ಮದುವೆ ಆಗ್ತಿದೆ ಇಬ್ಬರು ಮಾಜಿ ಗೆಳೆಯರನ್ನು ಹೇಗೆ ಮರೆಯಲಿ ಎಂದು ಕೇಳಿದ ಯುವತಿಗೆ ನೆಟ್ಟಿಗರು ಕೊಟ್ರು ಟಿಪ್ಸ್
ಶೀಘ್ರದಲ್ಲಿಯೇ ನನ್ನ ಮದುವೆ ಆಗ್ತಿದೆ. ಆದರೆ ಹಳೆಯ ಗೆಳೆಯನನ್ನು ಹೇಗೆ ಮರೆಯಲಿ ಎಂದು ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ. ಈ ಪ್ರಶ್ನೆಗೆ ನೆಟ್ಟಿಗರು ಕೆಲವು ಟಿಪ್ಸ್ ನೀಡಿದ್ದಾರೆ.
ಇಂದು ಹದಿಹರೆಯದ ವಯಸ್ಸಿನಲ್ಲಿಯೇ ಪ್ರೇಮದ ಅನುರಾಗ ಅರಳುತ್ತದೆ. ಈ ಪ್ರೇಮ ಎಂಬ ಹೂ ಬಹುತೇಕರ ಜೀವನದಲ್ಲಿ ಆಕರ್ಷಣೆಯಾಗಿರುತ್ತದೆ. ಕೆಲವರ ಪ್ರೀತಿ ಮಾತ್ರ ಜೀವನದ ಕೊನೆಯವರೆಗೂ ಜೊತೆಯಲ್ಲಿರುತ್ತದೆ. ಆದ್ರೆ ಮೊದಲ ಪ್ರೀತಿ ಅದು ಜೀವನದಲ್ಲಿ ಹಚ್ಚ ಹಸಿರು ಆಗಿರುತ್ತೆ ಎಂದು ಪ್ರೇಮಿಗಳು ಹೇಳುತ್ತಿರುತ್ತಾರೆ.
ಮದುವೆ ಅಂತಹ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಲಾಗುತ್ತದೆ. ಅದರಲ್ಲಿಯೂ ಹಳೆ ಪ್ರೀತಿಯ ಛಾಯೆ ಇದ್ದರಂತೂ ನೂರು ಬಾರಿ ಯೋಚನೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ಹಳೆ ಪ್ರೀತಿಯಿಂದ ಸಮಸ್ಯೆ ಆಗದಂತೆ ನೋಡಿಕೊಳ್ಳೋದು ಹೇಗೆ ಎಂಬುದನ್ನು ಯೋಚಿಸಲಾಗುತ್ತದೆ.
ಹಳೆಯ ಪ್ರೀತಿಯಿಂದ ಭವಿಷ್ಯದಲ್ಲಿ ಯಾವುದೇ ತೊಂದರೆ ಇಲ್ಲ ಅಂದಾಗ ಮಾತ್ರ ಮದುವೆ ಬಂಧನಕ್ಕೊಳಗಾಗುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ವಿಚಿತ್ರ ಸಮಸ್ಯೆಯೊಂದನ್ನು ಹೇಳಿಕೊಂಡಿದ್ದಾಳೆ. ಆ ಸಮಸ್ಯೆಗೆ ನೆಟ್ಟಿಗರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದೇನೂ ಅಂತೀರಾ?
ಹಳೆಯ ಇಬ್ಬರು ಗೆಳೆಯರನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಆದರೆ ಮದುವೆಯಾಗುತ್ತಿರುವ ಹುಡುಗನನ್ನು ಸಹ ಇಷ್ಟಪಡುತ್ತೇನೆ. ಮೂವರು ಒಳ್ಳೆಯ ವ್ಯಕ್ತಿಗಳು. ಮಾಜಿ ಗೆಳೆಯರನ್ನು ಮರೆಯಲಾಗುತ್ತಿಲ್ಲ ಎಂದು ತನ್ನ ಸಮಸ್ಯೆಯನ್ನು ಯುವತಿ ಸೋಶಿಯಲ್ ಮೀಡಿಯಾ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ಮಿರರ್ ಯುಕೆಯ ವರದಿ ಪ್ರಕಾರ, ಮದುವೆ ಆಗ್ತಿರೋ ಹುಡುಗನನ್ನು ಹಳೆಯ ಇಬ್ಬರ ಜೊತೆ ಹೋಲಿಕೆ ಮಾಡಲು ಆಗಲ್ಲ. ಇವನು ತುಂಬಾ ವಿಶೇಷ ಮತ್ತು ಭಿನ್ನ. ನನ್ನ ಹಳೆಯ ಗೆಳೆಯರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ಅವನಿಗಿಲ್ಲ. ಮದುವೆ ಆಗುತ್ತಿರೋ ಯುವಕನೊಂದಿಗೆ ಒಂದು ವರ್ಷ ಡೇಟ್ ಮಾಡಿದ್ದಾನೆ. ಇಬ್ಬರ ಮಧ್ಯೆ ಸಣ್ಣಪುಟ್ಟ ಕೋಪ ಮುನಿಸು ಸಹ ಆಗಿದೆ. ಆದರೆ ಇವನು ತುಂಬಾ ಒಳ್ಳೆಯವನು. ನಮ್ಮಿಬ್ಬರ ಆಲೋಚನೆಗಳು ಹೊಂದಾಣಿಕೆ ಆಗುತ್ತವೆ ಎಂದು ಯುವತಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾಳೆ.
