ನಟನೆ ಜತೆಗೆ ನಿರ್ಮಾಣಕ್ಕಿಳಿದ ಮೇಘನಾ ರಾಜ್!
ನಟಿಯಾಗಿ ಈಗ ನಿರ್ಮಾಪಕಿಯಾದ ಮೇಘನಾ ರಾಜ್. ಕೈಯಲ್ಲಿ ಎರಡು ಸಿನಿಮಾ, ಸಖತ್ ಬ್ಯುಸಿಯಾದ ಸುಂದರಿ
ನಟಿ ಮೇಘನಾ ರಾಜ್ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಕಾಂತ ಕನ್ನಲ್ಲಿ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಶಬ್ಬ’ ಹಾಗೂ ಇನ್ನೂ ಹೆಸರಿಡದ ವಿಶಾಲ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರಗಳ ಪೈಕಿ ವಿಶಾಲ್ ನಿರ್ದೇಶನದ ಚಿತ್ರವನ್ನು ಪನ್ನಗಭರಣ ಹಾಗೂ ಮೇಘನಾ ರಾಜ್ ನಿರ್ಮಿಸಲಿದ್ದಾರೆ.
ಇದು ಮಹಿಳಾ ಪ್ರಧಾನ ಕತೆಯ ಸಿನಿಮಾ. ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿರಂಜೀವಿ ಸರ್ಜಾ ಆಸೆಯಂತೆ ಮೊದಲ ಹೆಜ್ಜೆಯಾಗಿ ತಮ್ಮ ನಟನೆಯ ಚಿತ್ರಕ್ಕೆ ಮೇಘನಾ ರಾಜ್ ನಿರ್ಮಾಪಕರಾಗುತ್ತಿದ್ದಾರೆ.
ಕಳೆದ ವರ್ಷ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದೇ ವಿಶಾಲ್ ನಿರ್ದೇಶನದ ಚಿತ್ರದಲ್ಲಿ ಮೇಘನಾ ರಾಜ್ ನಟನೆ ಘೋಷಣೆ ಆಗಿತ್ತು. ಈಗ ಕತೆಯಲ್ಲಿ ಒಂದಿಷ್ಟುಬದಲಾವಣೆಗಳನ್ನು ಮಾಡಿಕೊಂಡು ಹೊಸತನದ ಕತೆಯೊಂದಿಗೆ ಚಿತ್ರವನ್ನು ಘೋಷಿಸುವ ಜತೆಗೆ ನಿರ್ಮಾಪಕಿ ಆಗುತ್ತಿರುವ ಬಗ್ಗೆಯೂ ಅಧಿಕೃತವಾಗಿ ಮೇಘನಾ ರಾಜ್ ಹೇಳಿಕೊಂಡಿದ್ದಾರೆ.
ಡಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಮೇಘನಾ ಕಿರುತೆರೆ ಅಭಿಮಾನಿಗಳ ಮುಂದೆ ಬಂದಿದ್ದರು. ಪತಿ ಚಿರಂಜೀವಿ ಅಗಲಿಕೆಯ ನಂತರ ಮೇಘನಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿರಲಿಲ್ಲ.
ಡಾನ್ಸಿಂಗ್ ಶೋ ಮೂಲಕ ಸರ್ಜಾ ಕುಟುಂಬದ ಜೊತೆ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈ ಶೋ ಅದ್ಭುತವಾಗಿ ಮೂಡಿಬಂದಿತ್ತು. ಮೊದಲ ಜಡ್ಜ್ ಆಗಿದ್ದ ಮೇಘನಾ ಕಿರುತೆರೆ ಅಭಿಮಾನಿಗಳ ಮನಗೆದಿದ್ದರು.
ಮೇಘನಾ ರಾಜ್ ಹೊಸ ಸಿನಿಮಾಗೆ ಅನೇಕರು ಶುಭಾಶಯ ತಿಳಿಸುತ್ತಿದ್ದಾರೆ. ಅಭಿಮಾನಿಗಳು ಮತ್ತು ಸಿನಿ ಗಣ್ಯರು ಸಹ ವಿಶ್ ಮಾಡುತ್ತಿದ್ದಾರೆ. ಅಂದಹಾಗೆ ಮೇಘನಾ ಹೊಸ ಸಿನಿಮಾದಲ್ಲಿ ಯಾವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಇದೀಗ ಮೇಘನಾ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ರಿಯಾಲಿಟಿ ಶೋ ಮುಗಿಸಿ ಮೇಘನಾ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. 'ಕಳೆದ ವರ್ಷ ಅಕ್ಟೋಬರ್ ನಲ್ಲಿ ಅನೌನ್ಸ್ ಮಾಡಿದ್ದ ಸಿನಿಮಾಗೆ ಮತ್ತೆ ಕಿಕ್ ಸ್ಟಾರ್ಟ್ ಕೊಡಲಾಗಿದೆ. ಈ ಬಗ್ಗೆ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.