ಉರಿಗೌಡ, ನಂಜೇಗೌಡ ಆಧಾರ್ ಕಾರ್ಡ್, ವೋಟರ್ ಐಡಿ ಬಿಡುಗಡೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕೋಲಾರ ತಂಡ ವ್ಯಂಗ್ಯ
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಉರಿಗೌಡ ನಂಜೇಗೌಡ ವಿಚಾರದಲ್ಲಿ ರಾಜಕೀಯ ಆರೋಪ - ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಉರಿಗೌಡ - ನಂಜೇಗೌಡ ಸಿನಿಮಾಗೆ ಬ್ರೇಕ್ ಹಾಕುವುದಾಗಿ ಸಚಿವ ಹಾಗೂ ನಿರ್ಮಾಪಕ ಮುನಿರತ್ನ ಹೇಳಿದ್ದರೂ ಸಹ, ಈ ವಿಚಾರ ಮಾತ್ರ ತಣ್ಣಗಾಗುತ್ತಿಲ್ಲ. ಏಕೆಂದರೆ ಉರಿಗೌಡ - ನಂಜೇಗೌಡ ಎಂಬುವರೇ ಟಿಪ್ಪುವನ್ನು ಹತ್ಯೆ ಮಾಡಿದರು ಎಂದು ಬಿಜೆಪಿ ಸ್ಪಷ್ಟನೆ ನೀಡುತ್ತಲೇ ಇದ್ದರೆ, ಇತರೆ ಪಕ್ಷಗಳು ಈ ಬಗ್ಗೆ ಕಿಡಿ ಕಾರುತ್ತಿದೆ. ಈ ವಿಚಾರಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಸಿದ್ದರಾಮಯ್ಯ ಕೋಲಾರ ಟೀಮ್‌ನಿಂದ ಉರಿಗೌಡ ನಂಜೇಗೌಡ ವಿಚಾರದಲ್ಲಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ. ಪ್ರಮುಖವಾಗಿ, ಉನ್ನತ ಶಿಕ್ಷಣ ಸಚಿವ ಹಾಗೂ ಮಲ್ಲೇಶ್ವರದ ಶಾಸಕ ಅಶ್ವತ್ಥನಾರಾಯಣ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿಯನ್ನು ಕುಟುಕಿದೆ.
ಸಿದ್ದರಾಮಯ್ಯ ಕೋಲಾರ ಟೀಮ್‌ನಿಂದ ಉರಿಗೌಡ ನಂಜೇಗೌಡ ವಿಚಾರಕ್ಕೆ ಕುಟುಕಿದ್ದು, ಉರಿಗೌಡ ನಂಜೇಗೌಡರ ಹೆಸರಿನಲ್ಲಿ ಆಧಾರ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಅನೇಕ ಸಂಶೋಧನೆ ಬಳಿಕ ಉರಿಗೌಡ, ನಂಜೇಗೌಡರ ಆಧಾರ್ ಕಾರ್ಡ್ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದೆ.
ಅದರ ಪ್ರಕಾರ, ನಂಜೇಗೌಡ, ಉರಿಗೌಡ ಆಧಾರ್ ಮಾಹಿತಿ ಹೀಗಿದೆ.. ತಾಯಿ: ಅಶ್ವತ್ಥ ನಾರಾಯಣ, ತಂದೆ: ಸಿಟಿ ರವಿ, ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ, ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರ, ಆಧಾರ್ ಸಂಖ್ಯೆ: 420 420 420 420 ಎಂದು ಕೋಲಾರ ನಮ್ಮೂರು, ಸಿದ್ದರಾಮಯ್ಯ ನಮ್ಮೋರು ಟೀಂ ಆಧಾರ್ ಕಾರ್ಡ್ ಬಿಡುಗಡೆ ಮಾಡಿದೆ.
ಜತೆಗೆ, ಉರಿಗೌಡ, ನಂಜೇಗೌಡ ಆಧಾರ್ ಕಾರ್ಡ್ ಬಳಿಕ ವೋಟರ್ ಐಡಿಯನ್ನು ಸಹ ಬಿಡುಗಡೆ ಮಾಡಿದೆ. ಚುನಾವಣಾ ಆಯೋಗದ ವೋಟರ್ ಐಡಿ ಮಾದರಿಯಲ್ಲಿ ಎಡಿಟ್ ಮಾಡಿದ್ದು, ಸಿದ್ದರಾಮಯ್ಯ ಅವರ ಚುನಾವಣಾ ಸ್ಟ್ರಾಟಜಿ ಟೀಮ್ ಬಿಜೆಪಿಗೆ ಈ ರೀತಿ ಕೌಂಟರ್ ನೀಡಿದೆ.
ಉರಿಗೌಡ - ನಂಜೇಗೌಡ ಸಿನಿಮಾಗೆ ಬ್ರೇಕ್ ಹಾಕುವುದಾಗಿ ಸಚಿವ ಹಾಗೂ ನಿರ್ಮಾಪಕ ಮುನಿರತ್ನ ಹೇಳಿದ್ದರೂ ಸಹ, ಈ ವಿಚಾರ ಮಾತ್ರ ತಣ್ಣಗಾಗುತ್ತಿಲ್ಲ.
ಈ ಮಧ್ಯೆ, ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿಗೆ ಭೇಟಿ ನೀಡಿದ್ದು, ಈ ವೇಳೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ 4ನೇ ಗ್ಯಾರಂಟಿಯನ್ನು ಬಿಡುಗಡೆ ಮಾಡಿದೆ. ಪದವಿ ಮಾಡಿದ ನಿರುದ್ಯೋಗಿಗಳಿಗೆ 3 ಸಾವಿರ ರೂ. ಭತ್ಯೆ ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ಭತ್ಯ ಎಂದು ಘೋಷಣೆ ಮಾಡಿದ್ದಾರೆ.