ಕಸಾಯಿಖಾನೆಯಿಂದ ರಕ್ಷಿಸಿದ ಹಸುಗಳ ಗೋಶಾಲೆಗೆ ಹೆಂಡತಿ, ಮಕ್ಕಳೊಂದಿಗೆ ಭೇಟಿಕೊಟ್ಟ ಧ್ರುವ ಸರ್ಜಾ
ನಟ ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಮತ್ತು ಮಕ್ಕಳೊಂದಿಗೆ ಕಸಾಯಿಖಾನೆಗೆ ಹೋಗುವ ಹಸುಗಳನ್ನು ರಕ್ಷಿಸಿ ಪಾಲನೆ ಮಾಡುವ ಗೋಶಾಲೆಗೆ ಭೇಟಿ ನೀಡಿ, ಹಸುಗಳಿಗೆ ಮೇವು ತಿನ್ನಿಸಿ, ಮಕ್ಕಳನ್ನು ಹಸುಗಳೊಂದಿಗೆ ಆಟವಾಡಿಸಿದ್ದಾರೆ. ಧ್ರುವ ಸರ್ಜಾ ಕುಟುಂಬದವರು ಹಸುಗಳಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಸ್ಯಾಂಡಲ್‌ವುಡ್ ಆಕ್ಷನ್ ಪ್ರಿನ್ಸ್ ಖ್ಯಾತಿಯ ನಟ ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಹಾಗೂ ಮಕ್ಕಳಾದ ಹಯಗ್ರೀಯ ಮತ್ತು ರುದ್ರಾಕ್ಷಿಯನ್ನು ಕರೆದುಕೊಂಡು ಕಸಾಯಿಖಾನೆಗೆ ಹೋಗುವ ಹಸುಗಳನ್ನು ಸಂರಕ್ಷಣೆ ಮಾಡಿ ಪಾಲನೆ ಮಾಡುತ್ತಿರುವ ಗೋಶಾಲೆಗೆ ಭೇಟಿ ನೀಡಿ ಹಸುಗಳಿಗೆ ಮೇವು ತಿನ್ನಿಸಿ, ಮಕ್ಕಳನ್ನು ಹಸುಗಳೊಂದಿಗೆ ಆಟವಾಡಿಸಿದ್ದಾರೆ.
ಧ್ರುವ ಸರ್ಜಾ ಅವರು ತಮ್ಮ ಮಾವನಂತೆ ಮಹಾನ್ ದೈವಿಕ ಭಕ್ತರಾಗಿದ್ದಾರೆ. ಆಂಜನೇಯನ ಪರಮ ಭಕ್ತರಾಗಿರುವ ಧ್ರುವ ಅವರು ಹಿಂದೂ ಧರ್ಮ ಪಾಲನೆಯಲ್ಲಿ ಒಂದು ಹೆಜ್ಜೆ ಮುಂದಿರುತ್ತಾರೆ. ಸರ್ಜಾ ಕುಟುಂಬದಲ್ಲಿ ಧ್ರುವ ಸೇರಿದಂತೆ ಎಲ್ಲರಿಗೂ ಪ್ರಾಣಿ ಪ್ರೀತಿ ಹೆಚ್ಚಾಗಿದೆ. ಹೀಗಾಗಿ, ಮಕ್ಕಳಿಗೂ ಚಿಕ್ಕಂದಿನಲ್ಲಿಯೇ ಪ್ರಾಣಿಗಳ ಮೇಲಿನ ಪ್ರೀತಿಯ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಇಬ್ಬರು ಮಕ್ಕಳನ್ನು ಗೋ ಶಾಲೆಗೆ ಕರೆದುಕೊಂಡು ಬಂದಿದ್ದಾರೆ.
ಬೆಂಗಳೂರಿನ ಕೋರಮಂಗಲದ 6ನೇ ಬ್ಲಾಕ್‌ನಲ್ಲಿರುವ ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದ ವತಿಯಿಂದ ನಡೆಸಲಾಗುತ್ತಿರುವ ಗೋ ಶಾಲೆಗೆ ಭೇಟಿ ನೀಡಿದರು. ಇಲ್ಲಿಗೆ ಆಗಮಿಸುತ್ತಿದ್ದಂತೆ ಗೋಶಾಲೆಯ ಸಿಬ್ಬಂದಿ ಧ್ರುವ ಸರ್ಜಾ ಕುಟುಂಬವನ್ನು ಸ್ವಾಗತಿಸಿದರು.
