'ಡಿ ಬಾಸ್' ಪುತ್ರ ವಿನೀಶ್‌ಗೆ ಹುಟ್ಟುಹಬ್ಬದ ಸಂಭ್ರಮ: ಅವನ ಉತ್ಸಾಹವನ್ನು ಬಣ್ಣಿಸಲು ಸಾಧ್ಯವಿಲ್ಲ ಎಂದ ವಿಜಯಲಕ್ಷ್ಮೀ!
ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗ ಎಂಥದ್ದು ಅಂತ ಗೊತ್ತೇಯಿದೆ. ದರ್ಶನ್ ಹುಟ್ಟುಹಬ್ಬ ಬಂದ್ರೆ ಅಂದೇ ಅಭಿಮಾನಿಗಳಿಗೆ ದೀಪಾವಳಿ, ಯುಗಾದಿ ಸಂಭ್ರಮ. ಇದೀಗ ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬಕ್ಕೆ ಅವರ ತಾಯಿ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.
ನಟ ದರ್ಶನ್ ಪುತ್ರ ವಿನೀಶ್ ಮಂಗಳವಾರ 15ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ದರ್ಶನ್ ಅಭಿಮಾನಿಗಳು ಮತ್ತು ಕುಟುಂಬ ವಿನೀಶ್ ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ವಿನೀಶ್ ತಾಯಿ ವಿಜಯಲಕ್ಷ್ಮಿ ಪುತ್ರನಿಗೆ ವಿಭಿನ್ನವಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಚಾರ್ಟಡೆಡ್ ಫ್ಲೈಟ್ ಮುಂದೆ ವಿನೀಶ್ ನಿಂತಿರುವ ಫೋಟೋವನ್ನೂ ಅದರ ಜೊತೆ ಶೇರ್ ಮಾಡಿದ್ದಾರೆ. ‘ನನ್ನ ಲಿಟಲ್ ಬಾಯ್‌ಗೆ 15 ತುಂಬುತ್ತಿದೆ. ಅವನು ಬೆಳೆಯುತ್ತಿರುವುದನ್ನು ನೋಡಿದಾಗ ಅವನೊಂದಿಗಿನ ಹಳೆ ನೆನಪುಗಳೆಲ್ಲ ಮರುಕಳಿಸುತ್ತಿವೆ.
ಚುರುಕಾದ, ಹಾಸ್ಯ ಪ್ರಜ್ಞೆಯ ಮತ್ತು ಸುಂದರ ಮೊಗದ ಮಿಶ್ರಣದಂತೆ, ತರುಣನಾಗಿ ಬೆಳೆಯುತ್ತಿದ್ದಾನೆ. ಅವನ ಉತ್ಸಾಹವನ್ನು ಬಣ್ಣಿಸಲು ಸಾಧ್ಯವಾಗುವುದೇ ಇಲ್ಲ’ ಎಂದು ವಿನೀಶ್ ವ್ಯಕ್ತಿತ್ವವನ್ನು ಹಲವು ಸಾಲುಗಳಲ್ಲಿ ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ವಿನೀಶ್ ಕುರಿತಾಗಿ ಹಲವಾರು ಪೋಸ್ಟುಗಳು ಹರಿದಾಡುತ್ತಿವೆ. ದರ್ಶನ್ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿನೀಶ್‌ಗೆ ಹುಟ್ಟು ಹಬ್ಬದ ಶುಭಾಶಯ ಕೋರುತ್ತಿದ್ದಾರೆ. ದರ್ಶನ್ ಜೊತೆ ಮತ್ತೆ ಮತ್ತೆ ಸಿನಿಮಾಗಳಲ್ಲಿ ನಟಿಸಲಿ ಎಂದು ಹಾರೈಸುತ್ತಿದ್ದಾರೆ.
ಸದ್ಯ ಹೈಸ್ಕೂಲ್‌ನಲ್ಲಿ ಓದುತ್ತಿರುವ ವಿನೀಶ್ ದರ್ಶನ್ ಮುಂದೊಂದು ದಿನ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಅಭಿಮಾನಿಗಳು ಕೂಡ ಜ್ಯೂ. ದರ್ಶನ್‌ನ ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.