ಕುಟುಂಬದ ಜೊತೆ ಕಾಮಾಕ್ಯದೇವಿ ದರ್ಶನ ಪಡೆದ ನಟ ಜಗ್ಗೇಶ್, ಏನೀ ದೇವಾಲಯದ ವಿಶೇಷ?
ನವರಸ ನಾಯಕ ಜಗ್ಗೇಶ್ ಕುಟುಂಬ ಸಮೇತರಾಗಿ ಅಸ್ಸಾಂನ ಗುವಾಹಟಿಯಲ್ಲಿರುವ ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಕ್ಯ ದೇವಿ ಮಂದಿರಕ್ಕೆ ತೆರಳಿ ದೇವಿ ದರ್ಶನ ಮಾಡಿದ್ದಾರೆ. ಈ ದೇಗುಲದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.
ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ (Jaggesh) ಕುಟುಂಬ ಸಮೇತರಾಗಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯದೇವಿ ದರ್ಶನ ಪಡೆದಿದ್ದು, ಅಲ್ಲಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ನಟ ಜಗ್ಗೇಶ್ ಅವರು ಪತ್ನಿ ಪರಿಮಳ ಜಗ್ಗೇಶ್ ಮತ್ತು ಮಗ ಗುರುರಾಜ್ ಜೊತೆಗೆ ದೇವಿ ದರ್ಶನ ಪಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಜಗ್ಗೇಶ್ ಕಾಮಾಕ್ಯದೇವಿ ಮಂದಿರ (Kamakhya Devi Mandir) ಅಸ್ಸಾಂ ದರ್ಶನ ಪಡೆದಾಕ್ಷಣ, ಸರ್ವೇಜನಾಃಸುಖಿನೋಭವಂತು ಎಂದು ಬರೆದಿದ್ದಾರೆ.
ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಟೆ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ರಾಮನಾಮ ಭಜನೆ ಮಾಡುವ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿ ಸುದ್ದಿಯಾಗಿದ್ದರು, ಇದೀಗ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿ ಸುದ್ದಿಯಾಗಿದ್ದಾರೆ.
ಭಾರತದ ವಿಶಿಷ್ಟ ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಕ್ಯ ದೇವಿ ಮಂದಿರದ ವಿಶೇಷತೆ ಬಗ್ಗೆ ನೀವು ತಿಳಿಯಲೇಬೇಕು. ಕಾಮಾಕ್ಯ ದೇವಿಯ ದೇವಾಲಯವು ಭಾರತದಲ್ಲಿ ನೆಲೆಗೊಂಡಿರುವ 51 ಶಕ್ತಿಪೀಠಗಳಲ್ಲಿ ಒಂದು. ಪೌರಾಣಿಕ ನಂಬಿಕೆಯ (Mythological Belief) ಪ್ರಕಾರ, ಸತಿ ದೇವಿಯ ಯೋನಿ ಭಾಗ ಇಲ್ಲಿ ಬಿದ್ದಿದೆ. ಅದಕ್ಕಾಗಿಯೇ ಕಾಮಾಕ್ಯ ದೇವಾಲಯದಲ್ಲಿ ದೇವಿಯ ಯೋನಿ ಪೂಜೆಯನ್ನು ಮಾಡಲಾಗುತ್ತದೆ.
ಇನ್ನು ಈ ದೇವಾಲಯದಲ್ಲಿ ದೇವಿಯ ಮೂರ್ತಿ ಇಲ್ಲ, ಬದಲಾಗಿ ಯೋನಿಯ ಪೂಜೆ ಮಾಡಲಾಗುತ್ತೆ. ಜೊತೆಗೆ ಕಾಮಾಕ್ಯ ದೇವಿ ವರ್ಷಕ್ಕೊಮ್ಮೆ ಋತುಮತಿಯಾಗುವ (Periods) ಸ್ಥಳವೂ ಇದಾಗಿದೆ. ದೇವಿಯು ಋತುಮತಿಯಾದಾಗ, ದೇವಾಲಯವನ್ನು ಮೂರು ದಿನಗಳವರೆಗೆ ದೇವಾಲಯವನ್ನು ಮುಚ್ಚಲಾಗುತ್ತದೆ, ಇಲ್ಲಿ ಯಾರಿಗೂ ಭೇಟಿಗೆ ಅವಕಾಶ ಇಲ್ಲ.
ದೇವಿಗೆ ಪ್ರತಿವರ್ಷ ಜೂನ್ ತಿಂಗಳಲ್ಲಿ ಋತುಸ್ರಾವ ಆಗುತ್ತೆ ಎನ್ನಲಾಗುತ್ತದೆ. ಅದರಿಂದಾಗಿಯೇ ಮೂರು ದಿನಗಳ ಕಾಲ ದೇವಸ್ಥಾನದ ಬಳಿಯಲ್ಲಿ ಹರಿಯುತ್ತಿರುವ ಬ್ರಹ್ಮಪುತ್ರ ನದಿಯಲ್ಲಿ ನೀರು ಕೆಂಪು ಬಣ್ಣದಲ್ಲಿ ಹರಿಯುತ್ತದೆ.
kamakhya temple
ಅಷ್ಟೇ ಯಾಕೆ ಈ ದೇಗುಲದಲ್ಲಿ ಕೆಂಪು ಬಟ್ಟೆಯಲ್ಲಿ ಭಕ್ತಾದಿಗಳಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಅದೇನೆಂದರೆ ದೇವಿಗೆ ಮೂರು ದಿನಗಳ ಕಾಲ ಋತುಸ್ರಾವ ಆಗುವ ಸಂದರ್ಭದಲ್ಲಿ ದೇಗುಲದಲ್ಲಿ ಪೂರ್ತಿಯಾಗಿ ಬಿಳಿ ಬಟ್ಟೆ ಹರಡಲಾಗುತ್ತದೆ.
ದೇವಿಯ ಋತುಚಕ್ರದಿಂದ ನೆನೆದ ಬಿಳಿ ಬಟ್ಟೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದನ್ನೇ ಅಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಈ ಬಟ್ಟೆಯ ಪ್ರಸಾದವನ್ನು ಅಂಬುವಾಚಿ ಬಟ್ಟೆ (Ambuvachi cloths) ಎಂದು ಕರೆಯಲಾಗುತ್ತದೆ.
ಇನ್ನು ಈ ಮೂರು ದಿನಗಳ ಕಾಲ ದೇಗುಲದಲ್ಲಿ ಭಾರಿ ಹಬ್ಬ ನಡೆಯುತ್ತದೆ, ಅದಕ್ಕಾಗಿ ಸಾಧುಸಂತರು, ಅಘೋರಿ ಬಾಬಾಗಳು (Aghori Baba) ದೇಶದ ಮೂಲೆ ಮೂಲೆಗಳಿಂದ ಹರಿದು ಬರುತ್ತಾರೆ. ಇದೇ ಅಂಬುಬಾಚಿ ಮೇಳ. ಇಂತಹ ಪುಣ್ಯ ಸ್ಥಳಕ್ಕೆ ಇದೀಗ ಜಗ್ಗೇಶ್ ಕುಟುಂಬ ಸಮೇತ ಭೇಟಿಯಾಗಿ ದೇವಿಯ ದರ್ಶನ ಭಾಗ್ಯ ಪಡೆದಿದ್ದಾರೆ.