ಗೋಶಾಲೆಯೊಳಗೆ ಹೋದ ಧ್ರುವ ಸರ್ಕಾ ಅಲ್ಲಿದ್ದ ನಾಟಿ ಹಸುಗಳನ್ನು ನೋಡಿ ದಂಗಾಗಿದ್ದಾರೆ. ನೂರಾರು ಹಸುಗಳು ಅಲ್ಲಿದ್ದು, ಎಲ್ಲ ಹಸುಗಳಿಗೂ ಮೇವು ಹಾಕುತ್ತಾ ನಿರ್ವಹಣೆ ಮಾಡುವ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.
ಹಸುಗಳ ಬಗ್ಗೆ ವಿಚಾರಿಸಿದಾಗ ಇಲ್ಲಿರುವ ಎಲ್ಲ ಹಸುಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸಿ ರಕ್ಷಣೆ ಮಾಡಿದ ಹಸುಗಳಾಗಿವೆ. ಕೆಲವೊಂದು ಹಸುಗಳನ್ನು ಹಿಂದೂ ಸಂಘಟನೆಗಳು ಹಾಗೂ ಸರ್ಕಾರದಿಂದ ಸಂರಕ್ಷಣೆ ಮಾಡಲಾಗಿದೆ. ಪ್ರಾಣಿ ದಯಾ ಸಂಘದಿಂದ ಈ ಗೋಶಾಲೆ ನಿರ್ವಹಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ.
ಹೆಂಡತಿ ಪ್ರೇರಣಾ ಮತ್ತು ಮಕ್ಕಳನ್ನು ಕರೆದುಕೊಂಡು ಗೋಶಾಲೆಯೊಳಗೆ ಹೋದ ಧ್ರುವ ಸರ್ಜಾ ಅವರು ಸಣ್ಣ ಸಣ್ಣ ಕರುಗಳೊಂದಿಗೆ ಮಕ್ಕಳನ್ನು ಆಟವಾಡಿಸಿದ್ದಾರೆ. ಹಸುಗಳನ್ನು ಮುಟ್ಟಿಸಿ ಮಕ್ಕಳಿಗೆ ಪ್ರಾಣಿ ಪ್ರೀತಿಯನ್ನು ಮೂಡಿಸಿದ್ದಾರೆ. ಇನ್ನು ಮಕ್ಕಳು ಹಸುಗಳನ್ನು ಮುಟ್ಟಿ ಸಂತಸಪಟ್ಟಿದ್ದಾರೆ.
ಇಲ್ಲಿ ಹಸುಗಳೊಂದಿಗೆ ಮಕ್ಕಳನ್ನು ಆಟವಾಡಿಸಿ, ಕೆಲವು ಹಸುಗಳಿಗೆ ಮೇವು ತಿನ್ನಿಸಿ ಜೊತೆಗೆ ತಾವು ಮನೆಯಿಂದ ಹಸುಗಳಿಗಾಗಿ ಮಾಡಿಕೊಂಡು ಬಂದಿದ್ದ ಆಹಾರವನ್ನು ತಿನ್ನಿಸಿ ಖುಷಿಪಟ್ಟರು.
ಸಿನಿಮಾದ ಶೂಟಿಂಗ್‌ನಿಂದ ಕುಟುಂಬಕ್ಕಾಗಿ ಬಿಡುವು ಪಡೆದುಕೊಳ್ಳುವ ಧ್ರುವ ಅವರು ಹೆಂಡತಿ ಮಕ್ಕಳೊಂದಿಗೆ ಆಗಾಗ ಕ್ಯಾಮೆರಾಗಳ ಕಣ್ಣಿಗೆ ಸೆರೆ ಸಿಗುತ್ತಾರೆ. ಎಲ್ಲಿಯೇ ಹೋದರೂ ಹಿಂದೂ ಧರ್ಮದ ಪಾಲನೆ ಮತ್ತು ಪ್ರಾಣಿ ಪ್ರೀತಿಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
ನಂತರ ಹೆಂಡತಿ ಪ್ರೇರಣಾ ಮತ್ತು ಮಕ್ಕಳೊಟ್ಟಿಗೆ ಸೇರಿ ಹಸುಗಳಿಗೆ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡರು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಇತ್ತೀಚೆಗೆ ಬಿಡುಗಡೆ ಆಗಿದ್ದ ಮಾರ್ಟಿನ್ ಸಿನಿಮಾ ಮಿಶ್ರ ಪ್ರತಿಕ್ರಿಯೆ ಕಂಡಿದೆ.