಿನಲ್ಲೂ ಸಹ ಬಿಡುಗಡೆಯಾಗಲಿದೆ. ಈ ಸಿನಿಮಾಕ್ಕೆ ಅದ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್ ಮಾಡುತ್ತಿದ್ದು, ತರುಣ್ ಸುಧೀರ್ ಹಾಗೂ ಅಟ್ಲಾಂಟ ನಾಗರಾಜ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಪ್ರಿಯಾಂಕಾ ಆಚಾರ್ ಗೆ ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಮಹಾನಟಿಯಲ್ಲಿ ಅದ್ಭುತವಾಗಿ ನಟಿಸಿದ್ದ ನಟಿ, ಇನ್ನು ಮುಂದೆ ದೊಡ್ಡ ಪರದೆ ಮೇಲೆ ಹೇಗೆ ಕಾಣಬಹುದು ಎನ್ನುವ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಅಷ್ಟೇ ಅಲ್ಲ ಪ್ರಿಯಾಂಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಸಹ ಹಾರೈಸಿದ್ದಾರೆ.