ಮದುವೆಯಾಗುತ್ತಿರೋ ಹುಡುಗ ನನ್ಮೇಲೆ ಆಗಾಧವಾದ ಪ್ರೇಮವನ್ನು ಇರಿಸಿಕೊಂಡಿದ್ದಾನೆ. ಮದುವೆಗೆ ಇಬ್ಬರ ಕುಟುಂಬದಿಂದಲೂ ಒಪ್ಪಿಗೆ ಸಿಕ್ಕಿದೆ. ನಾವಿಬ್ಬರು ಮದುವೆಯಾಗುತ್ತಿದ್ದೇವೆ. ಆದರೆ ನಾನು ಮಾಜಿ ಗೆಳೆಯರ ಜೊತೆ ಕಳೆದ ದಿನಗಳು ಮತ್ತೆ ಮತ್ತೆ ಕಣ್ಮುಂದೆ ಬರುತ್ತವೆ ಎಂದು ತನ್ನ ಸಮಸ್ಯೆಯನ್ನು ಯುವತಿ ಹೇಳಿಕೊಂಡಿದ್ದಾಳೆ.
ಇದೀಗ ಮೊದಲ ಗೆಳೆಯನ ಜೊತೆ ನಾನು ಯಾವುದೇ ಸಂಪರ್ಕ ಹೊಂದಿಲ್ಲ. ಎರಡನೇ ಗೆಳೆಯನು ದೂರವಾಗಿದ್ದಾನೆ. ಆದರೆ ನಾನು ಇಬ್ಬರ ಜೊತೆಯೂ ಹೆಚ್ಚು ಸಮಯ ಕಳೆದಿಲ್ಲ. ಇಬ್ಬರು ಪರ್ಫೆಕ್ಟ್ ಅಲ್ಲ ಎಂದು ದೂರವಾದೆ. ಮದುವೆ ಆಗುತ್ತಿರುವ ಹುಡುಗ ಒಳ್ಳೆಯವನು. ಆದರೂ ನನ್ನಲ್ಲಿ ಒಂದು ರೀತಿಯ ಭಯ ಮತ್ತು ಆತಂಕ ಆಗ್ತಿದೆ ಎಂದು ಯುವತಿ ಬರೆದುಕೊಂಡಿದ್ದಾಳೆ.
ಯುವತಿಯ ಪೋಸ್ಟ್‌ಗೆ ಸಲಹೆ ನೀಡಿರುವ ನೆಟ್ಟಿಗರು, ಒಂದಕ್ಕಿಂತ ಹೆಚ್ಚು ಸಂಬಂಧದಲ್ಲಿದ್ದಾಗ ಇಂತಹ ಗೊಂದಲ ಆಗೋದು ಸಹಜ. ಇನ್ನು ಸ್ವಲ್ಪ ಸಮಯ ತೆಗೆದುಕೊಂಡು ನಿರ್ಣಯಿಸಿ ಮದುವೆ ಬಗ್ಗೆ ಯೋಚಿಸಿ ಎಂದಿದ್ದಾರೆ. ಮತ್ತೊಬ್ಬರು ಎಲ್ಲಾ ಗೊಂದಲಗಳು ಬಗೆಹರಿದಾಗ ಮಾತ್ರ ಹೊಸ ಜೀವನಕ್ಕೆ ಕಾಲಿಡೋದು ಒಳ್ಳೆಯದು ಎಂದಿದ್ದಾರೆ.